×
Ad

ಕಾಂಗ್ರೆಸ್‌ ಮುಖಂಡನ ಫೋಟೊವನ್ನು ʼಮುಸ್ಲಿಂ ಧರ್ಮಗುರುʼವಿನಂತೆ ತಿರುಚಿದ ಬಿಜೆಪಿಗೆ ಚು.ಆಯೋಗದಿಂದ ನೋಟಿಸ್

Update: 2022-02-06 16:56 IST

ಹೊಸದಿಲ್ಲಿ: ಕಾಂಗ್ರೆಸ್ ನ ಹಿರಿಯ ಮುಖಂಡ ಹರೀಶ್ ರಾವತ್ ಅವರನ್ನು ಮುಸ್ಲಿಂ ಧರ್ಮಗುರು ಎಂಬಂತೆ ಬಿಂಬಿಸಿರುವ ಟ್ವೀಟ್‌ನ ಕುರಿತು ಚುನಾವಣಾ ಆಯೋಗವು ಭಾರತೀಯ ಜನತಾ ಪಕ್ಷದ ಉತ್ತರಾಖಂಡ್ ಘಟಕಕ್ಕೆ ಶನಿವಾರ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.

ಇದೀಗ ಡಿಲೀಟ್ ಮಾಡಿರುವ ಟ್ವೀಟ್ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಪಕ್ಷಕ್ಕೆ ಸೂಚಿಸಿದೆ.

"ಪಕ್ಷದ ಕಾನೂನು ತಂಡವು ಈ ವಿಷಯವನ್ನು ಪರಿಶೀಲಿಸುತ್ತದೆ" ಎಂದು ಉತ್ತರಾಖಂಡ ಬಿಜೆಪಿಯ ಉಪಾಧ್ಯಕ್ಷ ದೇವೇಂದ್ರ ಭಾಸಿನ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. "ಸತ್ಯಾಸತ್ಯತೆಯನ್ನು ಸರಿಯಾಗಿ ಪರಿಶೀಲಿಸಿದ ಬಳಿಕ, ನಾವು ನಮ್ಮ ಪ್ರತಿಕ್ರಿಯೆಯನ್ನು ನೀಡುತ್ತೇವೆ" ಎಂದು ಅವರು ಹೇಳಿದರು.

ಬಿಜೆಪಿಯು ಪ್ರಚೋದನಕಾರಿ ಮತ್ತು ಗಂಭೀರವಾಗಿ ಭಾವನೆಗಳನ್ನು ಕೆರಳಿಸುವ ಹೇಳಿಕೆಗಳನ್ನು ನೀಡಿದೆ ಎಂದು ಚುನಾವಣಾ ಆಯೋಗ ಹೇಳಿದೆ. "ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು" ಎಂದು ಚುನಾವಣಾ ಆಯೋಗ ಹೇಳಿದೆ.

ಶುಕ್ರವಾರ, ಬಿಜೆಪಿಯ ಉತ್ತರಾಖಂಡ ಘಟಕವು ಗಡ್ಡ ಮತ್ತು ಟೋಪಿ ಹೊಂದಿರುವ, ರಾವತ್ ಮುಸ್ಲಿಂ ಎಂದು ಬಿಂಬಿಸುವ ತಿರುಚಲ್ಪಟ್ಟ ಫೋಟೋವನ್ನು ಟ್ವೀಟ್ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಸಮಿತಿಗೆ ದೂರು ನೀಡಿತ್ತು.

ವಿವಿಧ ಧರ್ಮಗಳ ಜನರ ನಡುವೆ ಧಾರ್ಮಿಕ ಆಧಾರದ ಮೇಲೆ ಅಸಂಗತತೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಬಿಜೆಪಿ ಉತ್ತರಾಖಂಡದ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸುವಂತೆ ಅದು ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News