×
Ad

ಅಂಡರ್-19 ವಿಶ್ವಕಪ್ ಫೈನಲ್ ನಲ್ಲಿ ಮಿಂಚಿದ ಒಲಿಂಪಿಕ್ಸ್ ಚಾಂಪಿಯನ್ ಮೊಮ್ಮಗ ರಾಜ್ ಬಾವಾ

Update: 2022-02-06 12:42 IST
Photo:ICC

ಆಂಟಿಗುವಾ:  ಇಂಗ್ಲೆಂಡ್ ವಿರುದ್ಧ ಶನಿವಾರ ರಾತ್ರಿ ದಾಖಲೆಯ ಐದನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತವು ಅಂಡರ್-19 ವಿಶ್ವಕಪ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ಪಂದ್ಯಾವಳಿಯುದ್ದಕ್ಕೂ ಭಾರತಕ್ಕಾಗಿ ಹಲವು ಆಟಗಾರರು ಪ್ರಮುಖ ಕಾಣಿಕೆ ನೀಡಿದ್ದಾರೆ. ಆದರೆ ಅಂತಿಮ ಪಂದ್ಯದಲ್ಲಿ ಓರ್ವ ಆಟಗಾರ ಬ್ಯಾಟ್  ಹಾಗೂ ಬೌಲಿಂಗ್ ನಲ್ಲಿ ಮಿಂಚುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.  ಅವರ ಹೆಸರು- ರಾಜ್ ಅಂಗದ್ ಬಾವಾ. ಆಲ್‌ರೌಂಡರ್ ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖ ಕೊಡುಗೆಗಳನ್ನು ನೀಡಿ 'ಪಂದ್ಯಪುರುಷ' ಪ್ರಶಸ್ತಿಯನ್ನು ಗೆದ್ದರು.

ರಾಜ್ ಬಾವಾ ಕ್ರೀಡಾ ಕುಟುಂಬದಿಂದ ಬಂದವರು. ರಾಜ್ ಬಾವಾ 1948 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸದಸ್ಯ ತರ್ಲೋಚನ್ ಸಿಂಗ್ ಬಾವಾ ಅವರ ಮೊಮ್ಮಗ.

ವಾಸ್ತವವಾಗಿ ತರ್ಲೋಚನ್ ಕೂಡ 1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಪ್ರಮುಖ ಕಾಣಿಕೆ ನೀಡಿದ್ದರು. ಆಗ ಅವರು ಎರಡು ಗೋಲುಗಳನ್ನು ಗಳಿಸಿದ್ದರು. ಅವುಗಳಲ್ಲಿ ಒಂದು ಗೋಲು  ಆತಿಥೇಯ ಗ್ರೇಟ್ ಬ್ರಿಟನ್ ವಿರುದ್ಧ ಫೈನಲ್‌ನಲ್ಲಿ ದಾಖಲಿಸಿದ್ದರು.

1948ರಲ್ಲಿ  ಭಾರತೀಯ ತಂಡ  ಸತತ ನಾಲ್ಕನೇ ಒಲಿಂಪಿಕ್ ಚಿನ್ನದ ಪದಕ ಗೆದ್ದಿದ್ದರೂ, ಭಾರತೀಯ ತ್ರಿವರ್ಣ ಧ್ವಜದಡಿಯಲ್ಲಿ ಮೊದಲನೆಯ ಬಾರಿ ಚಿನ್ನ ಗೆಲ್ಲಲಾಗಿತ್ತು.

ರಾಜ್ ಬಾವಾ ಫೈನಲ್‌ನಲ್ಲಿ ಮಾತ್ರವಲ್ಲ, ಪಂದ್ಯಾವಳಿಯುದ್ದಕ್ಕೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಅದ್ಭುತ ಸಾಮರ್ಥ್ಯಗಳನ್ನು ಪ್ರದರ್ಶಿಸಿದರು.

ಉಗಾಂಡ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 108 ಎಸೆತಗಳಲ್ಲಿ ಔಟಾಗದೆ 162 ರನ್ ಗಳಿಸಿದ್ದರು.

ಐಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ಬಾವಾ ಐದು ವಿಕೆಟ್ ಗೊಂಚಲು ಪಡೆದ ಭಾರತ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಆ ನಂತರ 54 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ಭಾರತವು 14 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 190 ರನ್‌ಗಳ ಗುರಿಯನ್ನು ಬೆನ್ನಟ್ಟಲು  ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News