ಪ್ರಧಾನಿ ಮೋದಿ, ಆದಿತ್ಯನಾಥ್ ರನ್ನು ಟೀಕಿಸಿದ ಆರೋಪ; ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೇಶದ್ರೋಹ ಪ್ರಕರಣ!

Update: 2022-02-06 02:20 GMT
ಅಜಯ್ ರಾಯ್ (ಫೋಟೊ - PTI)

ವಾರಾಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ದ್ವೇಷಭಾಷಣ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ವಾರಾಣಾಸಿ ಜಿಲ್ಲೆಯ ಪಿಂಡ್ರಾ ಕ್ಷೇತ್ರದ ರಾಜೇತರ ಗ್ರಾಮದಲ್ಲಿ "ಅನಧಿಕೃತ" ಚುನಾವಣಾ ಪ್ರಚಾರಸಭೆ ಆಯೋಜಿಸಿದ್ದಕ್ಕಾಗಿ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮತ್ತು ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆ ಆರೋಪವನ್ನೂ ಅವರ ವಿರುದ್ಧ ಹೊರಿಸಲಾಗಿದೆ.

ಚುನಾವಣೆ ಪ್ರಚಾರ ಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪ ಹೊರಿಸಿ ಬಿಜನೋರ್ ಕ್ಷೇತ್ರದ ರಾಷ್ಟ್ರೀಯ ಲೋಕದಳ ಅಭ್ಯರ್ಥಿ ನೀರಜ್ ಚೌಧರಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾದ ಬೆನ್ನಲ್ಲೇ ರಾಯ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಪಿಂಡ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಯ್ ಕಣದಲ್ಲಿದ್ದಾರೆ. ಶನಿವಾರ ಸಂಜೆ ಸ್ಥಳೀಯ ಚುನಾವಣಾಧಿಕಾರಿಯ ವರದಿ ಹಿನ್ನೆಲೆಯಲ್ಲಿ ಫೂಲ್‌ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೇಶದ್ರೋಹ ಪ್ರಕರಣ (ಸೆಕ್ಷನ್ 124ಎ)ದ ಹೊರತಾಗಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 269 (ಕಾನೂನುಬಾಹಿರವಾಗಿ ಅಥವಾ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯವಾದ ಸೋಂಕು ಹರಡುವುದು), 153 (ದಂಗೆ ಉಂಟು ಮಾಡುವ ಸಲುವಾಗಿ ಪ್ರಚೋದನಾಕಾರಿ ಭಾಷಣ), 153ಎ (ಧರ್ಮ, ವರ್ಗದ ಆಧಾರದಲ್ಲಿ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದು) ಮತ್ತು 188 (ಸಾರ್ವಜನಿಕ ಅಧಿಕಾರಿಯ ಆದೇಶವನ್ನು ಧಿಕ್ಕರಿಸಿರುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಜಯ್ ರಾಯ್ ಅವರ ವಿರುದ್ಧ ಹಲವು ದೂರುಗಳು ಬಂದಿದ್ದವು. ನಾಲ್ಕು ಮಂದಿಯ ತಂಡವನ್ನು ರಚಿಸಿ ವಿಚಾರಣೆ ನಡೆಸಿದಾಗ ತಪ್ಪಿತಸ್ಥ ಎಂದು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ" ಎಂದು ಜಿಲ್ಲಾಧಿಕಾರಿ ಮತ್ತು ಪಿಂಡ್ರಾ ಚುನಾವಣಾಧಿಕಾರಿ ರಾಜೀವ್ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News