ಭಾರತದ ವಿರುದ್ಧ ನಕಲಿ ಸುದ್ದಿ ಹರಡಿದ 60ಕ್ಕೂ ಅಧಿಕ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ: ಕೇಂದ್ರ

Update: 2022-02-10 17:34 GMT

ಹೊಸದಿಲ್ಲಿ, ಫೆ. 10: ಭಾರತ ವಿರೋಧಿ ನಕಲಿ ಸುದ್ದಿಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಯುಟ್ಯೂಬ್ ಚಾನೆಲ್‌ಗಳು, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪೇಜ್‌ಗಳು ಸೇರಿದಂತೆ 60ಕ್ಕೂ ಅಧಿಕ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ. ಮೇಲ್ಮನೆಯಲ್ಲಿ ಪೂರಕ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಹಾಯಕ ಸಚಿವ ಎಲ್. ಮುರುಗನ್, ಕೇಂದ್ರ ಸರಕಾರ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ತುಂಬಾ ಕಾಳಜಿ ಹೊಂದಿದೆ ಎಂದರು. ಹರಡುತ್ತಿರುವ ನಕಲಿ ಸುದ್ದಿಗಳು, ದೇಶ ವಿರೋಧಿ ಸಾಮಗ್ರಿಗಳ ಪ್ರಕಾಶಕರ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ ಅವರು, ಯುಟ್ಯೂಬ್, ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ 60ಕ್ಕೂ ಅದಿಕ ಖಾತೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು. ‘‘ನಿರ್ಬಂಧಿಸಲಾದ ಈ ಯುಟ್ಯೂಬ್ ಚಾನೆಲ್‌ಗಳು ಪಾಕಿಸ್ತಾನ ಪ್ರಾಯೋಜಿತ’’ ಎಂದು ಅವರು ಹೇಳಿದರು. ಸುದ್ದಿಪತ್ರಿಕೆಗಳ ಮೂಲಕ ನಕಲಿ ಸುದ್ದಿ ಹರಡುತ್ತಿರುವ ಬಗ್ಗೆ ಅವರು, ಭಾರತೀಯ ಪತ್ರಿಕಾ ಮಂಡಳಿ ಒಂದು ಸ್ವಾಯತ್ತ ಶಾಸನಾತ್ಮಕ ಸಂಸ್ಥೆ. ಅಲ್ಲದೆ, ಅದು ಪತ್ರಕರ್ತರ ನೀತಿ ಸಂಹಿತೆಯ ಕಾಳಜಿ ವಹಿಸಲಿದೆ ಎಂದರು. ‘‘ಪತ್ರಕರ್ತರು ನೀತಿ ಸಂಹಿತೆ ಅನುಸರಿಸಬೇಕು. ಪತ್ರಿಕಾ ಮಂಡಳಿ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ನೀತಿ ಸಂಹಿತೆಯನ್ನು ಎಲ್ಲೆಲ್ಲಿ ಅನುಸರಿಸುವುದಿಲ್ಲವೋ, ಅಲ್ಲೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. 150ಕ್ಕೂ ಅಧಿಕ ಪ್ರಕರಣಗಳಲ್ಲಿ ನಾವು ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ’’ ಎಂದರು. ನಕಲಿ ಸುದ್ದಿಗಳನ್ನು ಹರಡುವುದರಲ್ಲಿ ‘ಟೆಕ್‌ಫಾಗ್’ ಆ್ಯಪ್‌ನ ಪಾತ್ರದ ಬಗ್ಗೆ ಪ್ರಶ್ನಿಸಿದಾಗ ಮುರುಗನ್, ಸರಕಾರ ಸತ್ಯ ಶೋಧನ ಘಟಕ ಸ್ಥಾಪಿಸಿದೆ. ಅದು 30 ಸಾವಿರಕ್ಕೂ ಅಧಿಕ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದೆ ಎಂದರು. ಈ ಘಟಕ ವೈರಲ್ ನಕಲಿ ಸುದ್ದಿಗಳನ್ನು ಕೂಡ ಪರಿಶೀಲನೆ ನಡೆಸುತ್ತದೆ ಎಂದರು. ಡಿಜಿಟಲ್ ಮಾಧ್ಯಮದಲ್ಲಿ ಭಾರತ ವಿರೋಧಿ ನಕಲಿ ಸುದ್ದಿಗಳನ್ನು ಸಂಘಟಿತ ರೀತಿಯಲ್ಲಿ ಹರಡುವುದರಲ್ಲಿ ಭಾಗಿಯಾಗಿರುವ 35 ಯುಟ್ಯೂಬ್ ಆಧರಿತ ಸುದ್ದಿ ಚಾನೆಲ್ ಹಾಗೂ ಎರಡು ವೆಬ್‌ಸೈಟ್‌ಗಳಿಗೆ ನಿರ್ಬಂಧ ವಿಧಿಸಿ ಜನವರಿ 12ರಂದು ಆದೇಶಿಸಲಾಗಿದೆ ಎಂದು ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ, ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ಸ್ಟಾಗ್ರಾಂ ಖಾತೆಗಳು ಹಾಗೂ ಒಂದು ಫೇಸ್‌ಬುಕ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಅದು ಹೇಳಿದೆ. ಡಿಸೆಂಬರ್‌ನಲ್ಲಿ ಕೂಡ 20 ಯುಟ್ಯೂಬ್ ಚಾನೆಲ್‌ಗಳು ಹಾಗೂ ಎರಡು ವೆಬ್‌ಸೈಟ್‌ಗಳಿಗೆ ನಿರ್ಬಂಧ ಹೇರಲಾಗಿತ್ತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಚುಕ್ಕಿ ಗುರುತು ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ನಕಲಿ ಸುದ್ದಿಗಳ ವಿರುದ್ಧ ಹೋರಾಡಲು ಸರಕಾರ ಶಾಸನಬದ್ದ ಹಾಗೂ ಸಾಂಸ್ಥಿಕ ವ್ಯವಸ್ಥೆ ಹೊಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News