ತಮಿಳಿನಲ್ಲಿ ಕೇಳಿದ ಪ್ರಶ್ನೆಗೆ ಹಿಂದಿಯಲ್ಲಿ ಉತ್ತರ: ಲೋಕಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರ

Update: 2022-02-10 05:58 GMT
ಪಿಯೂಷ್ ಗೋಯೆಲ್ (PTI)

ಹೊಸದಿಲ್ಲಿ: ತಮಿಳು ಭಾಷೆಯಲ್ಲಿ ಕೇಳಲಾದ ಒಂದು ಪ್ರಶ್ನೆ ಬುಧವಾರ ಲೋಕಸಭೆಯಲ್ಲಿ ವಿಪಕ್ಷ ಮತ್ತು ಆಡಳಿತ ಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತಲ್ಲದೆ ಸಚಿವರುಗಳು ಹಿಂದಿಯಲ್ಲಿ ಉತ್ತರ ನೀಡುತ್ತಿರುವ ಕುರಿತ ವಿಚಾರವೂ ಪ್ರಸ್ತಾಪಗೊಂಡಿತು.

ಪ್ರಶ್ನೋತ್ತರ ಅವಧಿಯಲ್ಲಿ ಡಿಎಂಕೆ ಸದಸ್ಯ ಎ ಗಣೇಶಮೂರ್ತಿ ಅವರು ಎಫ್‍ಡಿಐ ಒಳಹರಿವು ಕುರಿತು ತಮಿಳಿನಲ್ಲಿ ಒಂದು ಪೂರಕ ಪ್ರಶ್ನೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಿಯೂಷ್ ಗೋಯೆಲ್, ತಮಗೆ ಮೊದಲ ಭಾಗ ಅರ್ಥವಾಗಿಲ್ಲ, ಯಾವ ಯೋಜನೆ ಎಂಬ ಕುರಿತು ಸ್ಪಷ್ಟನೆ ಕೇಳಿದರು.

"ಅದಕ್ಕೆ ಉತ್ತರಿಸಿದ ಸಂಸದ ಗಣೇಶಮೂರ್ತಿ, "ನಾನು ಒಂದು ಪ್ರಶ್ನೆಯನ್ನು ಇಂಗ್ಲಿಷ್‍ನಲ್ಲಿ ಕೇಳಿದರೆ ಸಚಿವರು ಇಂಗ್ಲಿಷ್‍ನಲ್ಲಿಯೇ ಉತ್ತರಿಸಬೇಕು, ಸದಸ್ಯರು ತಮಿಳಿನಲ್ಲಿ ಪ್ರಶ್ನೆ ಕೇಳಿದರೆ ಸಚಿವರು ಹಿಂದಿಯಲ್ಲಿ ಉತ್ತರಿಸುತ್ತಾರೆ,'' ಎಂದಾಗ ಗೋಯೆಲ್ ತಾವು ಹಿಂದಿಯಲ್ಲಿ ಉತ್ತರಿಸುವುದಾಗಿ ಹಾಗೂ ಸಂಸದರಿಗೆ ಅದರ ಅನುವಾದ ಲಭ್ಯ ಎಂದರು.

ಇದಕ್ಕೆ ವಿಪಕ್ಷ ಸದಸ್ಯರಲ್ಲಿ ಹಲವರು ಆಕ್ಷೇಪಿಸಿದರಲ್ಲದೆ, ಪ್ರಮುಖವಾಗಿ ದಕ್ಷಿಣದ ರಾಜ್ಯಗಳ ಸಂಸದರುಗಳು ಇಂಗ್ಲಿಷಿನಲ್ಲಿ ಪ್ರಶ್ನೆ ಕೇಳಿದಾಗ ಸಚಿವರು ಹಿಂದಿಯಲ್ಲಿ ಉತ್ತರಿಸುತ್ತಿದ್ದಾರೆ ಎಂದರು.

ಆಗ ಸ್ಪೀಕರ್ ಓಂ ಬಿರ್ಲಾ, ಅವರು ಗಣೇಶಮೂರ್ತಿಗೆ ತಮ್ಮ ಪ್ರಶ್ನೆಯನ್ನು ಮತ್ತೆ ಕೇಳುವಂತೆ ಹೇಳಿದಾಗ ಅವರು ತಮಿಳಿನಲ್ಲಿ ಪ್ರಶ್ನಿಸಿದರು.

ಆಗ ಸ್ವಲ್ಪ ಅಸಮಾಧಾನಗೊಂಡ ಗೋಯೆಲ್, ಯಾವ ಭಾಷೆಯಲ್ಲಿ ಪ್ರಶ್ನೆ ಕೇಳಲಾಗುತ್ತದೆಯೋ ಅದೇ ಭಾಷೆಯಲ್ಲಿ ಉತ್ತರಿಸಬೇಕೇ ಎಂದು ಪ್ರಶ್ನಿಸಿದರು. “ನಾನು ಹಿಂದಿಯಲ್ಲಿ ಉತ್ತರಿಸುತ್ತೇನೆ ಹಾಗೂ ಪ್ರಶ್ನೆಯ ಅನುವಾದವನ್ನೂ ಕೇಳಿದ್ದೇನೆ,'' ಎಂದರು.

ಕಳೆದ ವಾರ ಕೂಡ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ನಡುವೆ ಇದೇ ವಿಚಾರಕ್ಕೆ ವಾಕ್ಸಮರ ನಡೆದಿತ್ತು. ಇಂಗ್ಲಿಷಿನಲ್ಲಿ ಕೇಳಲಾಗುವ ಪ್ರಶ್ನೆಗೆ ಹಿಂದಿಯಲ್ಲಿ ಸಚಿವರು ಉತ್ತರಿಸಿದ್ದೇ ತರೂರ್ ಅಸಮಾಧಾನಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News