×
Ad

ಉಡುಪಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

Update: 2022-02-08 21:59 IST

ಉಡುಪಿ, ಫೆ.8: ನಮ್ಮ ಹಿಂದಿನ ಮಹನೀಯರ ಜಯಂತಿಗಳನ್ನು ಕೆಲವೊಂದು ಜಾತಿಗಳಿಗೆ ಸೀಮಿತಗೊಳಿಸದೇ ಸಮಾಜದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ ಸದಾಶಿವ ಪ್ರಭು ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿ ಅಂಗವಾಗಿ, ಸವಿತಾ ಮರ್ಹ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತಿದ್ದರು.

ಮಹರ್ಷಿಗಳನ್ನು ಒಂದೇ ವರ್ಗಕ್ಕೆ ಸೀಮಿತಗೊಳಿಸಬಾರದು. ಏಕೆಂದರೆ ಅವರು ತೋರಿಸಿ ಕೊಟ್ಟಂತಹ ವಿಚಾರಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ನಾವು ಜಾತಿ ಕಟ್ಟುಪಾಡುಗಳನ್ನು ತೊರೆದು ವೈಜ್ಞಾನಿಕ ಯುಗದಲ್ಲಿ ಸಮಾನತೆ ಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕೋವಿಡ್ ಹಿನ್ನೆಲೆಯಿಂದ ಜಯಂತಿಯನ್ನು ಸರಳವಾಗಿ ಆಚರಿಸಿದರೂ ಕೂಡ ಅವರ ತತ್ವಗಳನ್ನು ವರ್ಷದ 365 ದಿನಗಳೂ ಕೂಡ ಪಾಲಿಸುವಂತಾಗಲಿ. ಉತ್ತಮ ಪರಂಪರೆ ಇರುವ ಸವಿತಾ ಸಮಾಜ ಒಗ್ಗಟ್ಟಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬಂದು ಇತರರಿಗೆ ಆದರ್ಶ ಪ್ರಾಯರಾಗಿರಬೇಕು ಎಂದರು.

ಉಡುಪಿ ಜಿಲ್ಲಾ ಸವಿತಾ ಸಮಾಜದ ವಿಶ್ವನಾಥ ನಿಂಜೂರು ಮಾತನಾಡಿ, ಸವಿತಾ ಮಹರ್ಷಿ ಸವಿತಾ ಸಮಾಜದ ಮೂಲ ಪುರುಷರಾಗಿದ್ದರು ಎಂದರು. ಕಾರ್ಯದರ್ಶಿ ಕುರ್ಕಾಲು ಸದಾಶಿವ ಬಂಗೇರ ಮಾತನಾಡಿ, ಧರ್ಮಜ್ಞಾನ ಹೊಂದಿದ್ದ ಸವಿತಾ ಮಹರ್ಷಿ, ಹಿಂದೂ ಧರ್ಮದ ಚತುರ್ವೇದದಲ್ಲಿ ಒಂದಾದ ಸಾಮವೇದವನ್ನು ಬರೆದವರು ಎಂಬ ಪ್ರತೀತಿ ಇದೆ ಎಂದರು. ಸವಿತಾ ಸಮಾಜಕ್ಕೆ ಸರಕಾರದ ವಿವಿಧ ಸವಲತ್ತುಗಳು ಸಿಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News