ಹಿಜಾಬ್ ವಿದ್ಯಾರ್ಥಿನಿಯರಿಗೆ ಜೆಎನ್‌ಯು ವಿದ್ಯಾರ್ಥಿಗಳ ಬೆಂಬಲ
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ವಿವಾದದಲ್ಲಿ ರಾಜ್ಯದ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತಿದ್ದಾರೆ. ಮಹಿಳೆಯರು ಹಿಜಾಜ್ ಧರಿಸದಂತೆ ನಿಷೇಧಿಸುವುದು ಪುರುಷ ಪ್ರಧಾನ ಮತ್ತು ಇಸ್ಲಾಮೋಫೋಬಿಯಾ ಮನಸ್ಥಿತಿ ಎಂದು ಅವರು ಬಣ್ಣಿಸಿದ್ದಾರೆ.
ಮಹಿಳೆಯರು ಹಿಜಾಬ್ ತ್ಯಜಿಸಬೇಕೆಂದು ಒತ್ತಾಯಿಸುವುದು ಸಂವಿಧಾನದ 25ನೇ ವಿಧಿಯ ಸ್ಪಷ್ಟ ಉಲ್ಲಂಘನೆ. ಭಾರತದ ಸಂವಿಧಾನದ 25ನೇ ವಿಧಿ ಧಾರ್ಮಿಕ ಸ್ವಾಯಂತ್ರ್ಯವನ್ನು ಖಾತರಿಪಡಿಸುತ್ತದೆ. ಅಂತೆಯೇ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗಿಡುವುದು ಶಿಕ್ಷಣದ ಹಕ್ಕು ಮತ್ತು ಧಾರ್ಮಿಕ, ಜನಾಂಗೀಯ, ಜಾತೀಯ, ಲಿಂಗ ಹಾಗೂ ವಾಸಸ್ಥಳದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸುವ ಸಂವಿಧಾನದ 21(ಎ) ಮತ್ತು 15ನೇ ವಿಧಿಯ ಉಲ್ಲಂಘನೆ ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸುವುದು ಕಡ್ಡಾಯ ಎಂದು ಕಳೆದ ವಾರ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಿದ ಕ್ರಮದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
"ಜೆಎನ್‌ಯು ವಿದ್ಯಾರ್ಥಿನಿಯರಾದ ನಾವು, ಶಿಕ್ಷಣದ ಹಕ್ಕಿನ ಜತೆಗೆ ತಮ್ಮ ಧಾರ್ಮಿಕ ಆಚರಣೆಗಳನ್ನು ಅನುಸರಿಸುವ ಮತ್ತು ಹಿಜಾಬ್ ಧರಿಸಬೇಕೇ ಅಥವಾ ಧರಿಸಬೇಡವೇ ಎಂಬ ಆಯ್ಕೆಯನ್ನು ಹೊಂದುವ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿದ್ದೇವೆ" ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.