×
Ad

ನಮ್ಮ ಗಣರಾಜ್ಯದ ನೈಜ ಪೌರರು ಈಗ ಹೋರಾಡಬೇಕಾಗಿದೆ

Update: 2022-02-10 09:26 IST

ಭಾಗ-2

ಜಿಸ್ ಸುಬಹ್ ಕಿ ಖಾತಿರ್ ಜಗ್ ಜಗ್ ಸೆ ಹಮ್ ಮರ್‌ಮರ್ ಕೇ ಜಿತೇ ಹೈ

ವೋ ಸುಬಹ್ ಕಭೀ ತೊ ಆಯೇಗಿ

ಇನ್ ಭೂಖಿ ಪ್ಯಾಸಿ ರುಹೊನ್ ಪರ್ ಏಕ್ ದಿನ್ ತೊ ಕರಮ್ ಫರ್ಮಾಯೆಗಿ

ವೋ ಸುಬಹ್ ಕಭೀ ತೋ ಆಯೇಗಿ

(ಪ್ರಪಂಚದ ಮುಂಜಾನೆಗಾಗಿ ನಾವು ಸಾಯುತ್ತಲೇ ಬದುಕುತ್ತೇವೆ. ಈ ಮುಂಜಾನೆಯು ಯಾವತ್ತಾದರೂ ಬರುವುದು. ಈ ಹಸಿದ ಹಾಗೂ ಬಾಯಾರಿದ ಆತ್ಮಗಳ ಮೇಲೆ ಅದು ಒಂದು ದಿನ ಅನುಗ್ರಹವನ್ನು ನೀಡುತ್ತದೆ. ಆ ಮುಂಜಾನೆ ಯಾವಾಗಲಾದರೂ ಬರುವುದು).

ಇತಿಹಾಸವನ್ನು ಅದರ ಹಳಿಗಳಲ್ಲಿ ನಿಲ್ಲಿಸಲು ಬಯಸುವ ಜನರು ವರ್ತಮಾನದ ಮೇಲೆ ನಂಬಿಕೆಯಿಡುವುದಿಲ್ಲ. ಈ ಸರಕಾರವು ನಮ್ಮ ಗಣರಾಜ್ಯದ ಅಂತರಾತ್ಮದ ಮೇಲೆ ಅಪನಂಬಿಕೆಯನ್ನು ಹೊಂದಿದೆ. ಮತದಾನದ ಹಕ್ಕಿಗೆ ಆಧಾರ್ ಕಾರ್ಡ್‌ಗಳನ್ನು ಜೋಡಿಸಲು ಕಾರ್ಯಪ್ರವೃತ್ತವಾಗುವ ಮೂಲಕ ಅದು ಅಪ್ಪಟ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿಸುವ ಅಪಾರ ಸಂಭಾವ್ಯತೆಗಳನ್ನು ಸೃಷ್ಟಿಸಿದೆ. ಕೃಷಿ ಕಾಯ್ದೆಗಳನ್ನು ಜಾರಿಗೊಳಿಸದಂತೆ ಪದೇ ಪದೇ ನಿಮ್ಮನ್ನು ಒತ್ತಾಯಿಸಿದ ನಮ್ಮ ಆನ್ನದಾತರ ಬಗ್ಗೆ ನಿಮಗೆ ನಂಬಿಕೆಯಿಲ್ಲ. ನೀವು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಿರುವುದಕ್ಕೆ 700ಕ್ಕೂ ಅಧಿಕ ರೈತರ ಸಾವಿನ ಬಗ್ಗೆ ಪಶ್ಚಾತ್ತಾಪಪಟ್ಟಿರುವುದಕ್ಕಿಂತ, ಪಶ್ಚಿಮ ಉತ್ತರಪ್ರದೇಶದಲ್ಲಿ ನೀವು 70 ಸೀಟುಗಳನ್ನು ಕಳೆದುಕೊಳ್ಳಬಹುದೆಂಬ ಭೀತಿಯೇ ಕಾರಣವಾಗಿದೆ. ಆದರೆ ರೈತರ ಮುಖ್ಯ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯನ್ನು ಬರಹರೂಪದಲ್ಲಿ ಖಾತರಿ ನೀಡಿಲ್ಲ. ನೀವು ಜಾಟರಲ್ಲಿ, ಸಿಖ್ಖರಲ್ಲಿ ಮತ್ತು ನಿಮ್ಮ ವಿರುದ್ಧ ಯಾರು ಎದ್ದು ನಿಲ್ಲುವರೋ ಅವರ ಬಗ್ಗೆ ಅಪನಂಬಿಕೆಯನ್ನು ಹೊಂದಿರುವಿರಿ. ಆದಾಗ್ಯೂ ಚುನಾವಣೆ ಬಂದಾಕ್ಷಣ ನೀವು ಲಜ್ಜೆಯಿಲ್ಲದೆ ಪಗಡಿಗಳನ್ನು ಧರಿಸಿ, ಚುನಾವಣಾ ಮೈತ್ರಿಕೂಟದ ಕೊಡುಗೆಗಳನ್ನು ನೀಡುತ್ತೀರಿ.

 ಆದರೆ ಈ ಸಲ ಚೌಧುರಿಗಳು ಈ ಸರಕಾರದ ಹಾಲಿ ಸಚಿವರ ಪುತ್ರ ಐವರು ರೈತರ ಮೇಲೆ ವಾಹನ ಹರಿಸಿರುವುದನ್ನು ಮರೆಯಲಾರರು. ಆತನನ್ನು ಬಂಧಿಸಲು ಅವರಿಗೆ ಮೂರು ದಿನಗಳೇ ಬೇಕಾಯಿತು. ಅದು ಕೂಡಾ ಭಯಭೀತವಾದ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ ಬಳಿಕವಷ್ಟೇ. ನಾನು ಇಲ್ಲಿ ಬಂದು ನಿಂತಿದ್ದೇನೆ ಹಾಗೂ ಖೇರಿ ಕ್ಷೇತ್ರದ ಲೋಕಸಭಾ ಸದಸ್ಯನಾಗಿರುವ ಆ ಸಹಾಯಕ ಸಚಿವನನ್ನು ಹುದ್ದೆಯಿಂದ ಕಿತ್ತುಹಾಕುವಂತೆ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಆತ ತನ್ನ ಹುದ್ದೆಯಲ್ಲಿ ಮುಂದುವರಿಯುವ ಪ್ರತಿಯೊಂದು ನಿಮಿಷವೂ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲದೆ ನಮ್ಮ ರಾಜಕೀಯದ ಸಭ್ಯತೆ ಹಾಗೂ ಆತ್ಮಗೌರವಕ್ಕೆ ನೀಡುವ ಅಪಮಾನವಾಗಿದೆ. ಇದನ್ನು ಹೇಳಲು ನಾನು ಇಲ್ಲಿ ನಿಲ್ಲಬಾರದಿತ್ತು. ನಿಮ್ಮ ಆತ್ಮಸಾಕ್ಷಿಯು ಹಾಗೆ ಹೇಳಬೇಕಿತ್ತು. ‘ಜಬ್ ಮನುಷ್ ಪರ್ ನಾಶ್ ಆತಾ ಹೈ, ಪೆಹ್ಲೆ ವಿವೇಕ್ ಮರ್ ಜಾತಾ ಹೈ’ (ಯಾವಾಗ ವಿನಾಶವು ಮಾನವನಿಗೆ ಬರುತ್ತದೋ, ಮೊದಲಿಗೆ ವಿವೇಕವು ಸತ್ತು ಹೋಗುತ್ತದೆ).

ನಮ್ಮ ಗಣರಾಜ್ಯದ ಯಜಮಾನರು ವರ್ತಮಾನದ ಮೇಲೆ ನಂಬಿಕೆ ಕಳೆದುಕೊಂಡಿರುವುದನ್ನು ಪೆಗಾಸಸ್ ಕರ್ಮಕಾಂಡದಲ್ಲಿ ಸರಿಯಾಗಿ ನಿರೂಪಿತವಾಗಿದೆ. ಹೌದು, ನಾನು ಅದನ್ನು ಹೇಳಲು ಹೊರಟಿದ್ದೇನೆ. ಯಾಕೆಂದರೆ ಈಗ ಆಳುವ ಪಕ್ಷದ ಬೆಂಚುಗಳಲ್ಲಿರುವ 2ಜಿ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ, ಆಗಿನ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ನೀವು ನನಗೆ ಅದು ‘ನ್ಯಾಯಾಲಯದ ಅಧೀನದಲ್ಲಿದೆ, ನ್ಯಾಯಾಲಯದ ವಿಚಾರಣೆಯಲ್ಲಿದೆ’ ಎಂದೆಲ್ಲಾ ಕಾರಣ ನೀಡದಿರಿ. ನಾನು ಆ ಬಗ್ಗೆ ಮಾತನಾಡುತ್ತೇನೆ.

ತನ್ನದೇ ಆದ ಪೌರರ ಮೇಲೆ ಹಲವು ವರ್ಷಗಳ ಕಾಲ ಬೇಹುಗಾರಿಕೆ ನಡೆಸಲು ಬೇಕಾದ ತಂತ್ರಜ್ಞಾನವನ್ನು ಖರೀದಿಸುವು ದಕ್ಕಾಗಿ ಸರಕಾರವು ತೆರಿಗೆ ಪಾವತಿದಾರರ ಹಣವನ್ನು ಖರ್ಚು ಮಾಡಿದೆಯೆಂಬ ಆರೋಪ ಎದುರಿಸುತ್ತಿದೆ. ಆದರೆ ಪ್ರಮುಖ ಪತ್ರಕರ್ತರೊಬ್ಬರ ಮಾತುಗಳಲ್ಲಿ ಹೇಳುವುದಾದರೆ, ‘ನ್ಯೂಯಾರ್ಕ್ ಟೈಮ್ಸ್’ ಸುಳ್ಳು ಹೇಳುತ್ತಿದೆ, ‘ದಿ ವೈರ್’ ಸುಳ್ಳು ಹೇಳುತ್ತಿದೆ, ಫ್ರೆಂಚ್ ಸರಕಾರ ಸುಳ್ಳು ಹೇಳುತ್ತಿದೆ, ಅಮೆರಿಕ ಸರಕಾರ ಸುಳ್ಳು ಹೇಳುತ್ತಿದೆ, ಜರ್ಮನ್ ಸರಕಾರ ಸುಳ್ಳು ಹೇಳುತ್ತಿದೆ, ಎನ್‌ಎಸ್‌ಒ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ವಾಟ್ಸ್‌ಆ್ಯಪ್ ಹಾಗೂ ಆ್ಯಪಲ್ ಕೂಡಾ ಸುಳ್ಳು ಹೇಳುತ್ತಿದೆ. ಈ ಸರಕಾರ ಮಾತ್ರವೇ ಮಾತ್ರವೇ ಪೆಗಾಸಸ್ ಕುರಿತಂತೆ ಸತ್ಯದೊಂದಿಗೆ ಭವ್ಯವಾದ ಪ್ರತ್ಯೇಕತೆಯನ್ನು ಹೊಂದಿದೆ. ಓರ್ವ ಸಚಿವ ಈ ಮಾಧ್ಯಮಗಳನ್ನು ಸುಪಾರಿ ಮೀಡಿಯಾ ಎಂದು ನಿಂದಿಸುತ್ತಿದ್ದಾನೆ. ಈ ಸದನದಲ್ಲಿ ಇನ್ನೋರ್ವ ಎದ್ದು ನಿಂತು ನಮ್ಮ ಮುಂದೆ ನಿರ್ಭಿಡೆಯಿಂದ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಸರಕಾರವು ಸುಪ್ರೀಂ ಕೋರ್ಟ್‌ನ್ನು ಕೂಡಾ ತಪ್ಪುದಾರಿಗೆಳೆಯುತ್ತಿದೆ.

 ಕಾನೂನು ಹೇರುವಂತಹ ಪ್ರತಿಯೊಂದು ಖಾಸಗಿ ಬಾಧ್ಯತೆಯಿಂದ ವಿನಾಯಿತಿ ಪಡೆಯಲು ಆಡಳಿತಕ್ಕೆ ಅಧಿಕಾರ ನೀಡುವಂತಹ ದತ್ತಾಂಶ ಸಂರಕ್ಷಣಾ ವಿಧೇಯಕವನ್ನು ಈ ಸರಕಾರವು ಹೇಗೆ ಸಮರ್ಥಿಸಿಕೊಳ್ಳುತ್ತದೆ?. ನಿಮಗೆ ಬಹುತೇಕ ಮೂಲಭೂತ ಅಂಶದ ಬಗ್ಗೆ ಕನಿಷ್ಠ ಗೌರವವಿದೆ. ಒಕ್ಕೂಟ ವ್ಯವಸ್ಥೆಯ ಸರಕಾರಗಳು, ರಾಜ್ಯದ ಪ್ರಾಂತದೊಳಗೆ 50 ಕಿ.ಮೀ. ಪ್ರದೇಶವನ್ನು ಬಿಎಸ್‌ಎಫ್ ವ್ಯಾಪ್ತಿಗೆ ಸೇರಿದ್ದೆಂದು ನೀವು ಹೇಗೆ ವಿವರಿಸುವಿರಿ.

ನೀವು ಪತ್ರಕರ್ತ ಸಿದ್ದೀಕ್ ಕಪ್ಪನ್ ಬಗ್ಗೆ ಎಷ್ಟರ ಮಟ್ಟಿಗೆ ಅಪನಂಬಿಕೆಯಿರಿಸಿ ದ್ದೀರೆಂದರೆ ಹಾಥರಸ್‌ಗೆ ಭೇಟಿ ನೀಡುವ ಮೊದಲೇ ಮತ್ತು ತನ್ನ ವರದಿಯನ್ನು ಬರೆಯುವ ಮೊದಲೇ ಆತನನ್ನು ಬಂಧಿಸಿದ್ದೀರಿ. ಜೋಕ್ ಹಾರಿಸುವ ಮುನ್ನವೇ ಕಾಮಿಡಿಯನ್ ಮುನಾವರ್ ಫಾರೂಕಿ ಬಗ್ಗೆ ಅಪನಂಬಿಕೆಯನ್ನು ಹೊಂದಿದ್ದೀರಿ. ಈ ಸರಕಾರವು ತ್ರಿವಳಿ ತಲಾಖ್ ಹಾಗೂ ಹಜ್ ಯಾತ್ರಾ ನಿರ್ಬಂಧಗಳನ್ನು ರದ್ದುಪಡಿಸುವ ಮೂಲಕ ಮುಸ್ಲಿಮರನ್ನು ವಿೋಚನೆಗೊಳಿಸಲು ಆರಂಭಿಸಿದೆಯೆಂದು ರಾಷ್ಟ್ರಪತಿಯವರ ಭಾಷಣ ಹೇಳಿದೆ. ಆದರೆ 2022ರ ಹೊಸವರ್ಷದಂದು ಭಾರತದ ಮುಸ್ಲಿಮ್ ಮಹಿಳೆಯರು ತಮ್ಮನ್ನು 2021ರ ಸುಲ್ಲಿ ಡೀಲ್ಸ್‌ನ 2.0 ಆವೃತ್ತಿಯಾದ ಬುಲ್ಲಿ ಬಾಯ್ಸಿ ಮೂಲಕ ಹರಾಜಿಗಿರಿಸಲಾಗಿದೆ ಎಂಬ ವಾಸ್ತವತೆಯಿಂದ ದಿಗಿಲುಗೊಂಡರು. ಈ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತವಾದ ಬಳಿಕವಷ್ಟೇ ಸರಕಾರವು ಕಾರ್ಯಪ್ರವೃತ್ತವಾಯಿತು ಹಾಗೂ ಕೆಲವರನ್ನು ಬಂಧಿಸಲಾಯಿತು.

 ಮುಸ್ಲಿಮರಿಗೆ ಬಾಡಿಗೆ ಮನೆಗಳನ್ನು ನಿರಾಕರಿಸಲಾಗುತ್ತಿದೆ. ಭಾರತದಲ್ಲಿ ಅವರು ಕೋವಿಡ್ ಹರಡುತ್ತಿದ್ದಾರೆಂದು ಆರೋಪಿಸಲಾಗಿತ್ತು, ಅವರನ್ನು ಆರ್ಥಿಕವಾಗಿ ಬಹಿಷ್ಕರಿಸಲಾಗಿತ್ತು ಹಾಗೂ ನಿಯೋಜಿತ ಸ್ಥಳಗಳಲ್ಲಿ ಅವರು ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲಾಗಿದೆ. 80 ಶೇ. ವರ್ಸಸ್ 20 ಶೇ. ಸಮರದಿಂದಾಗಿ ನಮ್ಮ ಗಣರಾಜ್ಯದ ಶೇ.100ರಷ್ಟನ್ನು ಹಾನಿಗೆಡಹುವ ಅಪಾಯವನ್ನು ತಂದೊಡ್ಡಿದೆ. ಇದು ಕೇವಲ ಅತಿರೇಕದ ಇಸ್ಲಾಮೋಫೊಬಿಯಾವಲ್ಲ. ಸಂಯುಕ್ತ ಕ್ರೈಸ್ತ ವೇದಿಕೆಯ ಪ್ರಕಾರ, 2021ರಲ್ಲಿಯೇ ಕ್ರೈಸ್ತ ಸಮುದಾಯದವರ ಮೇಲೆ 461 ದಾಳಿಗಳು ನಡೆದಿವೆ. ಹಿಂಾನಿರತ ಗುಂಪುಗಳು ಕನಿಷ್ಠ 16 ಪಟ್ಟಣಗಳು ಹಾಗೂ ನಗರಗಳಲ್ಲಿ ಚರ್ಚ್‌ಗಳು, ಕ್ರೈಸ್ತರ ಪ್ರಾರ್ಥನಾ ಸಭೆಗಳು ಹಾಗೂ ಕ್ರಿಸ್‌ಮಸ್ ಆಚರಣೆಗಳ ಸ್ಥಳಗಳ ಮೇಲೆ ದಾಳಿ ನಡೆಸಿದವು.

ನನ್ನ ಮನೆಯಿರುವ ನಾಡಿಯಾ ಜಿಲ್ಲೆಯ ಕರೀಂಪುರದಲ್ಲಿ ಮೊನಿರುಲ್ ಶೇಖ್ ಎಂಬ ವೃದ್ಧನೊಬ್ಬ ಹೇಳಿರುವುದನ್ನು ನಾನು ಭಯ ಹಾಗೂ ನಾಚಿಕೆಯೊಂದಿಗೆ ಹೇಳುತ್ತಿದ್ದೇನೆ. ‘ಮಾ ಎತಾ ತೊಮಾದರ್ ನಿತಿರ್ ಲೊರೈ. ಕಿಂತು ಅಮಾದೆರ್ ಬಾನ್‌ಚಾರ್ ಲೊರೈ’ (ಅಮ್ಮಾ, ನಿಮಗೆ ಸಿದ್ಧಾಂತಗಳು ಸಂಘರ್ಷಕ್ಕೆ ಉತ್ತಮವಾದುದಾಗಿದೆ. ಆದರೆ ನಮಗೆ ಇದು ಬದುಕುಳಿಯುವುದಕ್ಕಾಗಿನ ಸಮರವಾಗಿದೆ) ಎಂದಾತ ಹೇಳಿದ್ದ.

ಪರ್ ಓ ಸುಬಹ್ ಕಭಿ ತೋ ಆಯೇಗಿ

ಹಕ್ ಮಾಂಗ್‌ನೆ ವಾಲೊಂ ಕಿ ಜಿಸ್‌ದಿನ್ ಸುಲಿ ನಾ ದಿಖಾಯಿ ಜಾಯೆಗಿ

ವೊ ಸುಬಹ್ ಕಭಿ ತೋ ಆಯೇಗಿ

(ಆದರೆ ಆ ಮುಂಜಾನೆ ಯಾವಾಗ ಬರುವುದು.

ಹಕ್ಕನ್ನು ಕೇಳುವವರಿಗೆ ದಂಡನೆಯು ಕಾಣದೆ ಇರುವ ದಿನವು)

ವಿತ್ತ ಸಚಿವಾಲಯವು ಅಮೃತ ಕಾಲದ ಬಗ್ಗೆ ಮಾತನಾಡುತ್ತಿದ್ದರೆ, ಅದರ ಏಜೆನ್ಸಿಗಳು ಪೌರರ ವಿರುದ್ಧ ತನ್ನ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕಪ್ಪುಹಣ ಬಿಳುಪು ತಡೆ (ಪಿಎಂಎಲ್‌ಎ) ಕಾಯ್ದೆಯನ್ನು ಯೋಗ್ಯವಾಗಿ ಬಳಸಿಕೊಳ್ಳಿ ಎಂದು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಕೊನೆಗೂ ಎಚ್ಚರಿಕೆ ನೀಡಿದೆ.

ಇಲ್ಲದಿದ್ದಲ್ಲಿ ಈ ಕಾಯ್ದೆಯು ತನ್ನ ಪ್ರಸಕ್ತತೆಯನ್ನು ಕಳೆದುಕೊಳ್ಳಲಿದೆ ಎಂದು ಅದು ಹೇಳಿದೆ. ನೀವು ಸಣ್ಣ ಎಂಎಸ್‌ಎಂಇಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದೀರಿ ಹಾಗೂ ವ್ಯಕ್ತಿಗಳನ್ನು ಬಂಧಿಸಲು ಮತ್ತು ಅವರ ಖಾತೆಗಳು, ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಜಿಎಸ್‌ಟಿ ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದೀರಿ. ನಮ್ಮ ದೇಶದಲ್ಲಿ ನ್ಯಾಯಾಂಗ ಪ್ರಕ್ರಿಯೆಯು ಅಮಾಯಕರಿಗೆ ನೀಡುವ ಶಿಕ್ಷೆಯಾಗಿದೆ.

2021-22ನೇ ಸಾಲಿನಲ್ಲಿ ಭಾರತದ ಜಿಡಿಪಿಯು 2019-20ರ ಮಟ್ಟಕ್ಕೆ ಸಮಾನವಾಗಿದೆ. ಆದರೆ ನಮ್ಮ ಗಣರಾಜ್ಯದ ಯಜಮಾನರು 2022ರ ಜನವರಿ ತಿಂಗಳಿಗೆ 14 ಲಕ್ಷ ಕೋಟಿ ರೂ. ಗರಿಷ್ಠ ಜಿಎಸ್‌ಟಿ ಸಂಗ್ರಹವಾಗಿದೆಯೆಂದು ಸಂಭ್ರಮಿಸಿಕೊಂಡಿದ್ದಾರೆ. ಅಂದರೆ 2020ರ ಜನವರಿಗಿಂತ ಈ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ.25ರಷ್ಟು ಹಾಗೂ ಆದಾಯ ಸಂಗ್ರಹದಲ್ಲಿ ಶೇ.51ರಷ್ಟು ಹೆಚ್ಚಳವಾಗಿದೆಯೆಂದು ಸರಕಾರ ಹೇಳಿಕೊಂಡಿದೆ. ಇದರ ಆರ್ಥವೇನು?. ಆದರೆ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವು ಸ್ಥಿರವಾಗಿಯೇ ಉಳಿದುಕೊಂಡಿದೆಯೆಂಬುದು ಇದರ ಅರ್ಥ. ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಶ್ರೀಮಂತವಾಗಿಸುವುದು ಹಾಗೂ ಖುದ್ದಾಗಿ ಸರಕಾರವು ಶ್ರೀಮಂತಗೊಂಡಿದ್ದುದೇ ನಾವು ಸಾಧಿಸಿದ ಯಶಸ್ಸಾಗಿದೆ. ಆದರೆ ನಮ್ಮ ದೇಶವು ಹಿಂದೆಂಗಿಂತಲೂ ಅಸಮಾನತೆಯಿಂದ ಕೂಡಿದೆ. ಸಿಆರ್‌ಐಎಸ್‌ಐಎಲ್ ತನ್ನ ಇತ್ತೀಚಿನ ವರದಿಯಲ್ಲಿ ಗೃಹಬಳಕೆಯ ಉಳಿತಾಯವು ಒಟ್ಟು ಆಂತರಿಕ ಉತ್ಪನ್ನದ ಶೇ.11ರಷ್ಟಾಗಿದೆಯೆಂದು ವರದಿ ಮಾಡಿದೆ. ಇದು ಕಳೆದ ದಶಕದಲ್ಲಿದ್ದುದಕ್ಕಿಂತ ಶೇ.2ರಷ್ಟು ಕಡಿಮೆಯಾಗಿದೆ. ಹಣದುಬ್ಬರ ಹಾಗೂ ನಿರುದ್ಯೋಗವು ಗಗನಕ್ಕೇರಿದೆ. ವಿಶೇಷವಾಗಿ ಸೇವಾ ವಲಯದಲ್ಲಿ ಅತ್ಯಧಿಕ ಕುಗ್ಗುವಿಕೆಯು ಕಂಡುಬಂದಿರುವುದಾಗಿ ಸರಕಾರ ಬಿಡುಗಡೆಗೊಳಿಸಿದ ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ. ಎಂನರೇಗಾದ ಅನುದಾನವನ್ನು ಶೇ.25ರಷ್ಟು ಕಡಿಮೆಗೊಳಿಸಿರುವುದು ಈ ಅಗ್ನಿಪರೀಕ್ಷೆಯ ಸಮಯದಲ್ಲಿ ಈ ಸರಕಾರವು ಬಿಂಬಿಸುತ್ತಿರುವ ಅಮೃತ ಕಾಲದ ರೀತಿಯನ್ನು ತೋರಿಸುತ್ತದೆ.

 ನೀವು ನಿಮ್ಮನ್ನು ಭಾರತದ ಆಡಳಿತಗಾರರೆಂದು ಹಾಗೂ ಬಿಜೆಪಿಯನ್ನು ಆಡಳಿತ ನಡೆಸುವ ಪಕ್ಷವೆಂದು ಭಾವಿಸಿದ್ದೀರಿ. ಆದರೆ ತನ್ನ ಇತ್ತೀಚಿನ ಭಾಷಣದಲ್ಲಿ ನ್ಯಾಯಮೂರ್ತಿ ಗೌತಮ್ ಪಟೇಲ್ ಏನು ಹೇಳಿದ್ದಾರೆಂಬುದನ್ನು ನೀವು ಸಂಪೂರ್ಣವಾಗಿ ಮರೆತುಬಿಟ್ಟಿದ್ದೀರಿ. ಅವರು ‘‘ಸಂವಿಧಾನ ಅಸ್ತಿತ್ವದಲ್ಲಿರುವವರೆಗೆ ಭಾರತವು ಆಳ್ವಿಕೆಗೊಳಪಡಲು ಸಾಧ್ಯವೇ ಇಲ್ಲ. ಅದು ಯಾವತ್ತೂ ಸಾಧ್ಯವಿಲ್ಲ. ಅದು ಸೀಮಿತ ಅವಧಿಯವರೆಗೆ ಆಡಳಿತಕ್ಕೊಳಗಾಗಬಹುದು. ಆದರೆ ಯಾವತ್ತೂ ಆಳಲ್ಪಡದು’’ ಎಂದು ಮಾರ್ಮಿಕವಾಗಿ ಹೇಳಿದ್ದರು.

ಇಂದು ಭಾರತೀಯರಾದ ನಾವೆಲ್ಲರೂ ಒಂದು ವಿಷಯವನ್ನು ಮನದಟ್ಟು ಮಾಡಿಕೊಳ್ಳಬೇಕು. ಗಣರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ನಾನು ಭೇಟಿಯಾಗಿರುವ ನಾಗರಿಕ ಸಮಾಜ, ನ್ಯಾಯವಾದಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಉದ್ಯಮಿಗಳು, ‘‘ಈ ದೇಶದಲ್ಲಿ ಏನು ನಡೆಯುತ್ತಿದೆ. ಏನಾದರೂ ಬದಲಾವಣೆಯಾಗಬೇಕಾದ ಅಗತ್ಯವಿದೆ’’ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನವನ್ನು ಪ್ರವೇಶಿಸುವಂತೆ ನಾನು ಅವರನ್ನು ಕೇಳಿಕೊಂಡಾಗ ನಮಗೆ ಅಂತಹ ಶ್ರೀಮಂತಿಕೆ ಇಲ್ಲವೆಂದು ಹೇಳಿದರು. ಇನ್ನೊಬ್ಬರು ನಾನು ಈ ಚುನಾವಣೆಯನ್ನು ಹೊರಗಿನಿಂದ ಗಮನಿಸುತ್ತಿದ್ದೇನೆ ಎಂದು ಹೇಳಿದರೆ, ಇನ್ನೊಬ್ಬರು ನನಗೆ ನನ್ನ ಉದ್ಯಮದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪತ್ರಕರ್ತ ವೃತ್ತಿಯಲ್ಲಿ ನನ್ನ ವಿಶ್ವಸನೀಯತೆಯನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ನಾನು ವೈಯಕ್ತಿಕ ವಿಷಯಗಳಿಗೆ ಆದ್ಯತೆ ನೀಡುವುದಾಗಿ ಮಗದೊಬ್ಬರು ಹೇಳುತ್ತಾರೆ. ನಿಮಗೆಲ್ಲರಿಗೂ ನಾನು ಹೇಳುವುದೇನೆಂದರೆ ಯುದ್ಧದ ಸಮಯವನ್ನು ನೀವು ಆಯ್ದುಕೊಳ್ಳಲು ಸಾಧ್ಯವಿಲ್ಲ. ರಣ ಕಹಳೆ ಮೊಳಗಿದೆ. ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಸನ್ನಿವೇಶಗಳು ಏನೇ ಇರಲಿ ನಮ್ಮ ಗಣರಾಜ್ಯದ ನೈಜ ಪೌರರು ಈಗ ಹೋರಾಡಬೇಕಾಗಿದೆ.

 ಈ ಮುಂಜಾನೆ ನಮ್ಮಿಂದಲೇ ಬರಲಿದೆ

ನ್ಯಾಯಾಂಗಕ್ಕೆ ನನ್ನ ಸಂಸದೀಯ ಹಕ್ಕನ್ನು ಬಸಿಕೊಂಡು ಹೇಳುವುದೇನೆಂದೆರೆ, ನೀವೆಲ್ಲರೂ ಈ ದೇಶದ ಕೊನೆಯ ಆಸರೆ ಹಾಗೂ ಪರಿಹಾರವಾಗಿದ್ದೀರಿ. ನಮ್ಮನ್ನು ವಿಫಲಗೊಳಿಸದಿರಿ. ಪುತ್ರರು, ಅಳಿಯಂದಿರು ಹಾಗೂ ನಿವೃತ್ತಿ ಆನಂತರದ ಸ್ಥಾನಮಾನಗಳ ಬಗ್ಗೆ ಹಾಗೂ ಉನ್ನತ ನ್ಯಾಯಾಲಯಗಳಿಗೆ ಭಡ್ತಿ ಪಡೆಯಲು ಎಷ್ಟು ವರ್ಷಗಳು ಬೇಕಾಗಬಹುದೆಂದು ನೀವು ಯೋಚಿಸದಿರಿ. ನಮ್ಮ ಗಣರಾಜ್ಯವನ್ನು ರಕ್ಷಿಸಲು ಸಕ್ರಿಯವಾಗಿ ಹೆಜ್ಜೆಯಿಡಿ.

ಈ ಮುಂಜಾನೆ ನಮ್ಮಿಂದಲೇ ಬರಲಿದೆ.

ಪ್ರತಿಪಕ್ಷಗಳಿಗೆ ನಾು ಹೇಳುವುದೇನೆಂದರೆ ನಮಗೆ ಕಾಯುವ ಮತ್ತು ನೋಡುವ ಸೌಲಭ್ಯವಿಲ್ಲ. ಹೋರಾಡುವುದಕ್ಕಾಗಿ ಈ ದೇಶಾದ್ಯಂತ ಪ್ರತಿಯೊಂದು ರಾಜ್ಯದಲ್ಲಿ ನಾವು ನಾವಾಗಿಯೇ ಮರುಜನ್ಮ ತಾಳಬೇಕಾಗಿದೆ.

ದಕ್ಷಿಣ ಹಾಗೂ ಈಶಾನ್ಯ ಭಾರತದಲ್ಲಿ 200 ಸ್ಥಾನಗಳಿವೆ. ಬಿಹಾರದಿಂದ ಕೇರಳದವರೆಗೆ 200 ಸ್ಥಾನಗಳಿಗಾಗಿ ಕೇಸರಿ ಪಡೆಯು ತನ್ನ ಎಲ್ಲಾ ಸಾಮರ್ಥ್ಯವನ್ನು ಬಳಸಿ ಹೋರಾಡುತ್ತಿದ್ದರೂ, ಅದಕ್ಕೆ 50ಕ್ಕಿಂತ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ನಾವು ಉತ್ತರ ಹಾಗೂ ಪಶ್ಚಿಮದಲ್ಲಿ ಮರುಜನ್ಮ ತಾಳಿದಲ್ಲಿ, ನಮ್ಮ ಗಣರಾಜ್ಯವನ್ನು ಮರಳಿ ಪಡೆಯುವ ಹಾದಿಯಲ್ಲಿ ಸಾಗಲಿದ್ದೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News