ಯಾವ ವಿಚಾರದ ಬಗ್ಗೆ ಕೇಳಿದರೂ ʼದತ್ತಾಂಶ ಲಭ್ಯವಿಲ್ಲದ ಸರಕಾರʼ ಇದು: ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ
ಹೊಸದಿಲ್ಲಿ: ಮಾಜಿ ಹಣಕಾಸು ಸಚಿವ ಹಾಗೂ ರಾಜ್ಯಸಭಾ ಸಂಸದ ಪಿ. ಚಿದಂಬರಂ ಮಂಗಳವಾರ ಎನ್‌ಡಿಎ ಸರಕಾರವು ‘ದತ್ತಾಂಶ ಲಭ್ಯವಿಲ್ಲದ’ ಸರಕಾರ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.
ಕೋವಿಡ್-19 ಸಮಯದಲ್ಲಿ ಆಮ್ಲಜನಕದ ಕೊರತೆ ಹಾಗೂ ನದಿಗಳಲ್ಲಿ ತೇಲುತ್ತಿರುವ ಮೃತದೇಹಗಳ ಬಗ್ಗೆ ಮಾಹಿತಿಯ ಕೊರತೆಯನ್ನು ಬಿಂಬಿಸುವ ಸರಕಾರದ ಉತ್ತರಗಳನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ 2022-2023ರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ, ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದರು.
ಉದ್ಯೋಗಗಳ ಕುರಿತು ಪ್ರಸ್ತಾಪಿಸಿದ ಮೋದಿಯವರ ಭಾಷಣವನ್ನು ಉಲ್ಲೇಖಿಸಿದ ಚಿದಂಬರಂ ಅವರು "ತಮ್ಮ ಮುಂದಿನ ಭಾಷಣದಲ್ಲಿ ಸುಮಾರು 8 ಲಕ್ಷ ಸರಕಾರಿ ಉದ್ಯೋಗ ಖಾಲಿ ಇರುವ ಅಂಕಿ-ಅಂಶಗಳನ್ನು ಬಳಸಬೇಕು" ಎಂದು ಸಲಹೆ ನೀಡಿದರು.
ಕಾಂಗ್ರೆಸ್ ‘ತುಕ್ಡೆ ತುಕ್ಡೆ ಗ್ಯಾಂಗ್’ ನ ನಾಯಕ ಎಂಬ ಮೋದಿಯವರ ಆರೋಪವನ್ನು ಉಲ್ಲೇಖಿಸಿದ ಚಿದಂಬರಂ "ನಾನು ತುಕ್ಡೆ-ತುಕ್ಡೆ ಗ್ಯಾಂಗ್‌ನ ಸದಸ್ಯ ... ನನಗೆ ಚಿಂತೆ ಇಲ್ಲ. ಏಕೆಂದರೆ ಈ ಸಂಸತ್ತಿನಲ್ಲಿ ಯಾರು ತುಕ್ಡೆ-ತುಕ್ಡೆ ಗ್ಯಾಂಗ್ ಸದಸ್ಯರು ಪ್ರಶ್ನೆಯನ್ನು ಕೇಳಲಾಯಿತು. 'ನಮ್ಮಲ್ಲಿ ಟುಕ್ಡೆ-ಟುಕ್ಡೆ ಗ್ಯಾಂಗ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ'... ಎಂದು ಸಚಿವರು ಹೇಳಿದರು. ಆಮ್ಲಜನಕದ ಕೊರತೆ ಸಾವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ನದಿಗಳಲ್ಲಿರುವ ಮೃತದೇಹಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎಷ್ಟು ವಲಸಿ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಕುರಿತು ಯಾವುದೇ ಡೇಟಾ ಲಭ್ಯವಿಲ್ಲ. ಇದನ್ನು 2022 ರಲ್ಲಿ ಮಾಡಬೇಕಾಗಿತ್ತು. ಇದು ಯಾವುದೇ ಡೇಟಾ ಲಭ್ಯವಿಲ್ಲದ ಸರಕಾರ’’ ಎಂದರು.