×
Ad

‘‘ಅಲ್ಪಸಂಖ್ಯಾತರ ವಿರುದ್ಧದ ದ್ವೇಷವೇ ಪ್ರಧಾನಿ ಮೋದಿಯ ರಾಜಕೀಯದ ಶಕ್ತಿ’’: ಆಕಾರ್ ಪಟೇಲ್

Update: 2022-02-05 12:00 IST

2014ರಲ್ಲಿ, ಭಾರತೀಯ ರಾಜಕಾರಣದಲ್ಲಿ ‘ಮೋದಿ ಯುಗ’ ಆರಂಭಗೊಳ್ಳುವ ಸ್ವಲ್ಪ ಮೊದಲು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು: ‘‘ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ಅನಾಹುತಕಾರಿಯಾಗಿರುತ್ತದೆ.’’

ಪತ್ರಕರ್ತ, ಲೇಖಕ ಹಾಗೂ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಆಕಾರ್ ಪಟೇಲ್ ತನ್ನ ಪುಸ್ತಕ ‘ಪ್ರೈಸ್ ಆಫ್ ದ ಮೋದಿ ಯೀಯರ್ಸ್’ನಲ್ಲಿ, ಅದು ಹೇಗೆ ಅನಾಹುತಕಾರಿ ಎನ್ನುವುದನ್ನು ವಾಸ್ತವಾಂಶಗಳು, ಅಂಕಿ-ಅಂಶಗಳು ಮತ್ತು ವಿವಿಧ ಸಂದರ್ಭಗಳ ಮೂಲಕ ವಿವರಿಸುತ್ತಾರೆ. ಮೋದಿ ಯುಗದಲ್ಲಿ ಭಾರತೀಯ ಆರ್ಥಿಕತೆ, ಸಮಾಜ, ಸಂಸ್ಕೃತಿ, ಮೌಲ್ಯಗಳು, ಮನಸ್ಥಿತಿ, ಸಾಂವಿಧಾನಿಕ ಸಂಸ್ಥೆಗಳು ಮತ್ತು ಪ್ರಭುತ್ವದ ಕಲ್ಪನೆ ಹೇಗೆ ಬದಲಾದವು ಎನ್ನುವುದನ್ನು ಪುಸ್ತಕ ಹೇಳುತ್ತದೆ. ‘ಪ್ರಥಮ್ ಅಲೊ’ ಪತ್ರಿಕೆಯ ಹೊಸದಿಲ್ಲಿ ವರದಿಗಾರ್ತಿ ಸೌಮ್ಯ ಬಂದೋಪಾಧ್ಯಾಯರಿಗೆ ನೀಡಿರುವ ಈ ಸಂದರ್ಶನದಲ್ಲಿ ಅವರು ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ನೇರವಾಗಿ ವ್ಯಕ್ತಪಡಿಸಿದ್ದಾರೆ.

ನಾವು ನೋಡಿದಂತೆ, ಪ್ರಧಾನಿ ನೀಡಿದ ಹಲವು ನಿರ್ಣಾಯಕ ಹೊಡೆತಗಳಿಗೆ ಅವರ ಈ ವಿಶಿಷ್ಟ ಪ್ರತಿಭೆಯೇ ಕಾರಣವಾಗಿದೆ. ಸೂಚ್ಯಂಕಗಳಲ್ಲಿನ ಪತನವು ಹಲವು ಕಾರಣಗಳಿಂದ ಸಂಭವಿಸುತ್ತದೆ. ಉದಾಹರಣೆಗೆ; ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಉದ್ದೇಶಪೂರ್ವಕ ದಾಳಿಯು ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನ ಮತ್ತು ಘನತೆಯನ್ನು ತಗ್ಗಿಸಿದೆ.

ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದಿರುವಾಗ, ಜನಪ್ರಿಯತೆಯ ತುತ್ತತುದಿಯಲ್ಲಿ ಇರುವಾಗ ಹಾಗೂ ತನ್ನ ಎರಡನೇ ಅವಧಿಯನ್ನು ಮುಗಿಸಲು ಇನ್ನೂ ಮೂರು ವರ್ಷಗಳು ಇರುವಾಗ ಈ ಪುಸ್ತಕ ಬರೆದಿದ್ದೀರಿ. ಇದು ಒಂದು ರೀತಿಯಲ್ಲಿ ಅವರ ಮೌಲ್ಯಮಾಪನದಂತಿದೆ. ಈ ಪುಸ್ತಕವನ್ನು ಬರೆಯಲು ನಿಮಗೆ ಪ್ರೇರಣೆ ಏನು?

ಆಕಾರ್ ಪಟೇಲ್: ಒಂದು ನಿಲುವಿಗೆ ಬರಲು ಹಾಗೂ ಅದನ್ನು ನಿರೂಪಿಸಲು ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಪುರಾವೆಯಿದೆ ಎಂದು ನನಗೆ ಅನಿಸಿತು. ಮೋದಿಯ ನಾಯಕತ್ವದಿಂದಾಗಿ 2014ರ ಬಳಿಕ ಭಾರತ ಪೆಟ್ಟು ತಿಂದಿದೆ ಎನ್ನುವುದೇ ಆ ನಿಲುವು. ಆರ್ಥಿಕತೆಯ ಬಗ್ಗೆ ಹೇಳುವುದಾದರೆ, ಸರಕಾರಿ ಅಂಕಿ-ಅಂಶಗಳ ಪ್ರಕಾರ, 2018ರ ಜನವರಿಯಿಂದ ಆರಂಭಿಸಿ ಭಾರತದ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ವು ಕುಸಿಯಲು ಆರಂಭಿಸಿತು. ಅಂದರೆ, ಕೊರೋನ ವೈರಸ್ ಸಾಂಕ್ರಾಮಿಕ ದಾಳಿಯಿಡುವ ಎರಡು ವರ್ಷ ಮೂರು ತಿಂಗಳ ಮೊದಲೇ ಪತನ ಆರಂಭಗೊಂಡಿತ್ತು ಎನ್ನುವುದನ್ನು ಗಮನಿಸಬೇಕು. 2014ರಲ್ಲಿ ಬಾಂಗ್ಲಾದೇಶದ ತಲಾವಾರು ಆದಾಯ ಭಾರತದ ತಲಾವಾರು ಆದಾಯಕ್ಕಿಂತ ಶೇ. 50ರಷ್ಟು ಹಿಂದಿತ್ತು. ಇಂದು ಅದು ಈ ವಿಷಯದಲ್ಲಿ ಭಾರತಕ್ಕಿಂತ ಮುಂದಿದೆ. ಇದು ಬಾಂಗ್ಲಾದೇಶದ ಅಮೋಘ ಸಾಧನೆಯಾಗಿದೆ ಹಾಗೂ ಇದನ್ನು ನಾವು ಅಭಿನಂದಿಸಬೇಕಾಗಿದೆ. ಆದರೆ, ಅದೇ ಹೊತ್ತಿಗೆ, ಇದು ಯಾಕೆ ಸಂಭವಿಸಿತು ಎನ್ನುವುದನ್ನೂ ನಾವು ಪ್ರಶ್ನಿಸಬೇಕಾಗಿದೆ. ಭಾರತದ ಅಭಿವೃದ್ಧಿ ಪಥದಲ್ಲಿ ಹಿನ್ನಡೆಗೆ ಕಾರಣವಾದ ಅಂಶಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ ಹಾಗೂ ಇದಕ್ಕೆ ಕಾರಣಗಳೇನು ಎನ್ನುವುದನ್ನೂ ವಿಶ್ಲೇಷಿಸಲಾಗಿದೆ. ಭಾರತದಲ್ಲಿನ ಇಂದಿನ ಪರಿಸ್ಥಿತಿಗೆ ಪ್ರಧಾನ ಕಾರಣ ಮೋದಿಯ ನಾಯಕತ್ವ ಎನ್ನುವುದು ನನಗೆ ಮನವರಿಕೆಯಾಗಿದೆ.

ಪ್ರಶ್ನೆ: ಮೋದಿ ಓರ್ವ ರಾಜತಾಂತ್ರಿಕನಾಗಿ ಸರ್ವಾಂಗೀಣ ವೈಫಲ್ಯ ಅನುಭವಿಸಿದ್ದಾರೆ ಎನ್ನುವುದನ್ನು ಸಾಧಿಸಲು ನೀವು 59 ಅಂತರ್‌ರಾಷ್ಟ್ರೀಯ ಸೂಚ್ಯಂಕಗಳನ್ನು ಉಲ್ಲೇಖಿಸಿದ್ದೀರಿ. ಇಂತಹ ಬೃಹತ್ ವೈಫಲ್ಯಗಳ ನಡುವೆಯೂ ಮೋದಿ ಇಷ್ಟೊಂದು ಜನಪ್ರಿಯನಾಗಲು ಹಾಗೂ ಬಹುತೇಕ ಅಜೇಯನಾಗಲು ಯಾವ ಚಮತ್ಕಾರ ಕಾರಣವಾಗಿರಬಹುದು?

ಆಕಾರ್ ಪಟೇಲ್: ಭಾರತದಲ್ಲಿ ಜನಪ್ರಿಯ ರಾಜಕಾರಣ ನಡೆಸುವ ಸರಕಾರಗಳು, ಒಟ್ಟಾರೆ ನಿರ್ವಹಣೆ, ಅದರಲ್ಲೂ ಮುಖ್ಯವಾಗಿ ಆರ್ಥಿಕ ಕ್ಷೇತ್ರದ ನಿರ್ವಹಣೆಯಲ್ಲಿ ವಿಫಲವಾಗುತ್ತದೆ. ಸರಕಾರವೇ ನೀಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ, ಸಾಮೂಹಿಕ ನಿರುದ್ಯೋಗಕ್ಕೂ ಇದು ಅನ್ವಯಿಸುವಂತೆ ಕಾಣುತ್ತದೆ. ಆದರೆ, ಅದು ಜನಪ್ರಿಯತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2014ಕ್ಕೆ ಹೋಲಿಸಿದರೆ ಇಂದು ಸುಮಾರು 5 ಕೋಟಿ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಅಂದು ಸುಮಾರು 40 ಕೋಟಿ ಭಾರತೀಯರಲ್ಲಿ ಕೆಲಸವಿತ್ತು. ಮೋದಿ ಆಡಳಿತದಲ್ಲಿ, ಒಟ್ಟು ಉದ್ಯೋಗದಲ್ಲಿನ ಕಾರ್ಮಿಕರ ಪಾಲು 2014ರಲ್ಲಿದ್ದ ಶೇ. 50ಕ್ಕಿಂತ ಇಂದು ಶೇ. 40ಕ್ಕೆ ಇಳಿದಿದೆ. ಇದು ದಕ್ಷಿಣ ಏಶ್ಯದಲ್ಲೇ ಅತ್ಯಂತ ಕನಿಷ್ಠ ದರವಾಗಿದೆ (ತಾಲಿಬಾನ್ ಪೂರ್ವದ ಅಫ್ಘಾನಿಸ್ತಾನಕ್ಕಿಂತಲೂ ಕಳಪೆ) ಹಾಗೂ ಜಾಗತಿಕ ಮಟ್ಟದಲ್ಲಿ ಕಳಪೆ ಸಾಧನೆ ಮಾಡಿರುವ ದೇಶಗಳ ಪೈಕಿ ಒಂದಾಗಿದೆ.

ಅದೇ ವೇಳೆ, ಸರಕಾರಿ ಕಾರ್ಯಕ್ರಮವಾಗಿರುವ ‘ಮನ್‌ರೇಗ’ದಲ್ಲಿನ ನೋಂದಣಿಗಳ ಸಂಖ್ಯೆ 2014ರಲ್ಲಿ ಇದ್ದುದಕ್ಕಿಂತ ನಾಲ್ಕು ಪಟ್ಟು ಆಗಿದೆ. ಅಂದರೆ, ಜನರಿಗೆ ಕೆಲಸ ಬೇಕು, ಆದರೆ ಮೋದಿ ಆಡಳಿತದಲ್ಲಿ ಕೆಲಸವಿಲ್ಲ. ಇದನ್ನು ಸರಕಾರದ ಅಂಕಿಅಂಶಗಳೇ ಹೇಳುತ್ತಿವೆ. ಇನ್ನೊಂದು ಕುತೂಹಲದ ವಿಷಯವನ್ನು ಇಲ್ಲಿ ಹೇಳಗಬೇಕಾಗಿದೆ. ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’ ಜಾರಿಯಾದ ಬಳಿಕ, ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದಲ್ಲಿ ಉತ್ಪಾದನೆಯ ಪಾಲು ಶೇ.16ರಿಂದ ಶೇ.13ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಜಿಡಿಪಿಯಲ್ಲಿ ಉತ್ಪಾದನಾ ಕ್ಷೇತ್ರದ ಪಾಲನ್ನು ಹೆಚ್ಚಿಸುವಲ್ಲಿ ಬಾಂಗ್ಲಾದೇಶ ಮತ್ತು ವಿಯೆಟ್ನಾಮ್‌ಗಳು ಯಶಸ್ವಿಯಾಗಿವೆ. ಅಂದರೆ, ಇದನ್ನು ಮಾಡಬಹುದಾಗಿದೆ. ಆದರೆ, ಇದನ್ನು ಹೇಗೆ ಮಾಡುವುದು ಎನ್ನುವುದು ಮೋದಿಗೆ ಗೊತ್ತಿಲ್ಲ. ಹಾಗಾಗಿ, ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಅದೇ ವೇಳೆ, ಭಾರತೀಯ ಅಲ್ಪಸಂಖ್ಯಾತರ ವಿರುದ್ಧದ ಬಿಜೆಪಿಯ ನಿಲುವುಗಳಿಂದಾಗಿ ಆ ಪಕ್ಷವು ಹೆಚ್ಚಿನ ಜನವರ್ಗಕ್ಕೆ ಅಪ್ಯಾಯಮಾನವಾಗಿದೆ.

ಪ್ರಶ್ನೆ: ವಾಜಪೇಯಿ-ಅಡ್ವಾಣಿ ಯುಗದಲ್ಲೂ ಬಿಜೆಪಿಗೆ ಆರೆಸ್ಸೆಸ್ ಪ್ರಧಾನ ಮಾರ್ಗದರ್ಶಿಯಾಗಿತ್ತು. ಮೋದಿ ಇದನ್ನು ಬದಲಾಯಿಸಿದಂತೆ ಕಾಣುತ್ತದೆ. ಅಂದರೆ, ಇದರ ಅರ್ಥ ಮೋದಿ ಇರುವವರೆಗೆ ಆರೆಸ್ಸೆಸ್ ಎರಡನೇ ಸ್ಥಾನದಲ್ಲಿ ಇರುತ್ತದೆಯೇ? ಹೌದಾದರೆ, ಇದು ಹೇಗೆ ಸಾಧ್ಯವಾಗುವಂತೆ ಅವರು ಮಾಡಿದರು?

ಆಕಾರ್ ಪಟೇಲ್: ಆರೆಸ್ಸೆಸ್ ಏನು ಕೇಳುತ್ತಿತ್ತೋ ಅದನ್ನು ಸಾಧಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಆರೆಸ್ಸೆಸ್‌ಗೆ ಮುಸ್ಲಿಮರ ರಾಜಕೀಯ ಸೋಲು ಅಥವಾ ಅವರನ್ನು ಕಡೆಗಣಿಸುವುದು ಹಾಗೂ ಕಾನೂನು ಮತ್ತು ಸರಕಾರಿ ನೀತಿಯ ಮೂಲಕ ಮುಸ್ಲಿಮರನ್ನು ಕಾನೂನುಬದ್ಧವಾಗಿ ದಮನಿಸುವುದು ಬೇಕಾಗಿತ್ತು. ಇದನ್ನು ಮೋದಿ ಮಾಡಿದಾಗ ಆರೆಸ್ಸೆಸ್ ವಲಯದಲ್ಲಿ ಅವರು ಆಪ್ತರಾದರು. ಇಂದು ಭಾರತದ 28 ರಾಜ್ಯಗಳಲ್ಲಿ ಒಂದರಲ್ಲೂ ಮುಸ್ಲಿಮ್ ಮುಖ್ಯಮಂತ್ರಿಯಿಲ್ಲ, 15 ರಾಜ್ಯಗಳಲ್ಲಿ ಮುಸ್ಲಿಮ್ ಸಚಿವರಿಲ್ಲ, 10 ರಾಜ್ಯಗಳಲ್ಲಿ ಒಬ್ಬ ಮುಸ್ಲಿಮ್ ಸಚಿವರಿದ್ದಾರೆ ಹಾಗೂ ಅವರಿಗೆ ಸಾಮಾನ್ಯವೆಂಬಂತೆ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯನ್ನು ನೀಡಲಾಗಿದೆ. ಬಿಜೆಪಿಯ 303 ಲೋಕಸಭಾ ಸದಸ್ಯರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಇಲ್ಲ. ಹಿಂದಿನ ಅವಧಿಯಲ್ಲಿ ಅದು ಹೊಂದಿದ್ದ 282 ಲೋಕಸಭಾ ಸದಸ್ಯರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಇರಲಿಲ್ಲ. ಇದು ಚುನಾವಣಾ ಭೇದ ನೀತಿಯಾಗಿದ್ದು, ಇದನ್ನು ಬಿಜೆಪಿ ಅನುಸರಿಸುತ್ತಿದೆ ಹಾಗೂ ಇದಕ್ಕೆ ಹೆಚ್ಚಿನ ಸಂಖ್ಯೆಯ ಹಿಂದೂಗಳ ಅನುಮೋದನೆಯಿದೆ.

ಕಾನೂನುಗಳ ಬಗ್ಗೆ ಹೇಳುವುದಾದರೆ, ದನದ ಮಾಂಸ ಹೊಂದುವುದನ್ನು ಅಪರಾಧವಾಗಿಸುವ ಕಾನೂನುಗಳನ್ನು ಭಾರತೀಯ ರಾಜ್ಯಗಳು ಜಾರಿಗೆ ತಂದಿವೆ ಹಾಗೂ ತಾನು ದನದ ಮಾಂಸ ಹೊಂದಿಲ್ಲ ಎನ್ನುವುದನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಬಂಧಿತರ ಹೆಗಲಿಗೇ ಹೇರಲಾಗಿದೆ. ತನ್ನ ಮಗಳ ಮದುವೆಯಲ್ಲಿ ದನದ ಮಾಂಸದ ಅಡುಗೆ ಮಾಡಿದನೆಂಬ ಆರೋಪಕ್ಕೆ ಒಳಗಾದ ಮುಸ್ಲಿಮ್ ವ್ಯಕ್ತಿಯೊಬ್ಬನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲಿ ದನದ ಮಾಂಸದ ಅಡುಗೆ ಮಾಡಲಾಗಿತ್ತು ಎನ್ನುವುದನ್ನು ಸಾಬೀತುಪಡಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಮದುವೆಯಲ್ಲಿ ಬಡಿಸಲಾದ ಖಾದ್ಯ ದನದ ಮಾಂಸವಲ್ಲ ಎನ್ನುವುದನ್ನು ಸಾಬೀತುಪಡಿಸುವುದು ಮುಸ್ಲಿಮ್ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಹೇಳಿ ನ್ಯಾಯಾಲಯವು ಆ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿತು. ಈ ಶಿಕ್ಷೆಯನ್ನು ಬಳಿಕ ಹಿಂದಕ್ಕೆ ಪಡೆಯಲಾಯಿತಾದರೂ, ಭಾರತೀಯ ಕಾನೂನಿನಲ್ಲಿ ಈ ರೀತಿಯ ತಾರತಮ್ಯವು ಈಗ ಸಾಮಾನ್ಯವಾಗಿದೆ.

2018ರ ಬಳಿಕ, ಬಿಜೆಪಿ ಆಡಳಿತದ ಆರು ರಾಜ್ಯಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಮದುವೆಗಳನ್ನು ಅಪರಾಧವಾಗಿಸಿವೆ ಹಾಗೂ ತಾನು ಸ್ವಇಚ್ಛೆಯ ಮೇರೆಗೆ ಮತಾಂತರಗೊಂಡಿದ್ದೇನೆ ಎಂಬುದಾಗಿ ಓರ್ವ ವಯಸ್ಕ ಮಹಿಳೆ ಸಾಕ್ಷಿ ನುಡಿದರೂ ಅದು ಅಪರ್ಯಾಪ್ತ ಪುರಾವೆಯಾಗುತ್ತದೆ. ಮಹಿಳೆಯ ಮತಾಂತರದಲ್ಲಿ ಯಾವುದೇ ಬಲವಂತ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಹೊಣೆ ಆಕೆಯನ್ನು ಮದುವೆಯಾದ ವ್ಯಕ್ತಿ ಮತ್ತು ಆತನ ಕುಟುಂಬ ಸದಸ್ಯರದ್ದಾಗಿದೆ. ಈ ಕಾನೂನುಗಳು ಬೇಕಾಗಿಲ್ಲ. ಸಮುದಾಯದೊಳಗೇ ಮದುವೆಯಾಗುವ ಪ್ರವೃತ್ತಿಯು ದಕ್ಷಿಣ ಏಶ್ಯದಲ್ಲಿ ಪ್ರಬಲವಾಗಿದೆ. ಇಲ್ಲಿ ಅತ್ಯಂತ ಶ್ರೀಮಂತರು ಕೂಡ ತಮ್ಮ ಉಪಜಾತಿಯೊಳಗೇ ಮದುವೆಯಾಗುತ್ತಾರೆ. ಆದರೆ, ಬಿಜೆಪಿಯು ‘ಲವ್ ಜಿಹಾದ್’ ಎನ್ನುವ ಅಸಂಗತ ಸಿದ್ಧಾಂತವೊಂದನ್ನು ಯಾವುದೇ ಪುರಾವೆಯಿರದೆ ಮುನ್ನೆಲೆಗೆ ತಂದಿದೆ. ಆರೆಸ್ಸೆಸ್ ಅದನ್ನು ಅನುಮೋದಿಸುತ್ತದೆ.

ಪ್ರಶ್ನೆ: ನಿಮ್ಮ ಪ್ರಕಾರ, ಮೋದಿ ‘ನಿರ್ಣಾಯಕ’ ಮತ್ತು ‘ಪಾರದರ್ಶಕ’. ಅವರು ‘ಪಾರದರ್ಶಕ’ವಾಗಿದ್ದರೆ, ಪ್ರಮುಖ ಸಚಿವರು ಮತ್ತು ಅಧಿಕಾರಿಗಳನ್ನು ಕತ್ತಲಲ್ಲಿಟ್ಟು ನಗದು ಅಮಾನ್ಯೀಕರಣ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗಳಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಂಡರು?

ಆಕಾರ್ ಪಟೇಲ್: ಅವರು ಪಾರದರ್ಶಕ ಹೇಗೆಂದರೆ, ಅವರು ತಾನು ಯಾರೆನ್ನುವುದನ್ನು ಅಡಗಿಸಿಡುವುದಿಲ್ಲ. ತನ್ನದೇ ಸಚಿವರು ಏನು ಹೇಳಬಹುದು ಎನ್ನುವುದನ್ನೂ ಅವರು ಲೆಕ್ಕಿಸುವುದಿಲ್ಲ. ಅವರು ಸಂಸದೀಯ ಪ್ರಜಾಪ್ರಭುತ್ವದ ಸಾಮೂಹಿಕ ಜವಾಬ್ದಾರಿಯ ಸಂಪ್ರದಾಯಗಳನ್ನು ಪಾಲಿಸುವುದಿಲ್ಲ. ತನಗೆ ಇವುಗಳ ಬಗ್ಗೆ ಇರುವ ತಿರಸ್ಕಾರಗಳನ್ನೂ ಅವರು ಮರೆಮಾಚುವುದಿಲ್ಲ. ಹಾಗಾಗಿಯೇ, ಯಾರ ಅಭಿಪ್ರಾಯಗಳನ್ನೂ ಕೇಳದೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಪ್ರಶ್ನೆ: ಗುಜರಾತ್‌ನ ಮುಖ್ಯಮಂತ್ರಿ ಯಾಗಿದ್ದಾಗ ಮೋದಿ, ಮಧು ಕಿಶ್ವಾರ್‌ಗೆ ನೀಡಿರುವ ಸಂದರ್ಶನವೊಂದರ ಬಗ್ಗೆ ಪ್ರಸ್ತಾಪಿಸಿದ್ದೀರಿ. ಮೋದಿಯಲ್ಲಿ ಸಮಸ್ಯೆಗಳ ಬಗ್ಗೆ ಕಡಿಮೆ ಕೇಳುವ ಹಾಗೂ ಹೆಚ್ಚು ಯೋಚಿಸುವ ಹಾಗೂ ಸಂಭಾವ್ಯ ಪರಿಹಾರಗಳ ನಿಟ್ಟಿನಲ್ಲಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಶಿಷ್ಟ ಪ್ರತಿಭೆಯಿದೆ ಎಂಬುದಾಗಿ ಕಿಶ್ವಾರ್ ಬಣ್ಣಿಸಿದ್ದಾರೆ. ಮೋದಿಯ ಈ ವಿಶೇಷ ಪ್ರತಿಭೆಯೇ ಹೆಚ್ಚಿನ ಅಂತರ್‌ರಾಷ್ಟ್ರೀಯ ಸೂಚ್ಯಂಕಗಳಲ್ಲಿ ಭಾರತದ ಸರ್ವಾಂಗೀಣ ನಿಧಾನ ಗತಿಯ ಪ್ರಗತಿಗೆ ಪ್ರಮುಖ ಕಾರಣಗಳ ಪೈಕಿ ಒಂದಾಗಿದೆಯೇ?

ಆಕಾರ್ ಪಟೇಲ್: ನಾವು ನೋಡಿದಂತೆ, ಪ್ರಧಾನಿ ನೀಡಿದ ಹಲವು ನಿರ್ಣಾಯಕ ಹೊಡೆತಗಳಿಗೆ ಅವರ ಈ ವಿಶಿಷ್ಟ ಪ್ರತಿಭೆಯೇ ಕಾರಣವಾಗಿದೆ. ಸೂಚ್ಯಂಕಗಳಲ್ಲಿನ ಪತನವು ಹಲವು ಕಾರಣಗಳಿಂದ ಸಂಭವಿಸುತ್ತದೆ. ಉದಾಹರಣೆಗೆ; ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಉದ್ದೇಶಪೂರ್ವಕ ದಾಳಿಯು ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನ ಮತ್ತು ಘನತೆಯನ್ನು ತಗ್ಗಿಸಿದೆ.

ಪ್ರಶ್ನೆ: ಈಗ ನಮ್ಮ ನೆರೆಯ ದೇಶಗಳ ಬಗ್ಗೆ ಗಮನ ಹರಿಸೋಣ. ನಮ್ಮ ಪಾಕಿಸ್ತಾನ ಕೇಂದ್ರಿತ ಅಸ್ಥಿರ ವಿದೇಶ ನೀತಿಯನ್ನು ನೀವು ಸರಿಯಾಗಿಯೇ ಬಣ್ಣಿಸಿದ್ದೀರಿ. ಈ ನೀತಿಯಿಂದಾಗಿ ಏನೂ ಆಗಿಲ್ಲ. ಹೆಚ್ಚಿನ ನೆರೆಹೊರೆಯ ದೇಶಗಳೊಂದಿಗಿನ ಹಳಸಿದ ಸಂಬಂಧಕ್ಕೆ ಮೋದಿಯೇ ಕಾರಣ ಎಂಬುದಾಗಿ ನೀವು ಹೇಳುತ್ತೀರಿ. ಈ ನಿಟ್ಟಿನಲ್ಲಿ ನೀವು ನೇಪಾಳ ಮತ್ತು ಬಾಂಗ್ಲಾದೇಶವನ್ನು ವಿಶೇಷವಾಗಿ ಉಲ್ಲೇಖಿಸಿದ್ದೀರಿ. ಬೃಹತ್ ವಿಶ್ವಾಸದ ಕೊರತೆಯಿದೆ ಎಂದು ನೀವು ಹೇಳುತ್ತೀರಿ. ನಿಮ್ಮ ಪ್ರಕಾರ, ಇದಕ್ಕೆ ಏನು ಕಾರಣವಾಗಿರಬಹುದು?

ಆಕಾರ್ ಪಟೇಲ್: ಹಿಂದುತ್ವವು ಮುಸ್ಲಿಮರನ್ನು ದ್ವೇಷಿಸುತ್ತದೆ ಹಾಗೂ ಅವರಿಗೆ ಹೆದರುತ್ತದೆ. ನಮ್ಮ ವಿದೇಶ ನೀತಿಗೆ ಇದು ತಡೆಯಾಗಿದೆ. ನಮ್ಮ ವಿದೇಶ ನೀತಿಯು ಏಕೀಕೃತ ನೆರೆಹೊರೆಯನ್ನು ಬಯಸುತ್ತದೆ. ಭಾರತದ ರಾಷ್ಟ್ರೀಯ ಬೆದರಿಕೆಗೆ ಪ್ರಾಥಮಿಕ ಬೆದರಿಕೆ ಎದುರಾಗಿರುವುದು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯಿಂದ ಎನ್ನುವುದಾಗಿ ಹಲವು ವರ್ಷಗಳಿಂದ ಭಾರತ ಭಾವಿಸಿದೆ. ನಮ್ಮ ನೆರೆ ದೇಶವು ನಮಗೆ ಏನು ಮಾಡುತ್ತಿದೆಯೋ ಅದನ್ನೇ ನಾವು ಆ ದೇಶಕ್ಕೆ ಮಾಡಬೇಕು ಎನ್ನುವುದು ಇದಕ್ಕೆ ಪ್ರತಿಯಾಗಿ ಭಾರತದ ನೀತಿಯಾಗಿದೆ. ಇದನ್ನು ‘ದೋವಲ್ ಸಿದ್ಧಾಂತ’ ಎಂಬುದಾಗಿ ಕರೆಯಲಾಗುತ್ತದೆ. ಹಲವು ವರ್ಷಗಳಿಂದ ಭಾರತವು ವಿಶೇಷವಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹದ ಮೇಲೆ ಗಮನ ಹರಿಸಿದೆ. ಹಾಗಾಗಿಯೇ, ಲಡಾಖ್‌ನಲ್ಲಿ ಚೀನಾ ಆಕ್ರಮಣ ಮಾಡಿದಾಗ ನಾವು ಅದಕ್ಕೆ ತಯಾರಾಗಿರಲಿಲ್ಲ. ಇಂದು ಯಾವುದೇ ತಂತ್ರಗಾರಿಕೆಯಿಲ್ಲದ ಕಾರಣ ಕಳವಳದ ವಾತಾವರಣವಿದೆ. ರಾಷ್ಟ್ರೀಯ ಭದ್ರತೆಯ ಸೈದ್ಧಾಂತಿಕ ನೆಲೆಗಟ್ಟೊಂದನ್ನು ಸಿದ್ಧಪಡಿಸುವ ಸಾಮರ್ಥ್ಯ ಮೋದಿಗಿಲ್ಲ. ಅವರ ತಂಡಕ್ಕೂ ಇಲ್ಲ. ಈ ಅವಕಾಶವನ್ನು ಚೀನಾ ಚೆನ್ನಾಗಿ ಬಳಸಿಕೊಂಡಿದೆ.

ಬಾಂಗ್ಲಾದೇಶವು ತನ್ನ ಪ್ರಭಾವದಿಂದ ಜಾರಿ ಚೀನಾದತ್ತ ಹೋಗುವುದನ್ನು ಭಾರತ ಬಯಸುವುದಿಲ್ಲ. ಆದರೆ, ಬಾಂಗ್ಲಾದೇಶದ ಪೌರರ ಬಗ್ಗೆ ಬಿಜೆಪಿಯ ರಕ್ತದಲ್ಲೇ ತಿರಸ್ಕಾರ ಇರುವುದರಿಂದ ಇದನ್ನು ಸಾಧಿಸಲು ಆಗುವುದಿಲ್ಲ. ನೇಪಾಳದ ಮಟ್ಟಿಗೆ ಹೇಳುವುದಾದರೆ, ಅದರ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಭಾರತ ಮೂಗು ತೂರಿಸಿದೆ ಹಾಗೂ 2015ರ ದಿಗ್ಬಂಧನದಲ್ಲಿ ಪಾಲ್ಗೊಂಡಿದೆ ಅಥವಾ ಅದಕ್ಕೆ ಬೆಂಬಲ ನೀಡಿದೆ. ಈ ದಿಗ್ಬಂಧನದಿಂದಾಗಿ ನೇಪಾಳಿ ಜನರು ಭಾರೀ ಸಂಕಷ್ಟ ಅನುಭವಿಸಿದರು. ಹಾಗಾಗಿ ಅವರು ಆಕ್ರೋಶಿತರಾಗಿದ್ದಾರೆ. ಆದರೆ ಹೆಚ್ಚಿನ ಭಾರತೀಯರಿಗೆ ಇದರ ಬಗ್ಗೆ ಗೊತ್ತಿಲ್ಲ.

ಬಾಂಗ್ಲಾದೇಶದೊಂದಿಗಿನ ಸಂಬಂಧವನ್ನು ‘ಸುವರ್ಣ ಯುಗ’ ಎಂಬುದಾಗಿ ಭಾರತ ಬಣ್ಣಿಸುತ್ತದೆ. ವ್ಯಾಪಾರ ಮತ್ತು ವಾಣಿಜ್ಯದ ವಿಷಯದಲ್ಲಿ ಇದು ಸರಿಯಿರಬಹುದು. ಆದರೆ, ಇತರ ಮಾನದಂಡಗಳಲ್ಲಿ, ಇದು ಸ್ನೇಹಯುತ ಬಾಂಧವ್ಯದ ನಿಜವಾದ ಪ್ರತಿಫಲನವೇ? ತಳಮಟ್ಟದ ಪರಿಸ್ಥಿತಿ ಅಷ್ಟೊಂದು ಪೂರಕವಾಗಿಲ್ಲ ಎನ್ನುವುದನ್ನು ವಿವಿಧ ವರದಿಗಳು ಹೇಳುತ್ತವೆ.

ಜನರ ಮಟ್ಟದಲ್ಲಿನ ಸಂಪರ್ಕ ತುಂಬಾ ಪೇಲವವಾಗಿದೆ. ಹಾಗಾಗಿ, ಸಂಬಂಧವು ಅಮೆರಿಕ ಮತ್ತು ಕೆನಡ ಅಥವಾ ಅಮೆರಿಕ ಮತ್ತು ಬ್ರಿಟನ್ ನಡುವಿನ ಬಾಂಧವ್ಯದಂತೆ ಗಟ್ಟಿಯಾಗಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯವನ್ನು ಜಗತ್ತಿನಿಂದ ಅಡಗಿಸಿಡಲಾಗುತ್ತಿಲ್ಲ. ಬಿಜೆಪಿ ಮತ್ತು ಅದರ ಹಿರಿಯ ಮಂತ್ರಿಗಳು ಬಾಂಗ್ಲಾದೇಶೀಯರ ಬಗ್ಗೆ ಬಳಸುತ್ತಿರುವ ಭಾಷೆ ಕೀಳುಮಟ್ಟದ್ದಾಗಿದೆ. ಅದೂ ಅಲ್ಲದೆ, 2014ರ ಬಳಿಕ, ಆರ್ಥಿಕ ಶಕ್ತಿಯಾಗಿ ಭಾರತ ದುರ್ಬಲಗೊಂಡಿದೆ. ಇದರಿಂದಾಗಿ, ಬಾಂಗ್ಲಾದೇಶವು ನಿರಂತರವಾಗಿ ಚೀನಾದತ್ತ ವಾಲುವುದನ್ನು ಮುಂದುವರಿಸುತ್ತಿದೆ. ಚೀನಾದೊಂದಿಗಿನ ಅದರ ವ್ಯಾಪಾರ ವಹಿವಾಟು ಭಾರತದೊಂದಿಗಿನ ವಹಿವಾಟಿಗಿಂತ ದುಪ್ಪಟ್ಟಾಗಿದೆ.

ಪ್ರಶ್ನೆ: ನಿಮ್ಮ ಪುಸ್ತಕದಲ್ಲಿ ಸಿಎಎ ಮತ್ತು ಎನ್‌ಆರ್‌ಸಿಯ ಪರಿಣಾಮಗಳ ಬಗ್ಗೆ ವಿವರವಾಗಿ ಬರೆದಿದ್ದೀರಿ. ಇದು ಭಾರತ-ಬಾಂಗ್ಲಾದೇಶ ಸಂಬಂಧಕ್ಕೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡಿದೆ ಎಂಬುದಾಗಿ ನೀವು ಭಾವಿಸುವುದಾದರೆ, ಅದನ್ನು ಹೇಗೆ ಸರಿಪಡಿಸಬಹುದು? ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆಯೇ?

ಆಕಾರ್ ಪಟೇಲ್: ಪ್ರಧಾನಿ ಮೋದಿ ಮತ್ತು ಬಿಜೆಪಿ ಆಡಳಿತದಲ್ಲಿ ಪರಿಸ್ಥಿತಿ ಸುಧಾರಿಸುವುದಿಲ್ಲ. ಯಾಕೆಂದರೆ ಮುಸ್ಲಿಮ್ ವಿರೋಧಿ ಭಾವನೆಯು ಅವರ ರಕ್ತದಲ್ಲೇ ಬೆರೆತಿದೆ. ಅವರು ಜಗತ್ತನ್ನು ನೋಡುವ ರೀತಿಯೇ ಹಾಗೆ; ಅದು ಬದಲಾಗುವುದಿಲ್ಲ. ಹಾಗಾಗಿ, ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಭಾರತ ತೆಗೆದುಕೊಳ್ಳಬಹುದಾದ ಯಾವುದೇ ಉಪಕ್ರಮಗಳು ಕೃತಕವಾಗಿರುತ್ತವೆ ಹಾಗೂ ಉಭಯ ದೇಶಗಳ ಬಾಂಧವ್ಯದಲ್ಲಿ ಇರುವ ಪ್ರಾಥಮಿಕ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಬಾಂಧವ್ಯವು ವ್ಯವಹಾರಕ್ಕೆ ಸೀಮಿತವಾಗಿರುತ್ತದೆ, ಮಾನವ ಸಂಬಂಧಗಳಿಗೆ ಅದು ಅನ್ವಯಿಸುವುದಿಲ್ಲ. ಭಾರತದ ಗೃಹ ಸಚಿವರು ಬಾಂಗ್ಲಾದೇಶೀಯರನ್ನು ಗೆದ್ದಲುಗಳು ಎಂಬುದಾಗಿ ಎರಡು ಬಾರಿ ಬಣ್ಣಿಸಿದ್ದಾರೆ. ಮೊದಲು 2018 ಸೆಪ್ಟಂಬರ್‌ನಲ್ಲಿ. ಅದನ್ನು ಬಾಂಗ್ಲಾದೇಶದ ಆಗಿನ ಸಚಿವ ಹಸನುಲ್ ಹಕ್ ಖಂಡಿಸಿದ್ದಾರೆ. ಎರಡನೇ ಬಾರಿ ಅವರು ಬಾಂಗ್ಲಾದೇಶೀಯರನ್ನು ಗೆದ್ದಲುಗಳು ಎಂಬುದಾಗಿ ಬಣ್ಣಿಸಿದ್ದು 2019ರಲ್ಲಿ ಸಿಎಎ ಕಾನೂನು ಅನುಮೋದನೆಗೊಳ್ಳುವ ಸ್ವಲ್ಪ ಮೊದಲು. ಸಿಎಎ ಕಾನೂನು ಅಂಗೀಕಾರಗೊಂಡ ಬಳಿಕ, ಬಾಂಗ್ಲಾದೇಶದ ಸಚಿವರಾದ ವಿದೇಶ ಸಚಿವ ಎ.ಕೆ. ಅಬ್ದುಲ್ ಮೂಮಿನ್, ಗೃಹ ಸಚಿವ ಅಸದುಝ್ಝಮಾನ್ ಖಾನ್ ಮತ್ತು ಮುಹಮ್ಮದ್ ಶಹರಿಯಾರ್ ಆಲಮ್ ತಮ್ಮ ಭಾರತ ಪ್ರವಾಸಗಳನ್ನು ರದ್ದುಪಡಿಸಿದರು. ಬಳಿಕ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ಹಲವು ಪ್ರತಿಭಟನೆಗಳು ನಡೆದವು. ಇದು ಮೋದಿ ಆಡಳಿತದಲ್ಲಿ ಭಾರತದಲ್ಲಿ ಏನಾಗುತ್ತಿದೆ ಎನ್ನುವುದು ಸಾಮಾನ್ಯ ಬಾಂಗ್ಲಾದೇಶ ನಾಗರಿಕರಿಗೆ ಗೊತ್ತಿದೆ ಹಾಗೂ ಭಾರತದ ಬಗ್ಗೆ ಅವರಲ್ಲಿ ಯಾವ ಭಾವನೆಗಳಿವೆ ಎನ್ನುವುದನ್ನು ಇದು ತೋರಿಸುತ್ತದೆ.

ಪ್ರಶ್ನೆ: ಬಾಂಗ್ಲಾದೇಶವು ಚೀನಾದತ್ತ ವಾಲುತ್ತಿರುವ ಬಗ್ಗೆ ಮೋದಿ ಸರಕಾರ ಕಳವಳ ಹೊಂದಿದೆ ಎಂದು ನೀವು ಹೇಳುತ್ತೀರಿ. ಅದರಿಂದ ಭಾರತವು ಹೇಗೆ ಹೊರಬರಬಹುದು? ಚೀನಾ ಪರಿಣಾಮವನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶದೊಂದಿಗಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಭಾರತ ಹೇಗೆ ಆ ದೇಶದೊಂದಿಗೆ ಕೈಜೋಡಿಸಬಹುದು?

ಆಕಾರ್ ಪಟೇಲ್: ನೆರೆಯ ದೇಶಗಳ ಮೇಲಿನ ಚೀನಾದ ಪ್ರಭಾವವನ್ನು ತಡೆಯುವುದು ಬಿಡಿ, ನಮ್ಮದೇ ಗಡಿಗಳ ಮೇಲೆ ಚೀನಾ ಹೊಂದಿರುವ ಪ್ರಭಾವವನ್ನು ತಡೆಯುವ ಸಾಮರ್ಥ್ಯ ಭಾರತಕ್ಕಿಲ್ಲ. ಚೀನಾದ ಜಿಡಿಪಿಯು ಭಾರತಕ್ಕಿಂತ ಆರು ಪಟ್ಟು ದೊಡ್ಡ

Writer - ಸೌಮ್ಯ ಬಂದ್ಯೋಪಾಧ್ಯಾಯ

contributor

Editor - ಸೌಮ್ಯ ಬಂದ್ಯೋಪಾಧ್ಯಾಯ

contributor

Similar News