ಐದು ವರ್ಷಗಳಲ್ಲಿ 4,844 ವಿದೇಶಿಯರಿಗೆ ಭಾರತೀಯ ಪೌರತ್ವ ಮಂಜೂರು: ಕೇಂದ್ರ ‌

Update: 2022-02-09 15:14 GMT

ಹೊಸದಿಲ್ಲಿ,ಫೆ.9: ಕಳೆದ ಐದು ವರ್ಷಗಳಲ್ಲಿ 4,844 ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ಮಂಜೂರು ಮಾಡಲಾಗಿದೆ ಎಂದು ಸರಕಾರವು ಲೋಕಸಭೆಯಲ್ಲಿ ತಿಳಿಸಿದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಮೂರು ಪಟ್ಟು ಭಾರತೀಯ ಪೌರತ್ವಗಳನ್ನು ಮಂಜೂರು ಮಾಡಲಾಗಿದೆ ಎಂದೂ ಅದು ತಿಳಿಸಿದೆ.

ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿಯ ಅಂಕಿಅಂಶಗಳಂತೆ 2017ರಲ್ಲಿ 817,2018ರಲ್ಲಿ 628,2019ರಲ್ಲಿ 987,2020ರಲ್ಲಿ 639 ಮತ್ತು 2021ರಲ್ಲಿ 1,773 ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ಮಂಜೂರು ಮಾಡಲಾಗಿದೆ.
ಭಾರತೀಯ ಪೌರತ್ವವು 1955ರ ಪೌರತ್ವ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟಿದೆ.
ಪೌರತ್ವ ಕಾಯ್ದೆ 1955ರ ಕಲಂ 5ರಡಿ ನೋಂದಣಿ,ಕಲಂ 6ರಡಿ ದೇಶಿಕರಣ ಅಥವಾ ಕಲಂ 7ರಡಿ ಪ್ರದೇಶ ಸೇರ್ಪಡೆ ಮೂಲಕ ಅರ್ಹ ವಿದೇಶಿಯರಿಗೆ ಪೌರತ್ವವನ್ನು ಮಂಜೂರು ಮಾಡಲಾಗುತ್ತದೆ. ಪೌರತ್ವ ಕಾಯ್ದೆ 1955ರ ನಿಬಂಧನೆಗಳು ಮತ್ತು ಅದರಡಿಯಲ್ಲಿ ರಚಿಸಲಾಗಿರುವ ನಿಯಮಗಳಿಗೆ ಒಳಪಟ್ಟು ಭಾರತೀಯ ಪೌರತ್ವವನ್ನು ಪಡೆಯಲು ಕಾರಣಗಳು ಪ್ರತಿ ಅರ್ಜಿದಾರರ ನಿರ್ದಿಷ್ಟ ಸಂದರ್ಭಗಳಿಗೆ ತಕ್ಕಂತೆ ಭಿನ್ನವಾಗಿರುತ್ತವೆ ಎಂದು ರಾಯ್ ಉತ್ತರದಲ್ಲಿ ತಿಳಿಸಿದರು.
 ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ನಿಯಮಗಳನ್ನು ಇನ್ನೂ ರೂಪಿಸಬೇಕಿದ್ದರೂ,ಈ ಹಿಂದೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಸರಕಾರಿ ದತ್ತಾಂಶಗಳಂತೆ 2018ರಿಂದ ಭಾರತೀಯ ಪೌರತ್ವವನ್ನು ಪಡೆದುಕೊಂಡವರಲ್ಲಿ ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಹಾಗೂ ಹಿಂದು, ಸಿಖ್, ಜೈನ್ ಮತ್ತು ಕ್ರೈಸ್ತ ಧರ್ಮಗಳಿಗೆ ಸೇರಿದವರಾಗಿದ್ದಾರೆ. ಈ ಮೂರು ರಾಷ್ಟ್ರಗಳಲ್ಲಿಯ ಈ ಸಮುದಾಯಗಳಿಗೆ ಸೇರಿದ 8,244 ಜನರು ಭಾರತೀಯ ಪೌರತ್ವವನ್ನು ಕೋರಿ ಅರ್ಜಿ ಸಲ್ಲಿಸಿದ್ದರು ಮತ್ತು ಡಿಸೆಂಬರ್ 2021ರವರೆಗೆ 3,117 ಜನರಿಗೆ ಪೌರತ್ವ ಮಂಜೂರು ಮಾಡಲಾಗಿದೆ ಎಂದು ರಾಯ್ ತಿಳಿಸಿದರು.
ಈ ಮೊದಲು ಭಾರತೀಯ ಪೌರತ್ವವನ್ನು ಪಡೆದುಕೊಂಡಿರುವವರ ಒಟ್ಟು ಸಂಖ್ಯೆಯ ಕುರಿತು ಪ್ರಶ್ನೆಗೆ ರಾಯ್,2016 ಮತ್ತು 2020ರ ನಡುವೆ 4,177 ಜನರಿಗೆ ಭಾರತೀಯ ಪೌರತ್ವವನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 2018ರಲ್ಲಿ 628,2019ರಲ್ಲಿ 987 ಮತ್ತು 2020ರಲ್ಲಿ 639 ಭಾರತೀಯ ಪೌರತ್ವಗಳನ್ನು ಮಂಜೂರು ಮಾಡಲಾಗಿತ್ತು ಎಂದು ಉತ್ತರಿಸಿದರು.

ಕಳೆದ ವರ್ಷದ ಡಿ.14ಕ್ಕೆ ಇದ್ದಂತೆ ಸರಕಾರದ ಬಳಿ ಭಾರತೀಯ ಪೌರತ್ವವನ್ನು ಕೋರಿ 10,635 ಅರ್ಜಿಗಳು ಬಾಕಿಯಿವೆ. ಈ ಪೈಕಿ 7,306 ಜನರು ಪಾಕಿಸ್ತಾನಕ್ಕೆ,1,152 ಅಫ್ಘಾನಿಸ್ತಾನಕ್ಕೆ ಮತ್ತು 161 ಬಾಂಗ್ಲಾದೇಶಕ್ಕೆ ಸೇರಿದವರಾಗಿದ್ದಾರೆ. ರಾಷ್ಟ್ರರಹಿತ ಜನರ ಒಟ್ಟು 428 ಅರ್ಜಿಗಳೂ ಬಾಕಿಯಿವೆ ಎಂದರು. 2019ರಲ್ಲಿ ಸಿಎಎ ಅಂಗೀಕಾರದ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಗೃಹಸಚಿವ ಅಮಿತ್ ಶಾ ಅವರು,2014ರಿಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳ ಸುಮಾರು 600 ಮುಸ್ಲಿಮರಿಗೆ ಭಾರತೀಯ ಪೌರತ್ವ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News