×
Ad

ಉ.ಪ್ರ: ʼಪಾಕಿಸ್ತಾನ್‌ ಝಿಂದಾಬಾದ್‌ʼ ಕೂಗಿದ್ದಾರೆಂದು ಎಸ್ಪಿ-ಆರ್‌ಎಲ್ಡಿ ಅಭ್ಯರ್ಥಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2022-02-05 18:00 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಬಿಜ್ನೋರ್ ಕ್ಷೇತ್ರದಿಂದ ಸ್ಪರ್ಧಿಸಲಿರುವ ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕ ದಳದ ಜಂಟಿ ಅಭ್ಯರ್ಥಿ ಡಾ ನೀರಜ್ ಚೌಧುರಿ ಎಂಬವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. 

ಅಭ್ಯರ್ಥಿಯ ಬೆಂಬಲಿಗರು `ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ. ಆದರೆ ತಮ್ಮ ಬೆಂಬಲಿಗರು, ತಮ್ಮ ಸಹವರ್ತಿ ಅಖೀಬ್ ಅನ್ಸಾರಿ ಅವರನ್ನು ಕೊಂಡಾಡಿ ʼಅಖೀಬ್ ಭಾಯಿ ಜಿಂದಾಬಾದ್' ಹೇಳಿದ್ದರು ಎಂದು ಚೌಧುರಿ ಹೇಳಿದ್ದಾರೆ.

ಚೌಧುರಿ ಬೆಂಬಲಿಗರು `ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಿಕೊಂಡು ಹಲವಾರು ಬಲಪಂಥೀಯ ಮಂದಿ ಹಾಗೂ ಕೆಲ ವೆರಿಫೈಡ್ ಟ್ವಿಟ್ಟರ್ ಖಾತೆ ಹೊಂದಿರುವವರೂ ವೀಡಿಯೋ ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ ಕೆಲ ಮಂದಿ ಮೆರವಣಿಗೆಯಲ್ಲಿ ಸಾಗುತ್ತಾ ಮನೆ ಮನೆ ಪ್ರಚಾರ ನಡೆಸುತ್ತಿರುವದು ಕಾಣಿಸುತ್ತದೆ. ಧ್ವನಿಯಲ್ಲಿ ಅಸ್ಪಷ್ಟತೆಯಿದ್ದರೂ ʼಅಖೀಬ್ ಭಾಯಿ ಜಿಂದಾಬಾದ್ʼ ಹೇಳುವುದು ಕೇಳಿಸುತ್ತದೆ. ಅಖೀಬ್ ಭಾಯಿ ಎಂಬವರು ಬಿಜ್ನೋರ್ ಕಾರ್ಪೊರೇಟರ್ ಒಬ್ಬರ ಪತಿಯಾಗಿದ್ದು ಹಾಗೂ ಚೌಧುರಿ ಅವರ ಸಮೀಪವರ್ತಿಯಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಚೌಧುರಿ ಅವರು ಮೊದಲ ಬಾರಿ ಸ್ಪರ್ಧಿಸುತ್ತಿದ್ದು ಈ ದೂಷಣೆಗೆ ಬಿಜೆಪಿ ಐಟಿ ಸೆಲ್ ಕಾರಣ, ಎಫ್‍ಐಆರ್ ದಾಖಲಿಸುವ ಮುನ್ನ ಪೊಲೀಸರು ವೀಡಿಯೋ ನೋಡಿ ಅದರಲ್ಲಿನ ಮಾತುಗಳನ್ನು ಆಲಿಸುವ ಗೋಜಿಗೂ ಹೋಗಿಲ್ಲ ಎಂದಿದ್ದಾರೆ.

ವೀಡಿಯೋ ಕ್ಲಿಪ್ ಅನ್ನು ಪರಿಶೀಲಿಸುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News