ಉದ್ಯೋಗ ಸೃಷ್ಟಿ, ಹಣದುಬ್ಬರ ತಡೆಗೆ ಕ್ರಮ ಇಲ್ಲ: ಶಶಿ ತರೂರ್
ಹೊಸದಿಲ್ಲಿ: ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟನ್ನು ಸೋಮವಾರ ಸಂಸತ್ತಿನಲ್ಲಿ ಕಟುವಾಗಿ ಟೀಕಿಸಿದ ಕಾಂಗ್ರೆಸ್ ಮುಖಂಡ ಶಶಿ ತರೂರ್, ಸಮಾಜ ಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿರುವ ಕ್ರಮವನ್ನು ಖಂಡಿಸಿದರು. ಜತೆಗೆ ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಅಥವಾ ಉದ್ಯೋಗ ಸೃಷ್ಟಿಗೆ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ ಎಂದು ಹೇಳಿದರು.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭಿಸಿ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕವು ಜನರನ್ನು ಕಲ್ಪನಾತೀತವಾಗಿ ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ವರ್ಷದ ಮಾರ್ಚ್‌ನಿಂದ ಮೇ ತಿಂಗಳ ವರೆಗೆ ಜೀವಗಳನ್ನು ಕಳೆದುಕೊಂಡು ಹಲವು ಕುಟುಂಬಗಳು ನೋವು ಅನುಭವಿಸಿವೆ ಎಂದು ಹೇಳಿದರು.
ಇಂಥ ಪರಿಸ್ಥಿತಿಯಲ್ಲಿ ಬಜೆಟ್ ಮಂಡನೆಯನ್ನು ಕೇವಲ ಮಾಮೂಲಿ ಆರ್ಥಿಕ ಕ್ರಮವಾಗಿ ಅಥವಾ ಸರ್ಕಾರದ ಮುಂಗಡ ಲೆಕ್ಕಪತ್ರದ ಕ್ರಮವಾಗಿ ಪರಿಗಣಿಸದೇ, ದೇಶದ ನೋವು ಶಮನಗೊಳಿಸುವ ಸಾಧನವಾಗಿ ಮತ್ತು ಪುನಶ್ಚೇತನದ ಮಾರ್ಗವಾಗಿ ಪರಿಗಣಿಸಬೇಕು ಎಂದು ಸಲಹೆ ಮಾಡಿದರು.
ಜನೋಪಯೋಗಿ ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ. ಎಂಎಸ್‌ಎಂಇ ವಲಯಕ್ಕೆ ನೀಡುವ ಸಾಲ ನೆರವು ಸಾಂಕೇತಿಕವಾಗಿದೆ. ವೈಯಕ್ತಿಕ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಹಾಗೂ ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ಯೋಗ ಸೃಷ್ಟಿಗೆ ನಿಗದಿತ ಗಂಭೀರ ಪ್ರಯತ್ನಗಳು ಕಂಡುಬರುತ್ತಿಲ್ಲ ಎಂದು ವಿಶ್ಲೇಷಿಸಿದರು.
ಬಜೆಟ್ ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಪ್ರಸ್ತಾವ ಮಾಡಿದ್ದು, ಇದು ಅಸಮರ್ಪಕ. ಸರ್ಕಾರ ಅಚ್ಛೇದಿನ್ ಭರವಸೆಯಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿತ್ತು ಎಂದು ತರೂರ್ ನೆನಪಿಸಿದರು.
ಸಮಾಜ ಕಲ್ಯಾಣದ ಜತೆಗೆ ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಮತ್ತು ರಸಗೊಬ್ಬರ ಸಬ್ಸಿಡಿಗೆ ಕೂಡಾ ಅನುದಾನ ಕಡಿತಗೊಳಿಸಿದ್ದು, ರೈತರು ಇದನ್ನು ಪ್ರತೀಕಾರದ ಬಜೆಟ್ ಎಂದು ಬಣ್ಣಿಸುತ್ತಿದ್ದಾರೆ ಎಂದು ಹೇಳಿದರು. ಕಳೆದ ಐದು ವರ್ಷದಲ್ಲಿ ಲಕ್ಷಾಂತರ ಮಂದಿಯ ಆದಾಯ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ ಎಂದು ಅವರು ಪ್ರತಿಪಾದಿಸಿದರು.