ಹಳೆ ಟ್ವೀಟ್‍ಗಳಿಂದ ವಿವಾದ: ಟ್ವಿಟ್ಟರ್ ಖಾತೆಯನ್ನೇ ಹೊಂದಿರಲಿಲ್ಲ ಎಂದು ವರಸೆ ಬದಲಿಸಿದ ಜೆಎನ್‍ಯು ನೂತನ ಉಪಕುಲಪತಿ

Update: 2022-02-09 11:58 GMT
Photo: Jnu.ac.in

 ಹೊಸದಿಲ್ಲಿ: ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನೂತನವಾಗಿ ನೇಮಕಗೊಂಡ ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರದ್ದೆಂದು ಹೇಳಲಾದ ಹಳೆಯ ಟ್ವೀಟ್‍ಗಳಿಗೆ ಸಂಬಂಧಿಸಿದಂತೆ ವಿವಾದಕ್ಕೀಡಾಗಿದ್ದಾರೆ. ರೈತರನ್ನು ಜಿಹಾದಿಗಳೆಂದು ಸಂಬೋಧಿಸಿರುವುದು, ಹತ್ಯಾಕಾಂಡಕ್ಕೆ ಕರೆ ನೀಡಿದವರನ್ನು ಬೆಂಬಲಿಸಿ ಈ ಹಿಂದೆ ಅವರು ಮಾಡಿದ್ದಾರೆನ್ನಲಾದ ಟ್ವೀಟ್‍ಗಳು ವಿವಾದಕ್ಕೀಡಾಗುತ್ತಿದ್ದಂತೆಯೇ ತಾವು ಟ್ವಿಟ್ಟರ್ ಖಾತೆಯನ್ನೇ ಹೊಂದಿರಲಿಲ್ಲ ಎಂದು ಆಕೆ ಸಬೂಬು ನೀಡಿದ್ದಾರೆ.

@SantishreeD ಎಂಬ ಟ್ವಿಟ್ಟರ್ ಖಾತೆ ಇತ್ತೀಚಿಗಿನವರೆಗೂ ಅಸ್ತಿತ್ವದಲ್ಲಿದ್ದರೂ  ಆಕೆಯನ್ನು ಉಪಕುಲಪತಿಯನ್ನಾಗಿ ನೇಮಕಗೊಳಿಸಲಾಗಿದೆ ಎಂಬ ಬೆನ್ನಿಗೇ ವಿವಾದ ಹುಟ್ಟಿಕೊಂಡಾಕ್ಷಣ ಡಿಲೀಟ್ ಮಾಡಲಾಗಿತ್ತು.

ಈ ಟ್ವಿಟ್ಟರ್ ಖಾತೆಯು ಜೆಎನ್‍ಯುವಿನ ಒಳಗಿನವರ ಕೆಲಸ ಹಾಗೂ ತಾವು ಇಲ್ಲಿನ ಪ್ರಥಮ ಮಹಿಳಾ ಉಪಕುಲಪತಿಯಾಗಿರುವುದು ಇಷ್ಟವಿಲ್ಲದ ಯಾರೋ ಮಾಡಿದ ಕೆಲಸ ಎಂದು ಆಕೆ ಹೇಳಿದ್ದಾರೆ. ಆದರೆ ವಿವಾದಿತ ಟ್ವೀಟ್‍ಗಳು ಸುದ್ದಿಯಾಗುತ್ತಿದ್ದಂತೆಯೇ ಟ್ವಿಟ್ಟರ್ ಖಾತೆ ಏಕೆ ಡಿಲೀಟ್ ಆಯಿತೆಂಬುದಕ್ಕೆ ಸ್ಪಷ್ಟೀಕರಣ ದೊರೆತಿಲ್ಲ.

ಯಾವತ್ತೂ ಟ್ವಿಟ್ಟರ್ ಖಾತೆ ಹೊಂದಿಲ್ಲ ಎಂದಿರುವ ಶಾಂತಿಶ್ರೀ ಅದೇ ಸಮಯ ಅದನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿರುವುದೂ ಸಂಶಯಕ್ಕೆ ಕಾರಣವಾಗಿದೆ.

ಆಕೆಯ ಟ್ವಿಟ್ಟರ್ ಖಾತೆಯಿಂದ ಈ ಹಿಂದೆ ಪೋಸ್ಟ್ ಮಾಡಲಾಗಿದ್ದ ಆಕೆಯ ಕುಟುಂಬ ಸದಸ್ಯರ ಕುರಿತಾದ ಫೋಟೋಗಳನ್ನೂ ಪೋಸ್ಟ್ ಮಾಡಿದ ಕೆಲವರು ಇಂತಹ ಫೋಟೋಗಳು ಹ್ಯಾಕ್ ಮಾಡಿದವರಿಗೆ ಹೇಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಆಕೆಯದ್ದೆಂದು ಹೇಳಲಾದ ಟ್ವಿಟ್ಟರ್ ಖಾತೆಯ ಹಲವು ಪೋಸ್ಟ್‍ಗಳು ಬಲಪಂಥೀಯರ ಶೈಲಿಯ ಪೋಸ್ಟ್ ಗಳಾಗಿದ್ದವಲ್ಲದೆ ಜೆಎನ್‍ಯುವಿನ ಎಡಪಂಥೀಯ ಹೋರಾಟಗಾರರನ್ನು ನಕ್ಸಲ್ ಜಿಹಾದಿಗಳು, ಗಾಂಧೀಜಿಯ ಹತ್ಯೆ ಏಕೀಕೃತ ಭಾರತ ಹೊಂದಲು ಇದ್ದ ಪರಿಹಾರವಾಗಿತ್ತೆಂಬ ಚಿಂತನೆಯಿಂದ ನಾಥೂರಾಂ ಗೋಡ್ಸೆ ಹತ್ಯೆಗೈದಿದ್ದ ಎಂಬ  ಹೇಳಿಕೆ ಮುಂತಾದವು ವಿವಾದಕ್ಕೀಡಾಗಿವೆ.

ಹಿಂದುಳಿದ  ವರ್ಗದ ತಮಿಳುನಾಡಿನ ಮಹಿಳೆ ತಾವಾಗಿರುವುದರಿಂದ ಹಾಗೂ ಎಡಪಂಥೀಯರ ಹಿಡಿತದಲ್ಲಿದ್ದ ಒಂದು ಹುದ್ದೆಯನ್ನು ತಮಗೆ ನೀಡಲಾಗಿರುವುದನ್ನು ಸಹಿಸದವರಿಂದ ಈ ಕೆಲಸ ನಡೆದಿದೆ ಎಂದು ನೂತನ ಉಪಕುಲಪತಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News