"ಸಾವರ್ಕರ್ ಕವಿತೆ ಓದಿರುವುದಕ್ಕೆ ಲತಾ ಮಂಗೇಶ್ಕರ್ ಸಹೋದರನನ್ನು ಎಐಆರ್ ನಿಂದ ವಜಾಗೊಳಿಸಲಾಗಿತ್ತು"

Update: 2022-02-08 17:42 GMT

 ಹೊಸದಿಲ್ಲಿ, ಫೆ. 8: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ವಂದನಾ ನಿರ್ಣಯಕ್ಕೆ ತನ್ನ ಪ್ರತಿಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾವರ್ಕರ್ ಅವರ ಕವಿತೆಯನ್ನು ಆಲ್ ಇಂಡಿಯಾ ರೇಡಿಯೊದಲ್ಲಿ ಓದಿದ ಲತಾ ಮಂಗೇಶ್ಕರ್ ಅವರ ಸಹೋದರನನ್ನು ಕಾಂಗ್ರೆಸ್ ಸರಕಾರ ಹೇಗೆ ವಜಾಗೊಳಿಸಿತು ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದು ಪ್ರಧಾನಿ ಅವರು ಹೇಳಿದರು. 

‘‘ವ್ಯಕ್ತಿ ಸ್ವಾತಂತ್ರದ ಕುರಿತು ಮಾತನಾಡುವವರ ಚರಿತ್ರೆಯನ್ನು ನಾನು ಬಹಿರಂಗಗೊಳಿಸುತ್ತಿದ್ದೇನೆ. ಲತಾ ಮಂಗೇಶ್ಕರ್ ಅವರ ಕುಟುಂಬ ಗೋವಾದಲ್ಲಿ ನೆಲೆಸಿತ್ತು. ಆದರೆ, ಅವರ ಕುಟುಂಬದೊಂದಿಗೆ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದನ್ನು ದೇಶ ತಿಳಿಯಬೇಕು. ಅವರ ಕಿರಿಯ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರನ್ನು ಆಲ್ ಇಂಡಿಯಾ ರೇಡಿಯೊದಿಂದ ವಜಾಗೊಳಿಸಲಾಗಿತ್ತು. ಅವರು ಮಾಡಿದ ತಪ್ಪೆಂದರೆ, ವೀರ ಸಾವರ್ಕರ್ ಅವರ ದೇಶ ಪ್ರೇಮದ ಕವಿತೆಯನ್ನು ಪ್ರಸ್ತುತಪಡಿಸಿರುವುದು’’ ಎಂದು ಪ್ರಧಾನಿ ಅವರು ಸದನದಲ್ಲಿ ಹೇಳಿದರು.

‘‘ಇದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ’’ ಎಂದು ಅವರು ಹೇಳಿದರು. ‘‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅನೇಕ ಅನ್ಯಾಯಗಳು ನಡೆದಿವೆ. ಹೃದಯನಾಥ್ ಜಿ ಅವರಿಗೆ ಮಾತ್ರ ಅನ್ಯಾಯ ಆಗಿರುವುದಲ್ಲ. ಈ ಪಟ್ಟಿ ಬಹಳ ದೊಡ್ಡದಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ‘‘ನೆಹರೂ ಅವರನ್ನು ಟೀಕಿಸಿರುವುದಕ್ಕೆ ಮಜ್ರೂಹ ಸುಲ್ತಾನಪುರಿ ಹಾಗೂ ಪಾಧ್ಯಾಪಕ ಧರ್ಮಪಾಲ್ ಅವರನ್ನು ಜೈಲಿಗೆ ತಳ್ಳಲಾಯಿತು. ತುರ್ತು ಪರಿಸ್ಥಿತಿ ಸಂದರ್ಭ ಕಿಶೋರ್ ಕುಮಾರ್ ಅವರು ಇಂದಿರಾ ಗಾಂಧಿ ಅವರಿಗೆ ತಲೆ ಬಾಗಿಲ್ಲ. ಅವರಿಗೆ ರೇಡಿಯೊಲ್ಲಿ ಹಾಡಲು ನಿಷೇಧ ಹೇರಲಾಯಿತು ಎಂದು ಅವರು ತಿಳಿಸಿದರು. ಇಂದಿರಾ ಗಾಂಧಿ ಕುಟುಂಬದ ನಿಲುವನ್ನು ಒಪ್ಪಿಕೊಳ್ಳದ ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ಹೇಗೆ ನಿಯಂತ್ರಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ ಎಂದು ಮೋದಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News