×
Ad

ಕ್ರಿಪ್ಟೊಕರೆನ್ಸಿಗಳು ಭಾರತದ ಹಣಕಾಸು ಸ್ಥಿರತೆಗೆ ಬೆದರಿಕೆಯಾಗಿವೆ:ಆರ್‌ಬಿಐ ಗವರ್ನರ್

Update: 2022-02-10 21:50 IST

ಮುಂಬೈ,ಫೆ.10: ಕ್ರಿಪ್ಟೊಕರೆನ್ಸಿಗಳು ಭಾರತದ ಹಣಕಾಸು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಗೆ ಬಹುದೊಡ್ಡ ಬೆದರಿಕೆಯಾಗಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ ಇಲ್ಲಿ ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಆರ್‌ಬಿಐನ ವಿತ್ತೀಯ ನೀತಿಯನ್ನು ಪ್ರಕಟಿಸಿ ಮಾತನಾಡುತ್ತಿದ್ದ ಅವರು,‘ಕ್ರಿಪ್ಟೊಕರೆನ್ಸಿಗಳ ವಿಷಯದಲ್ಲಿ ಆರ್‌ಬಿಐ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಖಾಸಗಿ ಕ್ರಿಪ್ಟೊಕರೆನ್ಸಿಗಳು ನಮ್ಮ ಹಣಕಾಸು ಮತ್ತು ಸ್ಥೂಲಆರ್ಥಿಕ ಸ್ಥಿರತೆಗೆ ಬಹುದೊಡ್ಡ ಬೆದರಿಕೆಯಾಗಿವೆ. ಹಣಕಾಸು ಸ್ಥಿರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸುವ ಆರ್‌ಬಿಐ ಸಾಮರ್ಥ್ಯವನ್ನು ಅವು ದುರ್ಬಲಗೊಳಿಸುತ್ತವೆ. ಹೂಡಿಕೆದಾರರು ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡುವಾಗ ಸಂಭಾವ್ಯ ಅಪಾಯಗಳಿಗೆ ತಾವೇ ಹೊಣೆಯಾಗಿರುತ್ತೇವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರಿಗೆ ತಿಳಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಈ ಕ್ರಿಪ್ಟೊಕರೆನ್ಸಿಗಳಿಗೆ ಯಾವುದೇ ಆಧಾರವಿಲ್ಲ (ಆಸ್ತಿ) ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುವ ಕುರಿತು ಆರ್‌ಬಿಐ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ ಎಂದು ಹೇಳಿದ ದಾಸ್,‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಬಗ್ಗೆ ಕಾಲಮಿತಿಯನ್ನು ನೀಡಲು ಸಾಧ್ಯವಿಲ್ಲ. ಆದರೆ ನಾವು ಮಾಡುತ್ತಿರುವುದನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಿದ್ದೇವೆ ಎಂದು ನಾನು ಹೇಳಬಲ್ಲೆ. ಸೈಬರ್ ಸುರಕ್ಷತೆ ಮತ್ತು ನಕಲಿ ಸಿಬಿಡಿಸಿಯಂತಹ ಅಪಾಯಗಳನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News