ರಾಜ್ಯ ಚುನಾವಣೆ: ರೋಡ್‌ಶೋಗಳ ಮೇಲೆ ಚುನಾವಣಾ ಆಯೋಗದ ನಿಷೇಧ ಮುಂದುವರಿಕೆ

Update: 2022-02-06 16:04 GMT

ಹೊಸದಿಲ್ಲಿ,ಫೆ.6: ಉತ್ತರ ಪ್ರದೇಶ,ಗೋವಾ,ಮಣಿಪುರ,ಪಂಜಾಬ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳಿಗಾಗಿ ರೋಡ್ಶೋಗಳು, ಪಾದಯಾತ್ರೆಗಳು,ಸೈಕಲ್ ಮತ್ತು ವಾಹನ ರ್ಯಾಲಿಗಳ ಮೇಲಿನ ನಿಷೇಧವನ್ನು ಚುನಾವಣಾ ಆಯೋಗವು ಮುಂದುವರಿಸಿದೆ. ಆದರೆ ಒಳಾಂಗಣ ಮತ್ತು ಹೊರಾಂಗಣ ರಾಜಕೀಯ ಸಭೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ.

ದೇಶದಲ್ಲಿಯ ಕೊರೋನವೈರಸ್ ಸಾಂಕ್ರಾಮಿಕ ಸ್ಥಿತಿಯ ಪುನರ್ಪರಿಶೀಲನೆಗಾಗಿ ರವಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ಸಭೆಯ ಬಳಿಕ ಆಯೋಗವು ಈ ನಿರ್ಧಾರಕ್ಕೆ ಬಂದಿದೆ.

ಭಾಗವಹಿಸುವ ಜನರ ಸಂಖ್ಯೆಯು ಒಳಾಂಗಣಗಳ ಸಾಮರ್ಥ್ಯದ ಶೇ.50 ಮತ್ತು ಹೊರಾಂಗಣಗಳ ಸಾಮರ್ಥ್ಯದ ಶೇ.30ನ್ನು ಅಥವಾ ಸುರಕ್ಷಿತ ಅಂತರ ನಿಯಮಕ್ಕನುಗುಣವಾಗಿ ಜಿಲ್ಲಾ ಚುನಾವಣಾಧಿಕಾರಿಗಳು ನಿಗದಿ ಗೊಳಿಸುವ ಸಂಖ್ಯೆಯನ್ನು ಮೀರುವಂತಿಲ್ಲ ಎಂಬ ಷರತ್ತಿಗೊಳಪಟ್ಟು ಹೊರಾಂಗಣ ಮತ್ತು ಒಳಾಂಗಣ ಸಭೆಗಳು ಹಾಗೂ ರ್ಯಾಲಿಗಳ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಸಲಾಗುವುದು ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಂಡ ಬಳಿಕ ಜ.8ರಂದು ರಾಜಕೀಯ ರ್ಯಾಲಿಗಳನ್ನು ನಿಷೇಧಿಸಲು ನಿರ್ಧರಿಸಲಾಗಿತ್ತು. ಅಲ್ಲಿಂದೀಚೆಗೆ ಕ್ರಮೇಣ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಐದು ರಾಜ್ಯಗಳಲ್ಲಿ ಏಳು ಹಂತಗಳ ಚುನಾವಣೆಗಳು ಫೆ.10ರಿಂದ ಆರಂಭಗೊಳ್ಳುತ್ತವೆ. ಮಾ.10ರಂದು ಮತಗಳ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News