×
Ad

‘ಸೆರಗು ತೆರಿಗೆ’ ಹೇರಲು ಹೊರಟಿದ್ದಾರೆಯೇ?

Update: 2022-02-05 00:05 IST
ಕೇರಳದಲ್ಲಿ ಸ್ತನ ತೆರಿಗೆಯನ್ನು ವಿರೋಧಿಸಿ ರವಿಕೆ ತೊಟ್ಟ ಕಾರಣಕ್ಕೆ, ತನ್ನ ಸ್ತನವನ್ನೇ ಕತ್ತರಿಸಿ ಕೊಟ್ಟ ನಂಗೇಲಿಯ ಪ್ರತಿಮೆ.

ಸ್ಕಾರ್ಫ್ ನಿಷೇಧದ ಒಂದು ಪರಿಣಾಮವನ್ನು ಊಹಿಸಿ ನೋಡಿ. ಇದು ಕೆಲವು ಬಂಡವಾಳಶಾಹಿಗಳಿಗೆ ವ್ಯಾಪಾರದ ಒಂದು ಅವಕಾಶವಾಗಿ ಬಿಡುತ್ತದೆ. ಅವರು, ಸ್ಕಾರ್ಫ್‌ಗೆ ಅನುಮತಿ ಇರುವ ಮತ್ತು ಕೇವಲ ಒಂದೇ ಸಮಾಜದವರು ಕಲಿಯುವ ಎಕ್ಸ್‌ಕ್ಲೂಸಿವ್ ಖಾಸಗಿ ಧಾರ್ಮಿಕ ಶಾಲೆಗಳನ್ನು ಸ್ಥಾಪಿಸುತ್ತಾರೆ. ಈ ಮೂಲಕ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಸಮಸ್ತ ಸಮಾಜವೇ ಸೇರಿ ಪ್ರಧಾನಧಾರೆಯಿಂದ ದೂರ ದಬ್ಬಿದಂತಾಗುತ್ತದೆ. ಹಲವಾರು ಜಾತಿ, ವರ್ಗ ಮತ್ತು ಸಮುದಾಯಗಳಿರುವ ಸಮಾಜದಲ್ಲಿ ಕೇವಲ ಒಂದು ವರ್ಗದವರಿಗೆ ಮೀಸಲಾಗಿರುವ ಶಾಲೆಗಳಿಂದ ಸಮಾಜಕ್ಕೆ ಯಾವುದೇ ಹಿತವಾಗುವುದಿಲ್ಲ. ಅದು ಸಮಾಜದ ನಿರ್ದಿಷ್ಟ ವರ್ಗಗಳನ್ನು ಅವರದೇ ಸಮಾಜದಲ್ಲಿ ಅಪರಿಚಿತರಾಗಿಸಿ ಬಿಡುತ್ತದೆ.


ಪೌರೋಹಿತ್ಯ, ಮನುವಾದ, ಅಸ್ಪಶ್ಯತೆ, ಸರಕಾರಿ ಮೀಸಲಾತಿ, ಖಾಸಗಿ ಮೀಸಲಾತಿ, ಜಾತಿ ಜನಗಣತಿ, ಬೆಲೆ ಏರಿಕೆ, ನಿರುದ್ಯೋಗ, ಚೀನಾ ಆಕ್ರಮಣ, ಭ್ರಷ್ಟಾಚಾರ, ಕಾರ್ಪೊರೇಟ್ ದಬ್ಬಾಳಿಕೆ ಇತ್ಯಾದಿ ವಿಷಯಗಳನ್ನು ಸಮಾಜ ಚರ್ಚಿಸಲೇ ಬಾರದು. ಇದುವೇ ಹಿಜಾಬ್ ವಿರೋಧಿ ಕ್ರಮಗಳ, ಚರ್ಚುಗಳ ಮೇಲಿನ ದಾಳಿಗಳ, ಮುಸ್ಲಿಮರು, ಕ್ರೈಸ್ತರ ವಿರುದ್ಧ ನಡೆಯುತ್ತಿರುವ ವಿಷ ಭಾಷಣಗಳ ಮತ್ತು ಈ ಸಮುದಾಯಗಳ ಮೇಲೆ ಅಲ್ಲಲ್ಲಿ ನಡೆಯುತ್ತಿರುವ ಹಲ್ಲೆ, ಆಕ್ರಮಣಗಳ ಹಿಂದಿರುವ ನೈಜ ಉದ್ದೇಶ. ಏಕೆಂದರೆ ಒಂದುವೇಳೆ ಸಮಾಜದ ಜನರೆಲ್ಲಾ ಪ್ರಸ್ತುತ ನೈಜ ಸಮಸ್ಯೆಗಳ ಬಗ್ಗೆ ಚರ್ಚೆ ಸಂವಾದಗಳನ್ನು ನಡೆಸಲು ಆರಂಭಿಸಿ ಬಿಟ್ಟರೆ ಅದರಿಂದ ಕೆಲವರಿಗೆ ತುಂಬಾ ನಷ್ಟವಿದೆ. ನಿಜವಾಗಿ ಅದರಿಂದ ಅವರ ಅಸ್ತಿತ್ವಕ್ಕೇ ಅಪಾಯವಿದೆ. ಈ ವಿಷಯಗಳ ಕುರಿತು ಚರ್ಚೆ ನಡೆದರೆ ಈ ಎಲ್ಲ ಸಮಸ್ಯೆಗಳಲ್ಲಿ ಅಪರಾಧಿ ಸ್ಥಾನದಲ್ಲಿರುವವರು ಸಮಾಜದ ಮುಂದೆ ನಗ್ನರಾಗಿ ಅವರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಜಾತಿಯ ಹೆಸರಲ್ಲಿ ಹಲವು ಶತಮಾನಗಳಷ್ಟು ದೀರ್ಘಕಾಲ ಅವ್ಯಾಹತವಾಗಿ ನಡೆದ ಅಮಾನುಷ ದೌರ್ಜನ್ಯಗಳ ಬಗ್ಗೆ ಸಮಜಾಯಿಷಿ ನೀಡಬೇಕಾಗುತ್ತದೆ. ಆದ್ದರಿಂದಲೇ ಈ ವಿಷಯಗಳ ಕುರಿತು ಯಾವುದೇ ಚರ್ಚೆ, ಸಂವಾದಗಳು ನಡೆಯದಂತೆ, ಇವುಗಳನ್ನು ಚರ್ಚೆಯ ಅಜೇಂಡಾದಿಂದ ಸಂಪೂರ್ಣ ದೂರ ಇಡುವುದಕ್ಕಾಗಿ ಅಪರಾಧಿಗಳು ಕಂಡುಕೊಂಡ ಉಪಾಯ - ಎಲ್ಲೆಂದರಲ್ಲಿ ಪದೇ ಪದೇ ಮುಸ್ಲಿಮರು ಚರ್ಚೆಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು. ವ್ಯವಸ್ಥೆಯ ಬಲಿಪಶುಗಳಾದ ಬಹುಸಂಖ್ಯಾತ ಭಾರತೀಯರಿಗೆ, ತಮ್ಮ ನೈಜ ಶತ್ರುಗಳು ನಡೆಸುತ್ತಿರುವ ಅಪರಾಧಗಳು ಮತ್ತು ವೈಫಲ್ಯಗಳ ಬಗ್ಗೆ ಚರ್ಚಿಸುವುದಕ್ಕೆ ಪುರುಸೊತ್ತಿಲ್ಲದಂತೆ ಮಾಡುವುದೇ ಈ ಎಲ್ಲ ಸಂಚುಗಳ ಹಿಂದಿನ ಸ್ಪಷ್ಟ ಉದ್ದೇಶ. ಯಾವ ಸಂದೇಹಕ್ಕೂ ಎಡೆ ಇಲ್ಲದ ವಾಸ್ತವ ಇದು. ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಕೆಲವು ಮುಗ್ಧರು ಈಗಲೂ ಇದನ್ನು ಹಿಂದೂ-ಮುಸ್ಲಿಮ್ ಜಗಳದ ರೂಪದಲ್ಲಿ ಕಾಣುತ್ತಿದ್ದಾರೆ.

ನಿಜವಾಗಿ ಶತಶತಮಾನಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ತಮ್ಮದೇ ಆದ ವಸ್ತ್ರ ನಿಯಮಗಳನ್ನು ಪಾಲಿಸುತ್ತಾ ಜೊತೆಯಾಗಿ ಬಾಳುತ್ತಾ ಬಂದಿರುವ ಈ ಸಮಾಜದಲ್ಲಿ ಅವರು ಈ ವಿಷಯದಲ್ಲಿ ಎಂದೂ ಜಗಳಾಡಿದ್ದಿಲ್ಲ. ಇಂದು ಕೂಡಾ ಹಿಜಾಬ್ ಬಗ್ಗೆ ಹಿಂದೂ ಬಹುಸಂಖ್ಯಾತರಿಗೆ ಯಾವುದೇ ಆಕ್ಷೇಪ ಇಲ್ಲ. ಅದನ್ನು ಆಕ್ಷೇಪಿಸುತ್ತಿರುವುದು ರಾಜಕೀಯ ಲಾಭಕ್ಕಾಗಿ ಆರಾಧ್ಯ ದೇವರುಗಳ ಸಹಿತ ಎಲ್ಲ ಧಾರ್ಮಿಕ ಸಂಕೇತಗಳನ್ನು ಬೀದಿಗೆ ಎಳೆದುತಂದು ಕುಲಗೆಡಿಸಿದ ವಿಕೃತ ಮನಸ್ಸಿನ, ಬೆರಳೆಣಿಕೆಯ ಕೆಲವು ಅವಿವೇಕಿಗಳು ಮಾತ್ರ. ಇಂಥವರು ಹಿಂದೆಯೂ ಇದ್ದರು. ಕೇರಳದಲ್ಲಿ ತಿರುವಂಕೂರು ರಾಜರ ಕಾಲದಲ್ಲಿ ಈಳವ (ಬಿಲ್ಲವ), ನಾಡಾರ್ ಮುಂತಾದ ಹಲವು ಜಾತಿಗಳನ್ನು ಕೀಳುಜಾತಿಗಳೆಂದು ಕರೆದು, ಆ ಸಮಾಜಗಳಿಗೆ ಸೇರಿದ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಎದೆಭಾಗವನ್ನು ಮುಚ್ಚಬಾರದು, ಮುಚ್ಚಬಯಸುವವರು ಅದಕ್ಕಾಗಿ ‘ಮುಲಕ್ಕರ’ (ಸ್ತನ ತೆರಿಗೆ) ಎಂಬ ವಿಶೇಷ ತೆರಿಗೆಯನ್ನು ಪಾವತಿಸಬೇಕು, ಹಾಗೆಯೇ ಮೀಸೆ ಬೆಳೆಸಬಯಸುವ ಶೂದ್ರ ಜಾತಿಗಳ ಪುರುಷರು ಅದಕ್ಕಾಗಿ ‘ತಲಕ್ಕರ’ ಎಂಬ ವಿಶೇಷ ತೆರಿಗೆ ಪಾವತಿಸಬೇಕು ಎಂಬ ಅಮಾನುಷ ನಿಯಮ ಹಲವು ದಶಕಗಳ ಕಾಲ ಜಾರಿಯಲ್ಲಿತ್ತು. ಇದು ದ್ವಾಪರಾಯುಗದ ಕಥೆಯಲ್ಲ. 19ನೇ ಶತಮಾನದ ಉತ್ತರಾರ್ಧದಲ್ಲೂ ಚಲಾವಣೆಯಲ್ಲಿದ್ದ ಲಜ್ಜಾಸ್ಪದ ಅನಿಷ್ಟ. ಇಂದು ‘ಮುಲಕ್ಕರ’ ಜಾರಿಯಲ್ಲಿಲ್ಲ, ನಿಜ. ಆದರೆ ಆ ಅನಿಷ್ಟವನ್ನಾಗಲಿ, ಪುರೋಹಿತ ಶಾಹಿಯು ಭಾರತದ ಮೇಲೆ ಹೇರಿದ ಅಸ್ಪೃಶ್ಯತೆ, ಸತಿ ಸಹಗಮನ, ಅಗ್ನಿಪರೀಕ್ಷೆಯಂತಹ ಎಂದೂ ಖಂಡಿಸಿಲ್ಲದ ಮಾತ್ರವಲ್ಲ ಅವಕಾಶ ಸಿಕ್ಕಲ್ಲೆಲ್ಲ ಅವುಗಳನ್ನು ವೈಭವೀಕರಿಸುವ ಅದೇ ವಿಕೃತ ಜಾತಿವಾದಿ ಮಾನಸಿಕತೆಯ ಪ್ರತಿಪಾದಕರು ಇಂದು ಕೂಡಾ ಸಮಾಜದಲ್ಲಿ ಸಕ್ರಿಯರಾಗಿದ್ದಾರೆ.

ಇಂದು ಈ ಶಕ್ತಿಗಳು, ಮುಸ್ಲಿಮರು ಅಥವಾ ಮಾಜಿ ಶೂದ್ರರ ಉಡುಗೆಗಳನ್ನು ನಿಯಂತ್ರಿಸಲು ಹೊರಟಿದ್ದಾರೆ. ಅವರೇನು ಧರಿಸಬೇಕೆಂಬುದನ್ನು ನಿರ್ಧರಿಸುವ ಹಕ್ಕು ಅವರಿಗಿಲ್ಲ. ಅದನ್ನು ನಾವು ನಿರ್ಧರಿಸುತ್ತೇವೆ ಎಂದು ವಾದಿಸುತ್ತಿದ್ದಾರೆ. ಇಂದು ಹಿಂದುಳಿದ ವರ್ಗಗಳೆಂದು ಗುರುತಿಸಲ್ಪಡುವ ಶೂದ್ರರಿಗೆ ಈ ಹಿಂದೆ ಮಾಡಿದ್ದ ಅನ್ಯಾಯಗಳನ್ನೇ ಅವರೀಗ ಮುಸ್ಲಿಮರಾಗಿರುವ ಮಾಜಿ ಶೂದ್ರರಿಗೆ ಮಾಡಲು ಹೊರಟಿದ್ದಾರೆ. ಅವರ ಹಾವ ಭಾವ ನೋಡಿದರೆ ಈ ಹಿಂದೆ ತಿರುವಂಕೂರು ಸಾಮ್ರಾಜ್ಯದ ಪುರೋಹಿತ ವರ್ಗವು ಶೂದ್ರರ ಮೇಲೆ ಎದೆವಸ್ತ್ರದ ತೆರಿಗೆ ಹೊರಿಸಿದಂತೆ, ಕ್ರಮೇಣ, ಸ್ಕಾರ್ಫ್ ಧರಿಸ ಬಯಸುವ ಹೆಣ್ಣು ಮಕ್ಕಳಿಂದ ಸ್ಕಾರ್ಫ್ ತೆರಿಗೆ ಅಥವಾ ಸೆರಗು ಧರಿಸುವ ಮಹಿಳೆಯರಿಂದ ಸೆರಗು ತೆರಿಗೆ ಸಂಗ್ರಹಿಸುವ ಸಿದ್ಧತೆ ನಡೆಸುತ್ತಿದ್ದಾರೆಂಬ ಸಂಶಯ ಮೂಡುತ್ತದೆ. ಅಪಾಯವಿರುವ ಯಾವುದೇ ಕಾರ್ಯವನ್ನು ಸ್ವತಃ ಮಾಡಲು ಅಂಜುವ ಈ ಮನುವಾದಿ ಮಂದಿ ಈ ಕಾರ್ಯವನ್ನೂ ಶೂದ್ರರ ಕೈಯಿಂದ ಮಾಡಿಸುವ ಸಂಚು ಹೂಡಿದ್ದಾರೆ. ಸಮಾಜದ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಜನರು ಈ ಸಂಚನ್ನು ಅರ್ಥ ಮಾಡಿಕೊಂಡು ಇದನ್ನು ಸೋಲಿಸಲು ಒಂದಾಗಿ ಮುಂದಾಗಬೇಕಾದ ಅಗತ್ಯವಿದೆ. ಮುಸ್ಲಿಮ್ ಹುಡುಗಿಯರ ಪಾಲಿಗೆ, ಹಿಜಾಬ್ ಧರಿಸುವ ಅವರ ಮೂಲಭೂತ ಹಕ್ಕನ್ನು ನಿರಾಕರಿಸಲಾಗುತ್ತಿರುವ ಈ ಸಂದರ್ಭವು ಸಮಾಜದ ಎಲ್ಲ ಸೆಕ್ಯುಲರ್, ಸಮಾಜವಾದಿ, ಉದಾರವಾದಿ ರಾಜಕೀಯ ಪಕ್ಷಗಳ ಪಾಲಿಗೆ ಮತ್ತು ಮಹಿಳಾ ವಿಮೋಚನೆ, ಮಹಿಳಾ ಸ್ವಾತಂತ್ರ, ಸ್ತ್ರೀ ಶಿಕ್ಷಣ ಮುಂತಾದ ವಿಚಾರಗಳ ಪ್ರತಿಪಾದಕರ ಪಾಲಿಗೆ ಪರೀಕ್ಷೆಯ ಮತ್ತು ಸವಾಲಿನ ಕ್ಷಣವಾಗಿದೆ.

ಹಾಗೆಯೇ ತಮ್ಮ ಹಿತೈಷಿಗಳು ಯಾರು ಮತ್ತು ಯಾರನ್ನು ತಾವು ಬೆಂಬಲಿಸಬೇಕು ಎಂಬುದನ್ನು ಕೇವಲ ಭಾವುಕ ಭಾಷಣಗಳ ಆಧಾರದಲ್ಲಿ ಅಥವಾ ಶುದ್ಧ ನಾಟಕಗಳಿಂದ ಪ್ರೇರಿತರಾಗಿ ನಿರ್ಧರಿಸುವ ಅಲ್ಪ ಸಂಖ್ಯಾತರು ಮತ್ತು ವಂಚಿತ ವರ್ಗಗಳ ಮಟ್ಟಿಗೆ ಇದು ತಮ್ಮ ನೈಜ ಹಿತೈಷಿಗಳು ಯಾರೆಂಬುದನ್ನು ಗುರುತಿಸುವ ಅವಕಾಶವಾಗಿದೆ. ಈಗಾಗಲೇ ವಿವಿಧ ಜಾತಿ, ಸಮುದಾಯ ಮತ್ತು ಸಂಘಟನೆಗಳ ನಾಯಕರು, ಅನೇಕ ಪತ್ರಕರ್ತರು ಮತ್ತು ಮೇಧಾವಿಗಳು ಸ್ಕಾರ್ಫ್ ವಿರೋಧಿ ದಬ್ಬಾಳಿಕೆಯನ್ನು ಸ್ಪಷ್ಟವಾಗಿ ಖಂಡಿಸಿ ಮಾತನಾಡಿದ್ದಾರೆ. ಆದರೆ ಅದೇ ವೇಳೆ ಕೇವಲ ಓಟಿಗಾಗಿ ಮುಸ್ಲಿಮರ ಸ್ನೇಹ ಬೆಳೆಸುವ ರಾಜಕೀಯ ಪಕ್ಷಗಳ ನಾಯಕರು ಈ ವಿಷಯದಲ್ಲಿ ಒಂದೋ ಸ್ವತಃ ಮನುವಾದಿಗಳ ಭಾಷೆ ಮಾತನಾಡುವ ಮೂಲಕ ಅಥವಾ ಅವರ ಆದೇಶ ಪಾಲಿಸುವಂತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮುಸ್ಲಿಮ್ ಹುಡುಗಿಯರಿಗೆ ಉಚಿತ ಉಪದೇಶ ನೀಡುವ ಮೂಲಕ ತಮ್ಮ ಕಪಟಾಚಾರವನ್ನು ಮೆರೆಯುತ್ತಿದ್ದಾರೆ. ‘ವಿಷಯ ಕೋರ್ಟಿನಲ್ಲಿದೆ’ ಎಂಬ ಕಾರಣಕ್ಕಾಗಿ ಮನುವಾದಿಗಳೇನೂ ತಮ್ಮ ರಂಪಾಟ ನಿಲ್ಲಿಸಿಲ್ಲ. ಆದರೆ ಸಂಗತಿ ಕೋರ್ಟಿಗೆ ಹೋಗುವ ಮುನ್ನ ಹಲವು ವಾರಗಳ ಅವಧಿಯಲ್ಲಿ ಮೌನವಾಗಿದ್ದ ಸೆಕ್ಯುಲರ್ ಪಕ್ಷಗಳ ನಾಯಕರು ಇದೀಗ ‘ವಿಷಯ ಕೋರ್ಟಿನಲ್ಲಿದೆ’ ಎಂಬುದನ್ನು ತಮ್ಮ ಅಪರಾಧಿ ಮೌನಕ್ಕೆ ಸಬೂಬಾಗಿ ಬಳಸುತ್ತಿದ್ದಾರೆ.

ಸಮಸ್ಯೆ ಆರಂಭವಾಗಿ ತಿಂಗಳು ಕಳೆಯಿತು ಆದರೆ ತಾವು ಮಹಿಳೆಯರ, ಮುಸ್ಲಿಮರ ಮತ್ತು ವಂಚಿತ ವರ್ಗಗಳ ಪರಮ ಹಿತೈಷಿಗಳೆಂದು ಬೊಗಳೆ ಬಿಡುವವರು ಇನ್ನೂ ಸ್ಪಷ್ಟವಾಗಿ ಮಾತನಾಡುತ್ತಿಲ್ಲ. ಪತ್ರಿಕೆಗಳ ಅಥವಾ ಟಿ.ವಿ. ಚಾನೆಲ್‌ಗಳ ಮುಂದೆ ತುಟಿ ಬಿಚ್ಚುತ್ತಿಲ್ಲ. ದುರಂತವೇನೆಂದರೆ ಈ ಸಂದರ್ಭದಲ್ಲಿ ಅನೇಕ ಮುಸ್ಲಿಮ್ ನಾಯಕರು ಕೂಡ ಈ ಕಪಟಾಚಾರದಲ್ಲಿ ತಮ್ಮ ಪ್ರಾವೀಣ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಸಮಾಜದ ಶಿಷ್ಟ ವರ್ಗಗಳು ಪಾಲಿಸುವ ಮೌನವು ದುಷ್ಟ ವರ್ಗಗಳಿಗೆ ಶಕ್ತಿ ಒದಗಿಸುತ್ತದೆ. ಸೆಕ್ಯುಲರ್ ಪಕ್ಷಗಳ ಮೌನ ಕೋಮುವಾದಿ ಪಕ್ಷಗಳ ಬಲವನ್ನು ವೃದ್ಧಿಸುತ್ತದೆ. ಶಾಂತ ಚಿತ್ತರ ಮತ್ತು ಶಾಂತಿಪ್ರಿಯರ ನಿರ್ಲಿಪ್ತ ವೌನವು ಹಿಂಸಾವಾದಿ ಭಾವುಕ ಶಕ್ತಿಗಳಿಗೆ ಬೆಳೆಯುವ ಅವಕಾಶ ಒದಗಿಸುತ್ತದೆ. ಇಂತಹ ಶಕ್ತಿಗಳಿಗೆ, ಬಲವಂತವಾಗಿ ತಮ್ಮನ್ನು ಸಮಾಜದ ಮೇಲೆ ಹೇರಿಕೊಂಡು ಸಮಾಜದ ಪ್ರತಿನಿಧಿಗಳಾಗಿ ಮೆರೆಯುವ ಅವಕಾಶ ಸಿಕ್ಕಿ ಬಿಡುತ್ತದೆ. ಎಲ್ಲ ಸಮಾಜದ ಮಕ್ಕಳು ಜೊತೆಯಾಗಿ ಕಲಿಯುವ ಸಾಮಾನ್ಯ ಶಾಲೆಗಳಲ್ಲಿ ಸ್ಕಾರ್ಫ್ ನಿಷೇಧ, ಕುಂಕುಮ ನಿಷೇಧ, ಜನಿವಾರ ನಿಷೇಧದಂತಹ ಸಾಂಸ್ಕೃತಿಕ ಸಂವೇದನೆ ಇಲ್ಲದ ಕುರುಡು ನಿಯಮಗಳನ್ನು ಜಾರಿಗೆ ತಂದರೆ ಸಮಾಜದ ಒಂದಷ್ಟು ಮಕ್ಕಳನ್ನು ಶಾಲೆಯಿಂದ ಮಾತ್ರವಲ್ಲ, ಸಂಪೂರ್ಣ ಸಮಾಜದಿಂದಲೇ ಹೊರಗಟ್ಟಿದಂತಾಗುತ್ತದೆ.

ಸ್ಕಾರ್ಫ್ ನಿಷೇಧದ ಒಂದು ಪರಿಣಾಮವನ್ನು ಊಹಿಸಿನೋಡಿ. ಇದು ಕೆಲವು ಬಂಡವಾಳಶಾಹಿಗಳಿಗೆ ವ್ಯಾಪಾರದ ಒಂದು ಅವಕಾಶವಾಗಿ ಬಿಡುತ್ತದೆ. ಅವರು, ಸ್ಕಾರ್ಫ್‌ಗೆ ಅನುಮತಿ ಇರುವ ಮತ್ತು ಕೇವಲ ಒಂದೇ ಸಮಾಜದವರು ಕಲಿಯುವ ಎಕ್ಸ್‌ಕ್ಲೂಸಿವ್ ಖಾಸಗಿ ಧಾರ್ಮಿಕ ಶಾಲೆಗಳನ್ನು ಸ್ಥಾಪಿಸುತ್ತಾರೆ. ಈ ಮೂಲಕ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಸಮಸ್ತ ಸಮಾಜವೇ ಸೇರಿ ಪ್ರಧಾನಧಾರೆಯಿಂದ ದೂರ ದಬ್ಬಿದಂತಾಗುತ್ತದೆ. ಹಲವಾರು ಜಾತಿ, ವರ್ಗ ಮತ್ತು ಸಮುದಾಯಗಳಿರುವ ಸಮಾಜದಲ್ಲಿ ಕೇವಲ ಒಂದು ವರ್ಗದವರಿಗೆ ಮೀಸಲಾಗಿರುವ ಶಾಲೆಗಳಿಂದ ಸಮಾಜಕ್ಕೆ ಯಾವುದೇ ಹಿತವಾಗುವುದಿಲ್ಲ. ಅದು ಸಮಾಜದ ನಿರ್ದಿಷ್ಟ ವರ್ಗಗಳನ್ನು ಅವರದೇ ಸಮಾಜದಲ್ಲಿ ಅಪರಿಚಿತರಾಗಿಸಿ ಬಿಡುತ್ತದೆ. ಈ ಬಗೆಯ ದುರಂತ ಸಂಭವಿಸದಂತೆ ತಡೆಯುವುದು ಸಮಾಜದ ಎಲ್ಲ ಹಿತೈಷಿಗಳ ಸಾಮೂಹಿಕ ಹೊಣೆಯಾಗಿದೆ.

Writer - ಶಂಬೂಕ, ಪಂಪ್‌ವೆಲ್

contributor

Editor - ಶಂಬೂಕ, ಪಂಪ್‌ವೆಲ್

contributor

Similar News