ಸರಿಯಾದ ಸಂದರ್ಭದಲ್ಲಿ ನಾವು ಹಿಜಾಬ್ ಪ್ರಕರಣವನ್ನು ಆಲಿಸುತ್ತೇವೆ: ತುರ್ತು ವಿಚಾರಣೆಗೆ ಸುಪ್ರೀಂ ಅಸಮ್ಮತಿ
ಹೊಸದಿಲ್ಲಿ, ಫೆ.11: ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ಮೌಖಿಕ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹಿಜಾಬ್ ವಿವಾದವನ್ನು ವಿಸ್ತೃತ ಮಟ್ಟದಲ್ಲಿ ಹರಡದಂತೆಯೂ ಸಂಬಂಧಪಟ್ಟವರಿಗೆ ಅದು ಸಲಹೆ ನೀಡಿದೆ.
‘‘ ಈ ವಿಷಯವನ್ನು ದೊಡ್ಡ ಮಟ್ಟದಲ್ಲಿ ಹರಡದಿರಿ. ಅಲ್ಲಿ (ಕರ್ನಾಟಕದಲ್ಲಿ) ಏನೇನು ನಡೆಯುತ್ತಿದೆಯೆಂಬುದು ನಮಗೂ ಗೊತ್ತಿದೆ. ಈ ವಿಷಯಗಳನ್ನು ದಿಲ್ಲಿಗೆ ಅಥವಾ ರಾಷ್ಟ್ರಮಟ್ಟಕ್ಕೆ ತರುವುದು ಸೂಕ್ತವೇ’’ ಎಂಬುದನ್ನು ಕೂಡಾ ನೀವು ಚಿಂತಿಸಬೇಕಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಅರ್ಜಿದಾರ, ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರಿಗೆ ತಿಳಿಸಿದರು.
ಹಿಜಾಬ್ ವಿಷಯಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ಮೌಖಿಕ ಮಧ್ಯಂತರ ಆದೇಶದ ವಿರುದ್ಧ ವಿಚಾರಣೆ ನಡೆಸಲು ತಾವು ಸಲ್ಲಿಸಿರುವ ವಿಶೇಷ ರಜಾಕಾಲದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ದೇವದತ್ ಕಾಮತ್ ಅವರು ಸುಪ್ರೀಂಕೋರ್ಟ್ ಗೆ ಅರ್ಜಿಸಲ್ಲಿಸಿದ್ದರು.
ಹಿಜಾಬ್ ಗೆ ಸಂಬಂಧಿಸಿದ ಮಧ್ಯಂತರವು ಕಾನೂನಾತ್ಮಕ ವಿಷಯಗಳನ್ನು ಒಳಗೊಂಡಿದ್ದು, ಅದನ್ನು ಸರ್ವೋಚ್ಚ ನ್ಯಾಯಾಲಯವು ಪರಿಶೀಲಿಸಬೇಕೆಂದು ದೇವದತ್ತ ಕಾಮತ್ ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ನ್ಯಾಯಾಲಯವು ‘‘ಖಂಡಿತವಾಗಿಯೂ ನಾವು ಪರಿಶೀಲಿಸುತ್ತೇವೆ. ಒಂದು ವೇಳೆ ಏನಾದರೂ ತಪ್ಪಾಗಿದ್ದಲ್ಲಿ ಖಂಡಿತವಾಗಿಯೂ ನಾವು ರಕ್ಷಣೆ ನೀಡುತ್ತೇವೆ. ನಾವು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕಾಗಿದೆ’’ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಮೇಲ್ಮನವಿಯನ್ನು ಫೆಬ್ರವರಿ 14ರಂದೇ ಆಲಿಕೆಗಾಗಿ ಕೈಗೆತ್ತಿಕೊಳ್ಳಬೇಕೆಂಬ ಕಾಮತ್ ಅವರು ಸುಪ್ರೀಂಕೋರ್ಟ್ ಗೆ ಆಗ್ರಹಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಕೆ.ವಿ.ರಮಣ ಅವರು, ‘‘ನೋಡೊಣ. ನಾವು ಸೂಕ್ತ ಸಮಯದಲ್ಲಿ ಖಂಡಿತವಾಗಿಯೂ ಮಧ್ಯಪ್ರವೇಶಿಸಲಿದ್ದೇವೆ’’ ಎಂದರು.
ದೇವದತ್ತ ಕಾಮತ್ ಅವರು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ‘‘ಶಾಲೆ ಅಥವಾ ಕಾಲೇಜಿಗೆ ತೆರಳುವಾಗ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತನ್ನು ಪ್ರದರ್ಶಿಸಬಾರದೆಂದು ಹೈಕೋರ್ಟ್ ಹೇಳುತ್ತಿದೆ. ಇದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಇತರ ಧರ್ಮಗಳವರ ಮೇಲೂ ದೂರಗಾಮಿ ಪರಿಣಾಮಗಳಾಗಲಿವೆ. ಉದಾಹರಣೆಗೆ. ಸಿಖ್ಖ್ ಧರ್ಮೀಯರು ಶಾಲಾ, ಕಾಲೇಜುಗಳಿಗೆ ಹೋಗುವಾಗ ತಲೆಗೆ ಪೇಟಾ ಧರಿಸುತ್ತಾರೆ. ಆದರೆ ಹೈಕೋರ್ಟ್, ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತನ್ನು ಪ್ರದರ್ಶಿಸಬಾರದೆಂಬುದಾಗಿ ನಿರ್ದೇಶನ ನೀಡಿದೆ.
ಈ ನಿಟ್ಟಿನಲ್ಲಿ ಮಧ್ಯಂತರ ಹೈಕೋರ್ಟ್ ನ ಮೌಖಿಕ ಮಧ್ಯಂತರ ಆದೇಶದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಪೀಠ ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ದೇವದತ್ತ್ ಕಾಮತ್ ಮನವಿ ಮಾಡಿದರು.
ಆಗ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಾಧೀಶರು ‘‘ಈಗಾಗಲೇ ಹೈಕೋರ್ಟ್ ಈ ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಆದರೆ ಆದು ಏನು ಆದೇಶ ನೀಡಿದೆಯೆಂಬುದು ನಮಗೆ ತಿಳಿದಿಲ್ಲ’ ಎಂದು ಹೇಳಿದರು.
ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೈಕೋರ್ಟ್ ನ ಮಧ್ಯಂತರ ಆದೇಶದ ಪ್ರತಿಯು ಇನ್ನೂ ಹೊರಬಂದಿಲ್ಲ ಎಂದರು. ಆದನ್ನು ಕಕ್ಷಿದಾರ ಪರ ವಕೀಲರು ಬೆಟ್ಟು ಮಾಡಿ ತೋರಿಸಬೇಕಿತ್ತು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್ ಅವರು. ಇದನ್ನು ತಾನು ವಿಶೇಷ ರಜಾಕಾಲದ ಅರ್ಜಿಯಲ್ಲಿ ಉಲ್ಲೇಖಿಸಿದ್ದೇನೆ ಎಂದರು.
ಆಗ ಸಿಜೆಐ ಅವರು, ‘‘ಹಾಗಾದರೆ ನಾವೇನು ಮಾಡಲು ಸಾಧ್ಯ?. ಕಾಯುವ. ಮುಂದೇನಾಗಬಹುದೆಂದು ನೋಡೋಣ ’’ಎಂದರು.‘‘ನಾವು ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ಏನು ನಡೆಯುತ್ತಿದೆಯೆಂಬುದು ನಮಗೂ ತಿಳಿದಿದೆ. ಆದರೆ ಈ ವಿಷಯವನ್ನು ದಿಲ್ಲಿಗೆ , ರಾಷ್ಟ್ರಮಟ್ಟದಲ್ಲಿ ತರುವುದು ಸೂಕ್ತವೇ ಎಂಬುದನ್ನು ನೀವೇ ಯೋಚಿಸಿ ಎಂದು ಸಿಜೆಐ ರಮಣ, ಕಾಮತ್ ಅವರನ್ನುದ್ದೇಶಿಸಿ ಹೇಳಿದರು.
ನ್ಯಾಯವಾದಿ ದೇವದತ್ ಕಾಮತ್ ಪ್ರತಿಕ್ರಿಯಿಸುತ್ತಾ, ಇವೆಲ್ಲವೂ ಅಪ್ಪಟವಾಗಿ ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ ಮತ್ತು ಅವುಗಳನ್ನು ನ್ಯಾಯಾಲಯ ಪರಿಶೀಲಿಸಬೇಕಾಗಿದೆ ಎಂದರು.ಆಗ ಉತ್ತರಿಸಿದ ಸಿಜೆಐ ರಮಣ ಸೂಕ್ತ ಸಮಯದಲ್ಲಿ ನಾವು ಈ ವಿಚಾರವನ್ನು ಆಲಿಕೆಗೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.