×
Ad

ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗಲು ಅವಕಾಶ ನೀಡದಿರುವುದು ಭಯಾನಕ : ಮಲಾಲಾ ಯೂಸುಫ್

Update: 2022-02-09 08:05 IST

ಹೊಸದಿಲ್ಲಿ: ಕರ್ನಾಟಕದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ ಹಾಗೂ ತರಗತಿ ಪ್ರವೇಶಕ್ಕೆ ನಿರಾಕರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್, "ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗಲು ಅವಕಾಶ ನೀಡದಿರುವುದು ಭಯಾನಕ" ಎಂದು ಟ್ವೀಟ್ ಮಾಡಿದ್ದಾರೆ.

ಹಿಜಾಬ್ ಧರಿಸಿದ ಕಾರಣಕ್ಕೆ ತಮಗೆ ತರಗತಿಗೆ ಪ್ರವೇಶ ನೀಡುತ್ತಿಲ್ಲ ಎಂದು ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಆರೋಪ ಮಾಡುವ ಮೂಲಕ ಹಿಜಾಬ್ ವಿವಾದ ಭುಗಿಲೆದ್ದಿತ್ತು. ಉಡುಪಿ ಹಾಗೂ ಚಿಕ್ಕಮಗಳೂರಿನ ಬಲಪಂಥೀಯ ಸಂಘಟನೆಗಳು, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಈ ವಿವಾದ ಬಿಜೆಪಿ ಆಡಳಿತದ ಮಧ್ಯಪ್ರದೇಶ ಹಾಗೂ ಪುದುಚೇರಿಗೂ ಹರಡಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಮಲಾಲಾ, "ಹೆಣ್ಣು ಮಕ್ಕಳು ಹಿಜಾಬ್‌ನೊಂದಿಗೆ ಶಾಲೆಗೆ ಹೋಗಲು ಅವಕಾಶ ನಿರಾಕರಿಸುವುದು ನಿಜಕ್ಕೂ ಭಯಾನಕ. ಮಹಿಳೆಯರು ಹೆಚ್ಚು ಅಥವಾ ಕಡಿಮೆ ಧರಿಸುವುದಕ್ಕೂ ಆಕ್ಷೇಪಗಳು ಸದಾ ಇವೆ. ಭಾರತೀಯ ಮುಖಂಡರು ಮುಸ್ಲಿಂ ಮಹಿಳೆಯರನ್ನು ಮೂಲೆಗುಂಪು ಮಾಡುವುದನ್ನು ನಿಲ್ಲಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಸಂಜಾತೆ ಮಲಾಲಾ 11ನೇ ವಯಸ್ಸಿನಲ್ಲೇ ಸಾರ್ವಜನಿಕವಾಗಿ ಹೆಣ್ಣು ಮಕ್ಕಳು ಹಾಗೂ ಅವರ ಶಿಕ್ಷಣ ಹಕ್ಕುಗಳ ಬಗ್ಗೆ ಮಾತನಾಡಿದ ಕಾರಣಕ್ಕಾಗಿ ಅವರ ಮೇಲೆ 2012ರಲ್ಲಿ ತಾಲಿಬಾನ್ ಉಗ್ರರು ಗುಂಡು ಹಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News