ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದರೆ ರಶ್ಯಾ-ಜರ್ಮನ್ ಗ್ಯಾಸ್ ಪೈಪ್ಲೈನ್ ಗೆ ತಡೆ: ಬೈಡನ್ ಎಚ್ಚರಿಕೆ

Update: 2022-02-08 18:36 GMT

ವಾಷಿಂಗ್ಟನ್, ಫೆ.8: ರಶ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ನಾರ್ಡ್ ಸ್ಟ್ರೀಮ್ 2 ಗ್ಯಾಸ್ ಪೈಪ್ಲೈನ್(ಜರ್ಮನಿ-ರಶ್ಯಾ ನಡುವಿನ)ಗೆ ತಡೆಯೊಡ್ಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. ಸೋಮವಾರ ಜರ್ಮನ್ ಛಾನ್ಸಲರ್ ಒಲಾಫ್ ಶಾಲ್ಝ್ ಜತೆ ಶ್ವೇತಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಶ್ಯಾ ಟ್ಯಾಂಕ್ಗಳು ಅಥವಾ ಪಡೆ ಉಕ್ರೇನ್ನ ಗಡಿಯನ್ನು ಮತ್ತೊಮ್ಮೆ ದಾಟಿದರೆ ಆ ಬಳಿಕ ನಾರ್ಡ್ ಸ್ಟ್ರೀಮ್ ಗ್ಯಾಸ್ಪೈಪ್ ಲೈನ್ ಯೋಜನೆ ಇರುವುದಿಲ್ಲ. ನಾವದಕ್ಕೆ ಅಂತ್ಯ ಹೇಳುತ್ತೇವೆ. ಈ ಯೋಜನೆಯ ನಿಯಂತ್ರಣ ಜರ್ಮನಿಯ ಕೈಯಲ್ಲಿ ಇರುವುದರಿಂದ ನಾವು ಹೀಗೆ ಮಾಡಲು ಸಾಧ್ಯವಾಗಲಿದೆ ಎಂದರು. ಈ ಸಂದರ್ಭ ಮಾತನಾಡಿದ ಶಾಲ್ಝ್, ಉಕ್ರೇನ್, ರಶ್ಯಾ ಹಾಗೂ ನಿರ್ಬಂಧದ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಜರ್ಮನಿಯ ದೃಷ್ಟಿಕೋನ ಮತ್ತು ನಿಲುವು ಒಂದೇ ಆಗಿದೆ ಎಂದರು. ನಾವಿಬ್ಬರು ಜತೆಗಿದ್ದೇವೆ ಮತ್ತು ಜತೆಯಾಗಿ ಸಾಗಲಿದ್ದೇವೆ. ಮತ್ತು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದ್ದೇವೆ.

 ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದರು. ರಶ್ಯಾದ ಬೃಹತ್ ಇಂಧನ ಸಂಸ್ಥೆ ಗ್ಯಾಸ್ಪ್ರೋಮ್ ವಿನ್ಯಾಸಗೊಳಿಸಿರುವ ನಾರ್ಡ್ ಸ್ಟ್ರೀಮ್ 2 ಗ್ಯಾಸ್ ಪೈಪ್ಲೈನ್ ಯೋಜನೆಯು ರಶ್ಯಾದಿಂದ ಜರ್ಮನ್ಗೆ ತ್ವರಿತವಾಗಿ ಮತ್ತು ದುಪ್ಪಟ್ಟು ಪ್ರಮಾಣದಲ್ಲಿ ಗ್ಯಾಸ್ ಪೂರೈಕೆಯ ಉದ್ದೇಶ ಹೊಂದಿದೆ. ಉಕ್ರೇನ್ನ ನೆಲದ ಮೂಲಕ ಗ್ಯಾಸ್ ಪೈಪ್ಲೈನ್ ಹಾದುಹೋಗಿದೆ. ಉಕ್ರೇನ್ ಮೇಲಿನ ರಶ್ಯಾದ ಸಂಭಾವ್ಯ ಆಕ್ರಮಣದ ವಿರುದ್ಧ ಸಂಯುಕ್ತ ಸೇನಾಪಡೆಯನ್ನು ರೂಪಿಸುವ ಉದ್ದೇಶವನ್ನು ಅಮೆರಿಕ-ಜರ್ಮನ್ ಹೊಂದಿದೆ ಎಂದು ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News