×
Ad

ತಜ್ಞರ ಗುಂಪಿನ ಸಲಹೆ ಆಧಾರದಲ್ಲಿ ʼ15 ವರ್ಷಕ್ಕಿಂತ ಕೆಳಗಿನʼ ಮಕ್ಕಳಿಗೆ ಲಸಿಕೆ: ಕೇಂದ್ರ ಆರೋಗ್ಯ ಸಚಿವ

Update: 2022-02-08 22:54 IST
SOURCE : PTI

ಹೊಸದಿಲ್ಲಿ, ಫೆ. 8: ತಜ್ಞರ ಗುಂಪಿನ ಸಲಹೆ ಆಧಾರದಲ್ಲಿ 15 ವರ್ಷಕ್ಕಿಂತ ಕೆಳಗಿನ ಪ್ರಾಯ ಗುಂಪಿನ ಮಕ್ಕಳಿಗೆ ಲಸಿಕೆ ಹಾಕಿಸುವ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಜ್ಯ ಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ. ‌

ಕೋವಿಡ್ ಲಸಿಕೆಯನ್ನು ಮೊದಲು ಯಾವ ಪ್ರಾಯ ಗುಂಪಿನ ಮಕ್ಕಳಿಗೆ ನೀಡಬೇಕು ಎಂಬ ಬಗ್ಗೆ ಸಲಹೆ ನೀಡಲು ಕೇಂದ್ರ ಸರಕಾರ ತಜ್ಞರ ಗುಂಪೊಂದನ್ನು ರೂಪಿಸಿದೆ. ಅವರ ಸಲಹೆಗೆ ಅನುಗುಣವಾಗಿ 15ರಿಂದ 18 ವರ್ಷದ ಪ್ರಾಯ ಗುಂಪಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಪ್ರಶ್ನೆ ವೇಳೆಯ ಸಂದರ್ಭ ತಿಳಿಸಿದರು. ‘‘15ರಿಂದ 18 ವರ್ಷ ಪ್ರಾಯ ಗುಂಪಿನ ಶೇ. ಸುಮಾರು 67 ಮಕ್ಕಳು ಇದುವರೆಗೆ ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕೀಕರಣ ತ್ವರಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ನಿರ್ಧಾರ (15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ)ವನ್ನು ತಜ್ಞರ ಗುಂಪಿನ ಸಲಹೆಯ ಆಧಾರದಲ್ಲಿ ತೆಗೆದುಕೊಳ್ಳಲಾಗುವುದು’’ ಎಂದು ಮಾಂಡವಿಯಾ ಹೇಳಿದ್ದಾರೆ. 

ಶಾಲೆಗಳ ಪುನರಾರಂಭದ ನಡುವೆ ಮಕ್ಕಳ ಮೇಲೆ ಕೊರೋನ ವೈರಸ್ನ ಒಮೈಕ್ರಾನ್ನ ರೂಪಾಂತರದ ಅಪಾಯದ ಮಟ್ಟದ ಕುರಿತು ಹಾಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ 15 ವರ್ಷಕ್ಕಿಂತ ಕೆಳಗಿನ ಮಕ್ಕಳ ಕುರಿತು ಬಿಜೆಪಿ ಸದಸ್ಯ ಸಯ್ಯದ್ ಜಾಫರ್ ಇಸ್ಲಾಂ ಅವರ ಪ್ರಶ್ನೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದರು. ಕೋವಿಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಬಿಜೆಪಿ ಸದಸ್ಯ ಟಿ.ಜಿ ವೆಂಕಟೇಶ್ ಕೇಳಿದ ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘‘ಲಸಿಕೀಕರಣ ಸಾವಿನ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಭಾರತದ ಐಸಿಎಂಆರ್ನ ಮಾತ್ರವಲ್ಲ ಜಾಗತಿಕ ವೈಜ್ಞಾನಿಕ ಸಂಸ್ಥೆ ಹೇಳಿರುವುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತದೆ’’ ಎಂದಿದ್ದಾರೆ. ‘‘ಭಾರತದಲ್ಲಿ ಶೇ. 97.5 ಅರ್ಹ ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದಾರೆ. ಶೇ. 77 ಅರ್ಹ ಫಲಾನುಭವಿಗಳು ಎರಡನೇ ಡೋಸ್ ಪಡೆದುಕೊಂಡಿದ್ದಾರೆ’’ ಎಂದು ಮಾಂಡವಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News