ದಲಿತ ವರನ ವಿವಾಹ ಮೆರವಣಿಗೆಯಲ್ಲಿ 'ಪೇಟ' ಧರಿಸಿದ್ದಾರೆಂದು ಕಲ್ಲೆಸೆತ: ಗ್ರಾಮ ಸರಪಂಚ ಸಹಿತ ಹಲವರ ವಿರುದ್ಧ ಕೇಸ್
ಹೊಸದಿಲ್ಲಿ: ಗುಜರಾತ್‍ನ ಬಾನಸ್ಕಂತ ಜಿಲ್ಲೆಯ ಮೋಟಾ ಎಂಬ ಗ್ರಾಮದಲ್ಲಿ ದಲಿತ ಯುವಕನೊಬ್ಬನ ವಿವಾಹ ದಿಬ್ಬಣದ ಮೆರವಣಿಗೆಯಲ್ಲಿ ಭಾಗವಹಿಸಿದವರೆಲ್ಲರೂ ರುಮಾಲು ಅಥವಾ ಪೇಟಾ ಧರಿಸಿದ್ದರೆಂಬ ಕಾರಣಕ್ಕೆ ಅವರ ಮೇಲೆ ಕಲ್ಲೆಸೆತ ನಡೆಸಿದ್ದಾರೆನ್ನಲಾದ ಘಟನೆ ನಡೆದಿದೆ ಎಂದು thewire.in ವರದಿ ಮಾಡಿದೆ.
ಈ ಘಟನೆ ಸಂಬಂಧ ಗ್ರಾಮದ ಸರಪಂಚ ಸಹಿತ 28 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳೆಲ್ಲರೂ ರಜಪೂತ ಸಮುದಾಯದ ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ವರ ಅತುಲ್ ಸೆಖಾಲಿಯಾ ಎಂಬಾತನ ತಂದೆ ವೀರಾಭಾಯಿ ಸೆಖಾಲಿಯಾ ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.
ಮೆರವಣಿಗೆಯಲ್ಲಿ ವರ ಕುದುರೆ ಮೇಲೆ ಸವಾರಿ ಮಾಡುವುದಕ್ಕೆ ಗ್ರಾಮದ ಸರಪಂಚ ಭರತ್‍ಸಿನ್ಹ ರಜಪೂತ್ ಸಹಿತ ಹಲವರು ವಿರೋಧಿಸಿ ಪರಿಣಾಮ ನೆಟ್ಟಗಾಗದು ಎಂದು ಬೆದರಿಸಿದ್ದಾರೆ ಎಂದು ದೂರಲಾಗಿದೆ.
ಆದರೆ ವರನ ಕುಟುಂಬ ತನ್ನ ನಿಲುವು ಬದಲಿಸದೇ ಇದ್ದಾಗ ರವಿವಾರ ಮತ್ತೆ ಸಭೆ ನಡೆಸಿ ಬೆದರಿಕೆಯೊಡ್ಡಲಾಗಿತ್ತಲ್ಲದೆ ದಲಿತ ಸಮುದಾಯದವರು ಕುದುರೆ ಏರುವ ಹಾಗಿಲ್ಲ ಎಂದು ಹೇಳಲಾಗಿತ್ತು ಎಂದು ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ವರ ಕುದುರೆಯೇರಿ ಹೋಗದಿರಲು ನಿರ್ಧರಿಸಿ ಆತನ ಕುಟುಂಬ ಪೊಲೀಸ್ ರಕ್ಷಣೆಯನ್ನೂ ಕೋರಿತ್ತು. ಆದರೆ ಸೋಮವಾರ ಮೆರವಣಿಗೆ ಆರಂಭಗೊಂಡಾಗ ವರನ ಕಡೆಯ ಹಲವರು ರುಮಾಲು ಅಥವಾ ಪೇಟಾ ಧರಿಸಿದ್ದಕ್ಕೆ ವಿರೋಧಿಸಿ ಕಲ್ಲು ತೂರಾಟ ನಡೆಸಿದ ಕಾರಣ ವರನ ಕಡೆಯವರೊಬ್ಬರಿಗೆ ಗಾಯಗಳುಂಟಾಗಿವೆ.
ನಂತರ ಪೊಲೀಸ್ ರಕ್ಷಣೆಯಲ್ಲಿ ಮೆರವಣಿಗೆ ಮುಂದಕ್ಕೆ ಸಾಗಿತ್ತು ಎಂದು ವರದಿಯಾಗಿದೆ.