×
Ad

"ಮುಸ್ಲಿಂ ಮಾಲಕತ್ವದ ಹೋಟೆಲ್‌ ಮುಂದೆ ಬಸ್‌ ಗಳನ್ನು ನಿಲ್ಲಿಸಬಾರದು": ಹಿಂದುತ್ವ ಗುಂಪುಗಳಿಂದ ಎಚ್ಚರಿಕೆ

Update: 2022-02-05 21:44 IST
Photo: Thewire.in

ಅಹಮದಾಬಾದ್: ಗುಜರಾತಿನ ಸೌರಾಷ್ಟ್ರ ಭಾಗದಲ್ಲಿ ಮುಸ್ಲಿಂ ರೆಸ್ಟೋರೆಂಟ್‌ ಮಾಲಕರ ವಿರುದ್ಧ ವ್ಯವಸ್ಥಿತವಾಗಿ ದ್ವೇಷ ಪ್ರಚಾರ ನಡೆಯುತ್ತಿದೆ. ಹೆದ್ದಾರಿಗಳಲ್ಲಿರುವ ಮುಸ್ಲಿಮರ ರೆಸ್ಟಾರೆಂಟ್‌ಗಳಲ್ಲಿ ಬಸ್‌ಗಳನ್ನು ನಿಲ್ಲಿಸಿದರೆ ಅದರ ಗಂಭೀರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಪ್ರವೀಣ್‌ ತೊಗಾಡಿಯಾ ನೇತೃತ್ವದ ಅಂತರಾಷ್ಟ್ರೀಯಾ ವಿಶ್ವ ಹಿಂದೂ ಪರಿಷತ್‌ ಮತ್ತು ಅಂತರಾಷ್ಟ್ರೀಯ ಬಜರಂಗದಳಗಳು ಪ್ರಚಾರ ಮಾಡುತ್ತಿವೆ.

ಬಸ್‌ ಚಾಲಕ ಮತ್ತು ನಿರ್ವಾಹಕರಿಗೆ ಬೆದರಿಸುವ ಸಂದೇಶದ ವಿಡಿಯೋ ಮತ್ತು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಮುಸ್ಲಿಮರ ಒಡೆತನದಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಬಸ್‌ ನಿಲ್ಲಿಸಿರುವುದು ಕಂಡು ಬಂದರೆ ನಂತರ ಎದುರಿಸಬೇಕಾದ ಪರಿಣಾಮಗಳಿಗೆ ನೀವೇ ಜವಾಬ್ದಾರರು ಎಂದು ಎಚ್ಚರಿಸಲಾಗಿದೆ.

ಅಂತಹ ವಾಹಗಳು ಹಾನಿಗೊಳಗಾಗಬಹುದು ಎಂದು ಎಚ್ಚರಿಸಿದ್ದು, ಮುಸ್ಲಿಂ ಮಾಲಕತ್ವದ ರೆಸ್ಟೋರೆಂಟ್‌ಗಳಲ್ಲಿ ಬಸ್‌ ನಿಲ್ಲಿಸುವುದು ಕಂಡು ಬಂದರೆ ನಮಗೆ ಮಾಹಿತಿ ನೀಡುವಂತೆ “ನಿಜವಾದ ಹಿಂದೂ” ಗಳಲ್ಲಿ ಕೋರಲಾಗಿದೆ.

ಇಂತಹ ಅಭಿಯಾನದ ಬಳಿಕ ನಮ್ಮ ರೆಸ್ಟೋರೆಂಟ್‌ಗಳಲ್ಲಿ ವ್ಯಾಪಾರ ಕುಸಿದಿದೆ, ಬಸ್‌ ಪ್ರಯಾಣಿಕರು ಚಾಲಕರಲ್ಲಿ ಹಿಂದೂ ಒಡೆತನದ ಢಾಬಾಗಳಿಗೆ ಕರೆದೊಯ್ಯುವಂತೆ ಕೇಳುತ್ತಿದ್ದಾರೆಂದು ನಮ್ಮ ಗೆಳೆಯರಾಗಿರುವ ಬಸ್‌ ಚಾಲಕರೊಬ್ಬರು ತಿಳಿಸಿದ್ದಾರೆಂದು ಸೌರಾಷ್ಟ್ರ ಹೆದ್ದಾರಿಯಲ್ಲಿ ರೆಸ್ಟಾರೆಂಟ್‌ ನಡೆಸುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬರು ದಿ ವೈರ್‌ಗೆ ತಿಳಿಸಿದ್ದಾರೆ.

ತಮ್ಮ ರೆಸ್ಟಾರೆಂಟುಗಳಲ್ಲಿ ಯಾವುದೇ ರೀತಿಯ ಮಾಂಸಹಾರದ ಖಾದ್ಯಗಳು ಇಲ್ಲ, ಮೊಟ್ಟೆ ಸಂಬಂಧಿಸಿದ ಆಹಾರ ಕೂಡಾ ಇಲ್ಲ. ಸಸ್ಯಹಾರ ಮಾತ್ರ ನಾವು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಮುಸ್ಲಿಂ ಹೋಟೆಲ್‌ ಮಾಲಕರು ಹೇಳುತ್ತಾರೆ.

ಗುಜರಾತಿನ ಹೆದ್ದಾರಿಗಳಲ್ಲಿ ಮುಸ್ಲಿಮರಿಗೆ ಸೇರಿದ ಬಹುತೇಕ ರೆಸ್ಟೋರೆಂಟುಗಳಿಗೆ ಭಾರತ್‌, ನವ್‌ಭಾರತ್‌, ತುಳಸಿ, ಕಬೀರ, ಜೈಹಿಂದ್‌, ಸರ್ವೋದಯ ಮೊದಲಾದ ಹೆಸರುಗಳಿದ್ದು, ಮಾಂಸಹಾರವನ್ನು ಯಾರೂ ತಯಾರಿಸುವುದಿಲ್ಲ.

ಆದರೆ, ಮುಸ್ಲಿಮರ ರೆಸ್ಟೋರೆಂಟುಗಳ ವಿರುದ್ಧ ದ್ವೇಷದ ಅಭಿಯಾನ ನಡೆಸುತ್ತಿರುವವರಲ್ಲಿ ಪ್ರಮುಖರಾದ ಅಂತರಾಷ್ಟ್ರೀಯ ವಿಎಚ್‌ಪಿಯ ಸೂರತ್ ಘಟಕದ ಕಾರ್ಯದರ್ಶಿ ರಾಜು ಶೆವಾಲ್ “ಮುಸ್ಲಿಮರು ಮಾಂಸಹಾರ ಹಾಗೂ ಸಸ್ಯಹಾರ ಖಾದ್ಯಗಳನ್ನು ಒಂದೇ ಪಾತ್ರೆಗಳಲ್ಲಿ ತಯಾರು ಮಾಡುತ್ತಾರೆ. ಅಲ್ಲದೆ, ಸಸ್ಯಾಹಾರ ಸೇವಿಸುವ ಗ್ರಾಹಕರ ಆಹಾರಕ್ಕೆ ಉಗಿಯುತ್ತಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇವೆ” ಎಂದು ದ್ವೇಷ ಪ್ರಚಾರವನ್ನು ಸಮರ್ಥಿಸಿಕೊಂಡಿದ್ದಾರೆ.

ವೈಬ್ಸ್ ಆಫ್ ಇಂಡಿಯಾಗೆ ನೀಡಿದ ಮಾಹಿತಿಯಲ್ಲಿ, ಗುಜರಾತ್‌ ಬಸ್‌ ಚಾಲಕ ನಿರ್ವಾಹಕರೊಂದಿಗೆ ನಾವು ಸಭೆ ನಡೆಸಿದ್ದೇವೆ, ಮುಸ್ಲಿಮರ ಹೋಟೆಲುಗಳಲ್ಲಿ ನಿಲ್ಲಿಸುವ ಬಸ್‌ಗಳು ತಕ್ಕ ಪರಿಣಾಮ ಎದುರಿಸಬೇಕಾದೀತೆಂದು ಎಚ್ಚರಿಸಿದ್ದೇವೆ, ತಮ್ಮ ವಾಹನಗಳಿಗೆ ಹಾನಿ ಸಂಭವಿಸಬಾರದೆಂದಿದ್ದರೆ, ಮುಸ್ಲಿಮರು ನಡೆಸುವ ರೆಸ್ಟೋರೆಂಟ್‌ಗಳಲ್ಲಿ ನಿಲ್ಲಿಸಬೇಡಿ ಎಂದು ಸೂಚನೆ ನೀಡಿರುವುದಾಗಿ ರಾಜು ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News