ಛತ್ತೀಸ್‌ಗಡ: 'ಅಮರ್ ಜವಾನ್ ಜ್ಯೋತಿ'ಗೆ ರಾಹುಲ್ ಗಾಂಧಿ ಶಂಕು ಸ್ಥಾಪನೆ
ರಾಯಪುರ, ಫೆ. 3: ಕರ್ತವ್ಯದ ಸಂದರ್ಭ ತಮ್ಮ ಜೀವ ಕಳೆದುಕೊಂಡ ಯೋಧರು ಹಾಗೂ ಭದ್ರತಾ ಸಿಬ್ಬಂದಿಗೆ ಗೌರವ ಸೂಚಕವಾಗಿ ‘ಅಮರ್ ಜವಾನ್ ಜ್ಯೋತಿ’ ರೀತಿಯಲ್ಲೇ ಶಾಶ್ವತ ಜ್ವಾಲೆ ಬೆಳಗಿಸಲು ಇಲ್ಲಿ ನಿರ್ಮಿಸಲಿರುವ ಸ್ಮಾರಕಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು.
ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಇದ್ದ ‘ಅಮರ್ ಜವಾನ್ ಜ್ಯೋತಿ’ಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ (ಎನ್‌ಡಬ್ಲುಎಂ)ಜ್ಯೋತಿಯೊಂದಿಗೆ ಕೇಂದ್ರ ಸರಕಾರ ವಿಲೀನಗೊಳಿಸಿರುವುದರ ಬಗ್ಗೆ ರಾಹುಲ್ ಗಾಂಧಿ, ಚತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಪ್ರತಿಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದರು.
ಇಂಡಿಯಾ ಗೇಟ್‌ನಲ್ಲಿರುವ ‘ಅಮರ್ ಜವಾನ್ ಜ್ಯೋತಿ’ಯನ್ನು ತೆಗೆದಿರುವುದು ಹಾಗೂ ಅದನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ವಿಲೀನಗೊಳಿಸಿರುವುದು ತನಗೆ ನೋವು ತಂದಿದೆ ಎಂದು ಛತ್ತೀಸ್‌ಗಡದ ಮುಖ್ಯಮಂತ್ರಿ ಹೇಳಿದ್ದರು.
ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ಸೂಚಕವಾಗಿ ಇಲ್ಲಿನ ಮಾನಾದಲ್ಲಿರುವ ‘ಚೈತಿ ವಾಹಿನಿ ಛತ್ತೀಸ್‌ಗಡ ಶಸಸ್ತ್ರ ಪಡೆ’ ಆವರಣದಲ್ಲಿ ಈ ಶಾಶ್ವತ ಜ್ಯೋತಿಯನ್ನು ಬೆಳಗಿಸಲಾಗುವುದು ಎಂದು ಛತ್ತೀಸ್‌ಗಡ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.