ಹ್ಯುಂಡೈ ಪಾಕಿಸ್ತಾನದ ವಿವಾದಾತ್ಮಕ ಪೋಸ್ಟ್: ದ.ಕೊರಿಯಾ ರಾಯಭಾರಿಯನ್ನು ಕರೆಸಿ ವಿವರಣೆ ಕೇಳಿದ ಭಾರತ
ಹೊಸದಿಲ್ಲಿ,ಫೆ.8: ಪಾಕಿಸ್ತಾನದ ‘ಕಾಶ್ಮೀರ ಏಕತಾ ದಿನ’ವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯುಂಡೈ ಪಾಕಿಸ್ತಾನದ ಪೋಸ್ಟ್ ನ ಕುರಿತಂತೆ ಮಂಗಳವಾರ ದಕ್ಷಿಣ ಕೊರಿಯಾದ ರಾಯಭಾರಿ ಚಾಂಗ್ ಜೇ-ಬಾಕ್ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅವರಿಂದ ಈ ಬಗ್ಗೆ ವಿವರಣೆಯನ್ನು ಕೇಳಿದೆ.
ಫೆ.5ರ ಪಾಕಿಸ್ತಾನದ ತಥಾಕಥಿತ ‘ಕಾಶ್ಮೀರ ಏಕತಾ ದಿನ’ದಂದು ಹ್ಯುಂಡೈ ಪಾಕಿಸ್ತಾನವು ಅದನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿತ್ತು. ಇದೇ ವೇಳೆ,ಸಿಯೋಲ್ನಲ್ಲಿ ಭಾರತೀಯ ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ಅವರೂ ಹ್ಯುಂಡೈ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.
ಹ್ಯುಂಡೈ ಪಾಕಿಸ್ತಾನದ ಸ್ವೀಕಾರಾರ್ಹವಲ್ಲದ ಸಾಮಾಜಿಕ ಪೋಸ್ಟ್ ನ ಕುರಿತು ಭಾರತದ ತೀವ್ರ ಅಸಮಾಧಾನವನ್ನು ಸಿಯೋಲ್ನಲ್ಲಿರುವ ಭಾರತೀಯ ರಾಯಭಾರಿಗೆ ತಿಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿಯವರು,‘ಈ ವಿಷಯವು ಭಾರತದ ಸಮಗ್ರತೆಗೆ ಸಂಬಂಧಿಸಿದೆ ಮತ್ತು ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪ್ರಮುಖವಾಗಿ ತಿಳಿಸಲಾಗಿದೆ. ಈ ವಿಷಯಗಳನ್ನು ಬಗೆಹರಿಸಲು ಕಂಪನಿಯು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ’ಎಂದು ಹೇಳಿದ್ದಾರೆ. ಭಾರತವು ಆಕ್ಷೇಪಿಸಿದ ಬಳಿಕ ಪೋಸ್ಟ್ ಅನ್ನು ತೆಗೆಯಲಾಗಿದೆ ಎಂದಿದ್ದಾರೆ.
ಮಂಗಳವಾರ ಬೆಳಿಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ದ.ಕೊರಿಯಾದ ವಿದೇಶಾಂಗ ಸಚಿವ ಚುಂಗ್ ಇಯಿ-ಯಾಂಗ್ ಅವರು,ಸಾಮಾಜಿಕ ಮಾಧ್ಯಮ ಪೋಸ್ಟ್ ನಿಂದ ಭಾರತದ ಜನತೆ ಮತ್ತು ಸರಕಾರಕ್ಕೆ ಉಂಟಾಗಿರುವ ನೋವಿಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಭಾರತವು ದ.ಕೊರಿಯಾದೊಂದಿಗೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದೆಯಾದರೂ ಸಂದೇಶವು ಭಾರತದ ಅತ್ಯಂತ ಮಹತ್ವದ ಪಾಲುದಾರ ಮತ್ತು ಮಿತ್ರನಾಗಿರುವ ಆ ದೇಶದ ವಿರುದ್ಧ ಪ್ರತಿಭಟನೆ ಸಲ್ಲಿಕೆಗಿಂತಲೂ ಕಾರ್ಪೊರೇಟ್ ಕಂಪನಿಗಳು ರಾಜಕೀಯ ವಿಷಯಗಳಲ್ಲಿ ಮೂಗು ತೂರಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಸ್ಟ್ ನ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿ ಹ್ಯುಂಡೈ ಮೋಟರ್ಸ್ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿದ ಬಾಗ್ಚಿ, ಅದರಲ್ಲಿ ರಾಜಕೀಯ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳಿಂದ ಹೂಡಿಕೆಗಳನ್ನು ಭಾರತವು ಸ್ವಾಗತಿಸುತ್ತದೆ,ಆದರೆ ಇಂತಹ ಕಂಪನಿಗಳು ಅಥವಾ ಅವುಗಳ ಅಂಗಸಂಸ್ಥೆಗಳು ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳಿಂದ ದೂರವುಳಿಯಬೇಕು ಎಂದೂ ನಿರೀಕ್ಷಿಸಲಾಗಿದೆ ಎಂದು ಬಾಗ್ಚಿ ಹೇಳಿದರು.
ಪಾಕಿಸ್ತಾನದ ಟ್ವೀಟಿಂಗ್ ಬಲೆಯಲ್ಲಿ ಸಿಲುಕಿದ್ದು ಹ್ಯುಂಡೈ ಏಕೈಕ ಕಂಪನಿಯಲ್ಲ. ಕೆಎಫ್ಸಿ,ಪಿಝ್ಝಾಹಟ್,ಒಸಾಕಾ ಬ್ಯಾಟರೀಸ್, ಶ್ವಾಬೆ,ಬಾಷ್ ಫಾರ್ಮಾಸ್ಯೂಟಿಕಲ್ಸ್,ಅಟ್ಲಾಸ್ ಹೊಂಡಾ ಲಿಮಿಟೆಡ್, ಕಿಯಾ ಮೋಟರ್ಸ್ ಕ್ರಾಸ್ರೋಡ್ಸ್-ಹೈದರಾಬಾದ್ ಮತ್ತು ಇಸುಝು ಡಿ-ಮ್ಯಾಕ್ಸ್ ಕೂಡ ಪಾಕಿಸ್ತಾನದ ಕಾಶ್ಮೀರ ಏಕತಾ ದಿನವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಮಾಡಿದ್ದವು.
ಹ್ಯುಂಡೈ ಪೋಸ್ಟ್ಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಹ್ಯುಂಡೈ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ಕಂಪನಿಗೆ ತಕ್ಕ ಪಾಠ ಕಲಿಸುವಂತೆ ಹಲವರು ಸಹಭಾರತೀಯರನ್ನು ಕೋರಿದ್ದಾರೆ. ಭಾರತ ಮತ್ತು ಪಾಕಿಸ್ತಾನದಲ್ಲಿಯ ಮಾರಾಟಗಳನ್ನು ಹೋಲಿಸಿರುವ ಟ್ವೀಟ್ವೊಂದು,ಹ್ಯುಂಡೈ ಭಾರತವನ್ನು ಕೆಣಕುವ ಮೂಲಕ ದೊಡ್ಡ ತಪ್ಪು ಮಾಡಿದೆ ಎಂದಿದೆ.