×
Ad

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚುನಾವಣೆ ವೇಳಾಪಟ್ಟಿ ಪ್ರಕಟ

Update: 2022-02-09 19:52 IST

ಉಡುಪಿ, ಫೆ.9: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-2025ನೇ ಸಾಲಿನ ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಮಂಡಳಿ ಚುನಾವಣಾ ವೇಳಾಪಟ್ಟಿಯನ್ನು ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಕಟಿಸಲಾಗಿದೆ.

ಜಿಲ್ಲೆಯ ಅರ್ಹ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಅಗತ್ಯ ಬಿದ್ದರೆ ತಿದ್ದುಪಡಿಯ ಬಳಿಕ ಫೆ.11ರಂದು ಅಪರಾಹ್ನ 12 ಗಂಟೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೊಳ್ಳಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಫೆ.14ರಂದು ಅಪರಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಫೆ.16ರಂದು ಅಪರಾಹ್ನ ನಾಮಪತ್ರಗಳ ಪರಿಶೀಲನೆ ಹಾಗೂ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಫೆ.19ರಂದು ಅಪರಾಹ್ನ 1 ಗಂಟೆ ಒಳಗೆ ನಾಮಪತ್ರ ವಾಪಾಸು ಪಡೆಯಲು ಅವಕಾಶವಿದೆ. ಅದೇ ದಿನ 2 ಗಂಟೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಅಗತ್ಯ ಬಿದ್ದಲ್ಲಿ ಫೆ.27ರಂದು ಬೆಳಗ್ಗೆ 10 ರಿಂದ ಅಪರಾಹ್ನ 3 ರವರೆಗೆ ಮತದಾನ ನಡೆಯಲಿದೆ. ಅಪರಾಹ್ನ 3:30ಕ್ಕೆ ಮತಗಳ ಎಣಿಕೆ ನಡೆದು ಫಲಿತಾಂಶವನ್ನು ಪ್ರಕಟಿಸಲಾಗುವುದು.

ಜಿಲ್ಲಾ ಘಟಕದಲ್ಲಿ ಅಧ್ಯಕ್ಷರ -1 ಹುದ್ದೆ, ಉಪಾಧ್ಯಕ್ಷರ -3 ಹುದ್ದೆ, ಪ್ರಧಾನ ಕಾರ್ಯದರ್ಶಿಯ -1 ಹುದ್ದೆ, ಕಾರ್ಯದರ್ಶಿಗಳ-3 ಹುದ್ದೆ ಹಾಗೂ ಖಜಾಂಚಿಯ -1 ಹುದ್ದೆಗಳಿಗೆ ಮತ್ತು ರಾಜ್ಯ ಸಮಿತಿಗೆ 1 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News