ಕರ್ನಾಟಕ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋದ ವಿದ್ಯಾರ್ಥಿನಿಯರು
ಹೊಸದಿಲ್ಲಿ: ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ ತೊಡದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ನೀಡಿದ ಮೌಖಿಕ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಗೆ ವಿಶೇಷ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ಹೈಕೋರ್ಟಿನ ಮಂದೆ ಇರುವ ಅರ್ಜಿಯ ಮೇಲಿನ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡುವ ವೇಳೆ ಮುಖ್ಯ ನ್ಯಾಯಮೂರ್ತಿಗಳು ವ್ಯಕ್ತಿಪಡಿಸಿದ ಅಭಿಪ್ರಾಯಗಳ ಕುರಿತಂತೆ ಲೈವ್ ಲಾ ವಾಹಿನಿಯು ಪೋಸ್ಟ್ ಮಾಡಿರುವ ಟ್ವೀಟ್‍ಗಳನ್ನೂ ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಹಾಜರುಪಡಿಸಿದ್ದಾರೆ.
"ಶಿಕ್ಷಣ ಸಂಸ್ಥೆಗಳು ಆರಂಭಗೊಳ್ಳಬಹುದೆಂದು ನಾವು ಸೂಚಿಸುತ್ತೇವೆ. ಆದರೆ ನ್ಯಾಯಾಲಯದ ಮುಂದೆ ಪ್ರಕರಣ ಬಾಕಿಯಿರುವ ತನಕ ಈ ವಿದ್ಯಾರ್ಥಿಗಳು ಮತ್ತು ಸಂಬಂಧಿತರು ಯಾವುದೇ ಧಾರ್ಮಿಕ ಉಡುಗೆಗಳು ಧರಿಸುವ ಹಾಗಿಲ್ಲ. ಏಕೆಂದರೆ ನಮಗೆ ರಾಜ್ಯದಲ್ಲಿ ಶಾಂತಿಯಿರಬೇಕು,'' ಎಂದು ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಗುರುವಾರ ಹೇಳಿದ್ದರು.
ಹೈಕೋರ್ಟ್ ನೀಡಿದ ಸೂಚನೆಯಿಂದ, ವಿದ್ಯಾರ್ಥಿಗಳ ಮುಂದಿರುವ ಆಯ್ಕೆ, ಮುಖ್ಯವಾಗಿ ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮುಂದಿರುವ ಆಯ್ಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಹೈಕೋರ್ಟ್ ಹೊರಡಿಸಿರುವ ಮಧ್ಯಂತರ ಆದೇಶ ಸಂವಿಧಾನದ 14, 15, 19, 21 ಹಾಗೂ 25 ಇವುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಮ್ಮ ವಿಶೇಷ ಮೇಲ್ಮನವಿ ಅರ್ಜಿಯಲ್ಲಿ ವಾದಿಸಿದ್ದಾರೆ.