×
Ad

ಮೋದಿ ಉದ್ಘಾಟಿಸಿದ ಬಹುಕೋಟಿ ವೆಚ್ಚದ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣವಾದದ್ದು ಚೀನಾದಲ್ಲಿ.!

Update: 2022-02-06 14:10 IST

ಹೈದರಾಬಾದ್:‌ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ರಾಮಾನುಜಾಚಾರ್ಯರ ಪ್ರತಿಮೆ ಚೀನಾದಲ್ಲಿ ನಿರ್ಮಾಣಗೊಂಡಿದೆ ಎಂದು ವರದಿಗಳು ತಿಳಿಸಿವೆ.

2015 ರಲ್ಲಿ ನಡೆದ ಯೋಜನೆಯ ಬಿಡ್‌ ಪ್ರಕ್ರಿಯೆಯಲ್ಲಿ ಭಾರತ ಮೂಲದ ಕಂಪೆನಿಯನ್ನು ಮಣಿಸಿ ಚೀನಾ ಮೂಲದ Aerosun corporation ಎಂಬ ಸಂಸ್ಥೆ ಈ ಯೋಜನೆಯನ್ನು ತನ್ನದಾಗಿಸಿಕೊಂಡಿತ್ತು.

 ಮೂರ್ತಿಯ ನಿರ್ಮಾಣ ಕಾರ್ಯಗಳು ಚೀನಾದಲ್ಲೇ ಪೂರ್ತಿಯಾಗಿದ್ದು, 1600 ಭಾಗಗಳಾಗಿ ಮೂರ್ತಿಯನ್ನು ಭಾರತಕ್ಕೆ ತರಲಾಗಿತ್ತು. 2017/18 ರಲ್ಲಿ ಆರಂಭವಾದ ಜೋಡಣೆ ಪ್ರಕ್ರಿಯೆಯು ಬರೋಬ್ಬರಿ 15 ತಿಂಗಳಲ್ಲಿ ಪೂರ್ತಿಯಾಗಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ರಾಮಾನುಜಾಚಾರ್ಯರ ಪ್ರತಿಮೆಯ 14 ಮಾದರಿಗಳನ್ನು ಆರಂಭದಲ್ಲಿ ಆಗಮ ಮತ್ತು ಶಿಲ್ಪ ಶಾಸ್ತ್ರ ಸೂತ್ರಗಳನ್ನು ಸೇರಿಸಿ ತಯಾರಿಸಲಾಯಿತು, ಅವುಗಳಲ್ಲಿ ಮೂರು ಮಾದರಿಗಳನ್ನು 3D ಸ್ಕ್ಯಾನಿಂಗ್‌ನೊಂದಿಗೆ ಪರೀಕ್ಷಿಸಿ ಮತ್ತಷ್ಟು ಸುಧಾರಿಸಲಾಯಿತು. ನಂತರ ಅಂತಿಮ ಮಾದರಿಯನ್ನು ಚೀನಾಕ್ಕೆ ಕಳುಹಿಸಲಾಗಿತ್ತು.

ಇದೀಗ ಸಮಾನತೆಯ ಪ್ರತಿಮೆ ಎಂದು ಮೋದಿ ಹೇಳಿರುವ ರಾಮಾನುಜಾಚಾರ್ಯರ ಪ್ರತಿಮೆಯು ಚೀನಾದಲ್ಲಿ ನಿರ್ಮಾಣವಾಗಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಗಾಲ್ವಾನ್‌ ಕಣಿವೆ ಸಂಘರ್ಷದ ಬಳಿಕವಂತೂ ಚೀನಾ ವಿರೋಧಿ ಅಭಿಯಾನಗಳು ಬಹುವಾಗೇ ನಡೆದಿದ್ದ ಹಿನ್ನೆಲೆಯಲ್ಲಿ ಈ ಮೂರ್ತಿಯನ್ನು ಚೀನಾ ಕಂಪೆನಿಯೇ ನಿರ್ಮಿಸಿದೆ ಎನ್ನುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ವದೇಶಿ, ಮೇಕ್‌ ಇನ್‌ ಇಂಡಿಯಾ, ಚೀನಾ ಬಹಿಷ್ಕಾರ, ಆತ್ಮ ನಿರ್ಭರ ಭಾರತ ಮೊದಲಾದವು ಬರೀ ಬಾಯಿ ಮಾತು ಮಾತ್ರವೇ? ನಮ್ಮಿಂದ ಒಂದು ಮೂರ್ತಿಯನ್ನೂ ನಿರ್ಮಿಸಲು ಸಾಧ್ಯವಿಲ್ಲವೇ? ಚೀನಾದೊಂದಿಗೆ ಈಗಲೂ ನರೇಂದ್ರ ಮೋದಿ ಸ್ನೇಹಿತರಾಗಿ ಉಳಿದಿದ್ದಾರೆಯೇ? ಚೀನಾದೊಂದಿಗೆ ವಹಿವಾಟು ನಡೆಸುತ್ತಿದ್ದಾರೆಯೇ ಎಂದು ಟ್ವಿಟರ್‌ ಬಳಕೆದಾರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News