450 ಕೋಟಿ ಡಾಲರ್ ಮೌಲ್ಯದ ಬಿಟ್ ಕಾಯಿನ್ ಕಳವು ಪ್ರಕರಣ: ಅಮೆರಿಕದ ದಂಪತಿ ಬಂಧನ
ನ್ಯೂಯಾರ್ಕ್, ಫೆ.9: ದೇಶದ ಇತಿಹಾಸದಲ್ಲಿಯೇ ಅತ್ಯಂತ ಬೃಹತ್ ಮೊತ್ತದ ಬಿಟ್ ಕಾಯಿನ್ ಅಕ್ರಮ ವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಂಗಳವಾರ ಹೇಳಿದೆ. ಡಿಜಿಟಲ್ ಕರೆನ್ಸಿ ವಿನಿಮಯ ವೇದಿಕೆ ಬಿಟ್‌ಫಿನೆಕ್ಸ್ ಅನ್ನು ಹ್ಯಾಕ್ ಮಾಡಿ 4.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್ಕಾಯಿನ್ ಕದ್ದ ಪ್ರಕರಣ ಇದಾಗಿದೆ.
ಈ ಮೊತ್ತದ ಅಕ್ರಮ ಸಾಗಾಟಕ್ಕೆ ನ್ಯೂಯಾರ್ಕ್ ನಿವಾಸಿಗಳಾದ ಇಲ್ಯಾ ‘ಡಚ್’ ಲಿಷ್‌ಟೆನ್‌ಸ್ಟೈನ್ ಮತ್ತು ಆತನ ಪತ್ನಿ ಹೀಥರ್ ಮಾರ್ಗನ್ ನೆರವಾಗಿದ್ದರು ಎಂಬ ಆರೋಪವಿದೆ. ಅಮೆರಿಕದ ಖಜಾನೆಗೆ ವಂಚನೆ ಎಸಗಿದ ಆರೋಪದಡಿ ವಾಷಿಂಗ್ಟನ್ ಕೋರ್ಟ್‌ನಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಂಪತಿಯ ಬಳಿಯಿದದ 3.6 ಬಿಲಿಯನ್ ಬಿಟ್ ಕಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆ ವಶಪಡಿಸಿಕೊಂಡ ಅತೀ ದೊಡ್ಡ ಆರ್ಥಿಕ ಸಂಪತ್ತು ಇದಾಗಿದೆ. ಕ್ರಿಪ್ಟೊಕರೆನ್ಸಿ ಕೇತ್ರ ಕ್ರಿಮಿನಲ್‌ಗಳಿಗೆ ಸುರಕ್ಷಿತ ಸ್ವರ್ಗವಾಗಿಲ್ಲ ಎಂಬುದನ್ನು ಈ ಪ್ರಕರಣ ಸಾಬೀತುಪಡಿಸಿದೆ ಎಂದು ಸಹಾಯಕ ಅಟಾರ್ನಿ ಜನರಲ್ ಲೀಸಾ ಮೊನಾಕೊ ಹೇಳಿದ್ದಾರೆ.
2016ರಲ್ಲಿ ಬಿಟ್‌ಫಿನೆಕ್ಸ್ ವೇದಿಕೆಯನ್ನು ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು 2000ಕ್ಕೂ ಅಧಿಕ ವ್ಯವಹಾರದ ಮೂಲಕ ಸುಮಾರು 119,754 ಬಿಟ್ ಕಾಯಿನ್ ಗಳನ್ನು ಕದ್ದಿದ್ದರು. ಆ ಸಮಯದಲ್ಲಿ ಇದರ ಮೌಲ್ಯ 71 ಮಿಲಿಯನ್ ಡಾಲರ್ ಆಗಿದ್ದರೆ, ಈಗ 4.5 ಬಿಲಿಯನ್ ಡಾಲರ್ಗೇರಿದೆ. ಈ ಹಣವನ್ನು ಅಕ್ರಮವಾಗಿ ಸಾಗಾಟ ಮಾಡಲು ಈ ದಂಪತಿ ನೆರವಾಗಿದ್ದರು. ಮಾರ್ಗನ್ ಒಂದು ನವೋದ್ಯಮ ಸಂಸ್ಥೆ ಆರಂಭಿಸಿ ಆ ಮೂಲಕ ಹಣ ವರ್ಗಾವಣೆಗೆ ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿದೆ.