ಆರೋಪಿ ಶಿರಿಯಾರ ಗ್ರಾಪಂ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ನಾಗರಾಜ್ ಶೆಟ್ಟಿ ಬಂಧನಕ್ಕೆ ಸಮತಾ ಸೈನಿಕದಳ ಒತ್ತಾಯ
ಉಡುಪಿ, ಫೆ.5: ದಲಿತ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿರುವ ಪ್ರಕರಣದ ಆರೋಪಿಗಳಾದ ಶಿರಿಯಾರ ಗ್ರಾಪಂ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಹಾಗೂ ನಾಗರಾಜ್ ಶೆಟ್ಟಿಯನ್ನು ಐದು ದಿನಗಳೊಳಗೆ ಬಂಧಿಸದಿದ್ದಲ್ಲಿ ಎಸ್ಪಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಸಮತಾ ಸೈನಿಕದಳ ಹಾಗೂ ಭೀಮ್ ಆರ್ಮಿ ಸಂಘಟನೆ ಎಚ್ಚರಿಕೆ ನೀಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಶಿರಿಯಾರ ಗ್ರಾಮದ ಸಂತೋಷ್ ಪಾಣಾರಿಗೆ ಎಂಬವರಿಗೆ ಆರೋಪಿಗಳು ಜ.30ರಂದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್ ದಾಖಲಾಗಿ ಹಲವು ದಿನಗಳು ಕಳೆದರೂ ಇನ್ನು ಆರೋಪಿಗಳನ್ನು ಬಂಧಿಸದಿರುವುದು ವಿಪರ್ಯಾಸವೇ ಸರಿ ಎಂದು ದೂರಿದರು.
ಆರೋಪಿಗಳು ಅಕ್ರಮ ಮರಳು ಹಾಗೂ ಕಲ್ಲು ಕೋರೆ ದಂಧೆಗಳನ್ನು ನಡೆಸುತ್ತಿದ್ದು, ರಾಜಕೀಯ ಪ್ರಭಾವಿಗಳಾಗಿದ್ದಾರೆ. ಇವರು ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರಿಗೆ ಸಾಕ್ಷಿ ನುಡಿಯದಂತೆ ಬೆದರಿಕೆಯೊಡ್ಡುತ್ತಿದ್ದು, ದೂರುದಾರ ಹಾಗೂ ಅವರ ಮನೆಯವರಿಗೆ ಕೇಸ್ ವಾಪಾಸ್ಸು ಪಡೆಯುವಂತೆ ಬೆದರಿಕೆಯೊಡ್ಡಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಪ್ರಕಾಶ್ ಹೇರೂರು, ಜ್ಯೋತಿ ಶಿರಿಯಾರ, ಉಮೇಶ್ ಹಂದಾಡಿ, ವೈ.ಕೆ. ಸುಂದರ್, ಸಂತೋಷ್ ಪಾಣಾ ಉಪಸ್ಥಿತರಿದ್ದರು.