×
Ad

ಪ್ರಧಾನಿಯ ’ನಮಸ್ತೆ ಟ್ರಂಪ್’ ಕಾರ್ಯಕ್ರಮ ದೇಶದಲ್ಲಿ ಕೋವಿಡ್ ಹರಡಲು ಪ್ರಮುಖ ಕಾರಣವಾಗಿತ್ತು: ಎನ್ ಸಿಪಿ

Update: 2022-02-08 22:19 IST

ಮುಂಬೈ,ಫೆ.8: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರತಿಪಕ್ಷಗಳು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುವಂತಾಗಲು ಅವರಲ್ಲಿ ಭೀತಿಯನ್ನು ಸೃಷ್ಟಿಸಿದ್ದವು ಎಂದು ಸೋಮವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದ ಆರೋಪಕ್ಕೆ ಮಂಗಳವಾರ ತಿರುಗೇಟು ನೀಡಿರುವ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರು, ಮೋದಿಯವರು ಆಯೋಜಿಸಿದ್ದ ‘ನಮಸ್ತೆ ಟ್ರಂಪ್’ ದೇಶದಲ್ಲಿ ಕೋವಿಡ್ ಹರಡಲು ಕಾರಣವಾಗಿತ್ತು ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸುವಂತೆ ಮಹಾರಾಷ್ಟ್ರ ಸರಕಾರವು ಕೇಳಿಕೊಂಡಿತ್ತು. ಆಗಿನ ನಿಮ್ಮದೇ (ಮೋದಿ) ಆರೋಗ್ಯ ಸಚಿವ ಡಾ.ಹರ್ಷವರ್ಧನ್ಅವರು ಕೋವಿಡ್ ಸೋಂಕು ಹರಡುವುದಿಲ್ಲ ಎಂದು ಒತ್ತಿ ಹೇಳಿದ್ದರು ಎಂದು ಹೇಳಿದ ಎನ್ಸಿಪಿ ಮುಖ್ಯವಕ್ತಾರರೂ ಆಗಿರುವ ಮಲಿಕ್,ಮೋದಿ ‘ನಮಸ್ತೆ ಟ್ರಂಪ್ ’ ಕಾರ್ಯಕ್ರಮಕ್ಕೆ ವಿಶ್ವಾದ್ಯಂತದ ಜನರನ್ನು ಭಾರತಕ್ಕೆ ಆಹ್ವಾನಿಸಿದ್ದರು ಮತ್ತು ಆ ಕಾರ್ಯಕ್ರಮವು ದೇಶದ ಎಲ್ಲ ಭಾಗಗಳಲ್ಲಿ ಕೋವಿಡ್ ಸೋಂಕನ್ನು ಹರಡಿತ್ತು ಎಂದರು.

ದೇಶದಲ್ಲಿ ಕೋವಿಡ್ ಹರಡುವಿಕೆಗೆ ಪ್ರಧಾನಿ ಮೋದಿಯವರೇ ಹೊಣೆಯಾಗಿದ್ದಾರೆ ಎಂದು ಅವರು ಆರೋಪಿಸಿದರು.

‘ವಲಸೆ ಕಾರ್ಮಿಕರಿಗೆ ನಾವು ಟಿಕೆಟ್ ಹಣವನ್ನು ಕೊಟ್ಟಿದ್ದೆವು ಎಂದು ನೀವು (ಮೋದಿ) ಹೇಳಿದ್ದೀರಿ. ಅದು ನಿಜ,ಆದರೆ ನೀವು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದ್ದಿರಿ ಮತ್ತು ನಾವು ಟಿಕೆಟ್ಗಳಿಗೆ ಹಣ ನೀಡಿದ್ದೆವು. ನೀವು ವಲಸೆ ಕಾರ್ಮಿಕರಿಂದ ಹಣವನ್ನು ಸಂಗ್ರಹಿಸಲು ಬಯಸಿದ್ದೀರಿ,ಹೀಗಾಗಿ ನಾವು ಬಡ ಕಾರ್ಮಿಕರ ರೈಲ್ವೆ ಟಿಕೆಟ್ಗಳ ಖರ್ಚನ್ನು ಭರಿಸಿದ್ದೆವು ’ಎಂದು ನವಾಬ್ ಹೇಳಿದರು.

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರು ಮನೆ ತಲುಪುವಂತಾಗಲು ಉ.ಪ್ರದೇಶ ಸರಕಾರವು ಮೊದಲ ಬಾರಿಗೆ ಬಸ್ಗಳ ವ್ಯವಸ್ಥೆಯನ್ನು ಮಾಡಿತ್ತು. ಬಿಹಾರ ಸರಕಾರವು ಕೂಡ ಈ ಕೆಲಸವನ್ನು ಮಾಡಿತ್ತು. ಲಾಕ್ಡೌನ್ ಹೇರಿದಾಗ ನೀವು ತಟ್ಟೆಗಳನ್ನು ಬಡಿಯುವಂತೆ ಜನರಿಗೆ ಸೂಚಿಸಿದ್ದೀರಿ ಎಂದು ಬೆಟ್ಟು ಮಾಡಿದ ಮಲಿಕ್,‘ತನ್ನ ನಿರ್ಧಾರದ ಪರಿಣಾಮಗಳ ಬಗ್ಗೆ ಯೋಚಿಸದೆ ಮೋದಿ ಲಾಕ್ಡೌನ್ ಘೋಷಿಸಿದ್ದರು ಮತ್ತು ಈ ನಿರ್ಧಾರದಿಂದಾಗಿ ಕೋಟ್ಯಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಮಹಾರಾಷ್ಟ್ರ ಸರಕಾರವು ವಲಸೆ ಕಾರ್ಮಿಕರಿಗೆ ಆಹಾರ,ಕುಡಿಯುವ ನೀರು ಒದಗಿಸುವ ಜೊತೆಗೆ ಅವರ ಟಿಕೆಟ್ಗಳಿಗೂ ಹಣ ಪಾವತಿಸಿತ್ತು. ನೀವೇನೂ ಉಚಿತವಾಗಿ ರೈಲು ಸೇವೆಯನ್ನು ಒದಗಿಸಿರಲಿಲ್ಲ. ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರುವಂತಾಗಲು ನಾವು ವಿಶೇಷ ಬಸ್ ಗಳನ್ನೂ  ಓಡಿಸಿದ್ದೆವು. ವಲಸೆ ಕಾರ್ಮಿಕರ ಬೆನ್ನಿಗೆ ನಿಂತಿದ್ದು ನಾವೇ ಆಗಿದ್ದೆವು ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News