×
Ad

ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ಯಾಕೆ ಬೇಕು?

Update: 2022-02-11 11:39 IST

ವೈದ್ಯಕೀಯ ಶಿಕ್ಷಣದ ಸೀಟುಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾತ್ರ ರದ್ದುಗೊಳಿಸಬೇಕಾಗಿರುವುದಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಇಡೀ ವ್ಯವಸ್ಥೆಯೇ ತಪ್ಪಾಗಿದೆ ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಪಡಿಸಬೇಕಾಗಿದೆ. ಆಯ್ಕೆ ಮಾಡುವ ಬದಲು, ಪರಿಶೋಧನೆಗೆ ಹೆಚ್ಚಿನ ಗಮನ ನೀಡುವ ವ್ಯವಸ್ಥೆಯು ಶೋಷಿತ ವರ್ಗಗಳ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ತಡೆಗಳನ್ನು ನಿರ್ಮಿಸುತ್ತದೆ. ಅದೂ ಅಲ್ಲದೆ, ವಿದ್ಯಾರ್ಥಿಗಳನ್ನು ಪ್ರತಿಭೆಯ ಆಧಾರದಲ್ಲಿ ಆಯ್ಕೆ ಮಾಡುವ ನೀಟ್‌ನ ಉದ್ದೇಶವೇ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ.

ತಮಿಳುನಾಡು ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಕಾಯ್ದೆ (2007)ಯು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ರದ್ದುಗೊಳಿಸಿದೆ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪದವಿಪೂರ್ವ ಪರೀಕ್ಷೆಗಳ ಅಂಕಗಳನ್ನು ಮಾನದಂಡವಾಗಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ರಾಜ್ಯ ಸರಕಾರ ನಡೆಸುವ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇದು ಅನ್ವಯಿಸುತ್ತದೆ. ಆದರೆ, ಈಗ ತಮಿಳುನಾಡು ಸರಕಾರವು ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಯನ್ನು ಕೂಡ ವಿರೋಧಿಸಲು ಬಯಸಿದೆ.


2021 ಸೆಪ್ಟಂಬರ್ 20ರಂದು ತಮಿಳುನಾಡು ಸರಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎ.ಕೆ. ರಾಜನ್ ನೇತೃತ್ವದ ಒಂಭತ್ತು ಸದಸ್ಯರ ಸಮಿತಿಯ 165 ಪುಟಗಳ ವರದಿಯನ್ನು ಬಿಡುಗಡೆಗೊಳಿಸಿತು. ಇದರ ಆಧಾರದಲ್ಲಿ ಅದು ನೀಟ್ ಮುಂತಾದ ಪ್ರವೇಶ ಪರೀಕ್ಷೆಗಳನ್ನು ವಿರೋಧಿಸಿದೆ.
ಇದಕ್ಕೂ ಮುನ್ನ ಸೆಪ್ಟಂಬರ್ 13ರಂದು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಮ್ (ಡಿಎಮ್‌ಕೆ), ನೀಟ್ ರದ್ದುಗೊಳಿಸುವುದಕ್ಕಾಗಿ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿತ್ತು. ಈ ಮಸೂದೆಯ ವ್ಯಾಪ್ತಿಗೆ ಸರಕಾರಿ ಮತ್ತು ಖಾಸಗಿ- ಎರಡೂ ವೈದ್ಯಕೀಯ ಕಾಲೇಜುಗಳು ಬರುತ್ತವೆ.
ಈ ವಿಷಯದಲ್ಲಿ ಪ್ರತಿಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್ (ಎಐಎಡಿಎಮ್‌ಕೆ) ಕೂಡ ಸರಕಾರದ ನಿಲುವನ್ನು ಬೆಂಬಲಿಸಿದೆ. ಬಿಜೆಪಿಯನ್ನು ಹೊರತುಪಡಿಸಿ ಇತರ ಎಲ್ಲ ಪಕ್ಷಗಳು ರಾಜ್ಯ ಸರಕಾರದ ಜೊತೆಗಿವೆ. ಇನ್ನು ಈ ಮಸೂದೆಯು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಾಯಬೇಕಾಗಿದೆ.

ರಾಜನ್ ಸಮಿತಿಯ ವಾದಗಳು
ರಾಜನ್ ಸಮಿತಿಯ ವರದಿಯು, ಸಮಾಜದ ಹೆಚ್ಚಿನ ಭಾಗವನ್ನು ಒಳಗೊಳಿಸುವುದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಗೊಳಿಸುವ ಪರವಾಗಿ ಇರುವ ವಾದಗಳನ್ನೇ ಮುಂದುವರಿಸುತ್ತದೆ. ಸ್ನಾತಕ ಪದವಿ ವೈದ್ಯಕೀಯ ಸೀಟುಗಳಿಗೆ ನೀಟ್ ಪರೀಕ್ಷೆ ನಡೆದರೆ ತಮಿಳುನಾಡು ಸ್ವಾತಂತ್ರಪೂರ್ವದ ದಿನಗಳಿಗೆ ಮರಳುತ್ತದೆ ಎಂದು ವರದಿ ಹೇಳುತ್ತದೆ. ‘‘ಸ್ವಾತಂತ್ರಪೂರ್ವ ದಿನಗಳಲ್ಲಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಬರಿಗಾಲಿನ ವೈದ್ಯರು ರೋಗಿಗಳನ್ನು ನೋಡುತ್ತಿದ್ದರು’’ ಎಂದು ವರದಿ ಹೇಳಿದೆ. ವೈದ್ಯಕೀಯ ಮತ್ತು ಆರೋಗ್ಯ ಸೇವೆ ಕ್ಷೇತ್ರಗಳಲ್ಲಿ ರಾಜ್ಯಗಳ ಪೈಕಿ ತಮಿಳುನಾಡಿನ ಸ್ಥಾನ ಕುಸಿಯುತ್ತದೆ ಎಂಬುದಾಗಿಯೂ ವರದಿ ಬೆಟ್ಟು ಮಾಡಿದೆ. ಈಗಿನ ನೀಟ್ ಪರೀಕ್ಷೆಯು ತಮಿಳು ಮಾಧ್ಯಮದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಮಾಡುತ್ತದೆ ಹಾಗೂ ಎಲ್ಲ ರೀತಿಯ ಆರ್ಥಿಕ ಹಿನ್ನೆಲೆಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸುವುದಿಲ್ಲ ಎಂಬುದಾಗಿಯೂ ಅದು ಅಭಿಪ್ರಾಯಪಟ್ಟಿದೆ. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಯನ್ನು ಏಕೈಕ ಮಾನದಂಡವಾಗಿಸಿರುವುದು ತಮಿಳುನಾಡು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಟಿಎನ್‌ಬಿಎಸ್‌ಇ) ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರು ಐತಿಹಾಸಿಕವಾಗಿ ಪಡೆಯುತ್ತಿದ್ದ ಸೀಟುಗಳ ಪ್ರಮಾಣವು ಕಡಿಮೆಯಾಗಿದೆ. ಅದೇ ವೇಳೆ, ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ನೀಟ್ ಪರೀಕ್ಷೆಯನ್ನು ರೂಪಿಸಲಾಗಿದೆ ಎಂಬುದಾಗಿ ವರದಿ ಬೆಟ್ಟು ಮಾಡಿದೆ.

ಎಲ್ಲ ಹಂತಗಳಲ್ಲಿನ ಪ್ರವೇಶ ಪರೀಕ್ಷೆಯನ್ನು ಯಾಕೆ ರದ್ದುಗೊಳಿಸಬಾರದು?


ವೈದ್ಯಕೀಯ ಶಿಕ್ಷಣದ ಸೀಟುಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾತ್ರ ರದ್ದುಗೊಳಿಸಬೇಕಾಗಿರುವುದಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಇಡೀ ವ್ಯವಸ್ಥೆಯೇ ತಪ್ಪಾಗಿದೆ ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಪಡಿಸಬೇಕಾಗಿದೆ. ಆಯ್ಕೆ ಮಾಡುವ ಬದಲು, ಪರಿಶೋಧನೆಗೆ ಹೆಚ್ಚಿನ ಗಮನ ನೀಡುವ ವ್ಯವಸ್ಥೆಯು ಶೋಷಿತ ವರ್ಗಗಳ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ತಡೆಗಳನ್ನು ನಿರ್ಮಿಸುತ್ತದೆ. ಅದೂ ಅಲ್ಲದೆ, ವಿದ್ಯಾರ್ಥಿಗಳನ್ನು ಪ್ರತಿಭೆಯ ಆಧಾರದಲ್ಲಿ ಆಯ್ಕೆ ಮಾಡುವ ನೀಟ್‌ನ ಉದ್ದೇಶವೇ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಉದಾಹರಣೆಯಾಗಿ, ಐಐಟಿ ಪ್ರವೇಶ ಪರೀಕ್ಷೆಯನ್ನು ಗಮನಿಸೋಣ. ಐಐಟಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)


ವರ್ಷಗಳ ಅವಧಿಯಲ್ಲಿ ಇದು ರೂಪುಗೊಂಡಿದೆ. ಇಂದು ಅದನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ- ಪ್ರಧಾನ ಹಂತ (ಮೇನ್) ಮತ್ತು ಮುಂದುವರಿದ ಹಂತ (ಅಡ್ವಾನ್ಸ್‌ಡ್). ಪ್ರಧಾನ ಪರೀಕ್ಷೆಯು ಸೋಸುವ (ಫಿಲ್ಟರ್) ಕೆಲಸವನ್ನು ಮಾಡುತ್ತದೆ. 2017ರಲ್ಲಿ ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆಯ ಉತ್ತೀರ್ಣ ದರ ಸುಮಾರು 0.92 ಶೇಕಡ ಆಗಿತ್ತು. ಅಂದರೆ, ಜೆಇಇ ಮೇನ್‌ಗೆ ಅರ್ಜಿ ಹಾಕಿದ 12 ಲಕ್ಷ ಅಭ್ಯರ್ಥಿಗಳ ಪೈಕಿ ಸುಮಾರು 11,000 ಅಭ್ಯರ್ಥಿಗಳು ಉತ್ತೀರ್ಣರಾದರು. ಅಂದರೆ, ಸುಮಾರು 11,89,000 ವಿದ್ಯಾರ್ಥಿಗಳು ವೈಫಲ್ಯ ಅನುಭವಿಸಿದರು. ಇದು ಅನಗತ್ಯ ಹಾಗೂ ಅನಪೇಕ್ಷಿತ ವೇದನೆ. ಇದರ ಆಧಾರದಲ್ಲೇ ಈ ಪರೀಕ್ಷೆಗಳನ್ನು ರದ್ದುಪಡಿಸಬೇಕು ಹಾಗೂ ಅಭ್ಯರ್ಥಿಗಳನ್ನು ಆರಿಸುವ ಮತ್ತು ತಿರಸ್ಕರಿಸುವ ಉತ್ತಮ ವ್ಯವಸ್ಥೆಯನ್ನು ಅವುಗಳ ಸ್ಥಾನದಲ್ಲಿ ಜಾರಿಗೆ ತರಬೇಕು.
ಇಲ್ಲಿನ ಆರ್ಥಿಕ ಹೊರೆಯನ್ನೂ ಗಮನಿಸಬೇಕು. 90 ಶೇಕಡಕ್ಕೂ ಅಧಿಕ ಅಭ್ಯರ್ಥಿಗಳು ಕೋಚಿಂಗ್ ತರಗತಿಗಳಿಗೆ ಹೋಗುತ್ತಾರೆ. ಪ್ರತಿಯೊಬ್ಬ ಅಭ್ಯರ್ಥಿ ತನ್ನ ಕೋಚಿಂಗ್‌ಗಾಗಿ ಎರಡು ಲಕ್ಷ ರೂಪಾಯಿವರೆಗೂ ಖರ್ಚು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಅವರು ಈ ಪರೀಕ್ಷೆಗಾಗಿ 2ರಿಂದ 4 ವರ್ಷಗಳವರೆಗೆ ಸಿದ್ಧತೆ ನಡೆಸುತ್ತಾರೆ! ಕೋಚಿಂಗ್ ಉದ್ದಿಮೆಯ ವಹಿವಾಟು ವರ್ಷಕ್ಕೆ 20,000 ಕೋಟಿ ರೂಪಾಯಿಯನ್ನೂ ದಾಟುತ್ತದೆ.
ಕೋಚಿಂಗ್ ಕಾರ್ಯಕ್ರಮಗಳು ಪ್ರಮುಖ ಕಾರ್ಪೊರೇಶನ್‌ಗಳಾಗಿ ಬೆಳೆದಿವೆ ಹಾಗೂ ಭಾರತೀಯ ಶೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿವೆ. ಈ ಕಾರ್ಪೊರೇಶನ್‌ಗಳಲ್ಲಿ ಖಾಸಗಿ ಕಂಪೆನಿಗಳು ಕೋಟಿಗಟ್ಟಳೆ ಹಣವನ್ನು ಹೂಡಿಕೆ ಮಾಡುತ್ತಿವೆ. ಈ ಕೋಚಿಂಗ್ ಸಂಸ್ಥೆಗಳ ಅತಿ-ಒತ್ತಡದ ಪರಿಸರಗಳಿಂದಾಗಿ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕೋಚಿಂಗ್ ಸಂಸ್ಥೆಗಳಲ್ಲಿ ಅತ್ಯಂತ ಅರ್ಹ ಶಿಕ್ಷಕರಿದ್ದಾರೆ. ಅಲ್ಲದಿದ್ದರೆ, ಅವರು ಈ ನಿರುಪಯುಕ್ತ ಉದ್ದಿಮೆಯಲ್ಲಿರುವ ಬದಲು ಮುಖ್ಯವಾಹಿನಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು.

ವಿಷಯದ ಗಹನತೆ
ಐಐಟಿಗಳಲ್ಲದೆ, ನೀಟ್, ಐಐಎಮ್‌ಗಳು, ಸಿಎ, ಲಾಸೆಟ್ ಮುಂತಾದ ಪರೀಕ್ಷೆಗಳೂ ಇವೆ. ಎಲ್ಲ ಪ್ರಮುಖ ರಾಜ್ಯಗಳು ತಮ್ಮದೇ ಆಗಿರುವ ಸಿಇಟಿಗಳನ್ನು ಹೊಂದಿವೆ. ಈ ಅರ್ಹತಾ ಪರೀಕ್ಷೆಗಳನ್ನು ಎದುರಿಸಲು ಬಯಸುವ ಆಕಾಂಕ್ಷಿಗಳ ಒಟ್ಟು ಸಂಖ್ಯೆ ಒಂದು ಕೋಟಿಯನ್ನು ಮೀರಿದರೂ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಈ ಆಕಾಂಕ್ಷಿಗಳ ಪೈಕಿ ಹೆಚ್ಚಿನವರು 17-25ರ ವಯೋಗುಂಪಿನವರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಗಮನಾರ್ಹ ಸಂಖ್ಯೆಯ ಯುವಕರು ತಮ್ಮ ಅತ್ಯಂತ ಉತ್ಪಾದಕತೆಯ ಹಂತದಲ್ಲಿ, ಇಂತಹ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಪ್ರಯತ್ನಿಸುತ್ತಾ ತಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ಅದೂ ಅಲ್ಲದೆ, ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರೂ ಅರ್ಥಪೂರ್ಣ ಜ್ಞಾನವನ್ನೇನೂ ಪಡೆದುಕೊಳ್ಳುವುದಿಲ್ಲ ಎನ್ನುವುದನ್ನೂ ಗಮನಿಸಬೇಕಾಗಿದೆ.

ಈ ಪರೀಕ್ಷೆಗಳು ನಿಜವಾಗಿಯೂ ಪ್ರತಿಭೆಯನ್ನು ಅಳೆಯುತ್ತವೆಯೇ?
ಇಂದಿನ ಹೆಚ್ಚಿನ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳು ‘ಆಬ್ಜೆಕ್ಟಿವ್’ ಮಾದರಿಯದ್ದಾಗಿರುತ್ತವೆ. ಉತ್ತರಕ್ಕೆ ಹಲವು ಆಯ್ಕೆಗಳನ್ನು ನೀಡಲಾಗುತ್ತದೆ ಹಾಗೂ ಸರಿಯಾದ ಉತ್ತರವನ್ನು ಗುರುತಿಸಬೇಕಾಗುತ್ತದೆ. ಈ ವಿಧಾನದ ಹಿಂದಿನ ತರ್ಕ ಏನು? ಅಮೆರಿಕದಲ್ಲಿ ಮೊದಲಿಗೆ ಈ ಮಾದರಿಯನ್ನು ಹುಟ್ಟು ಹಾಕಿದ್ದು ಬಿ.ಎಫ್. ಸ್ಕಿನ್ನರ್ ಎಂಬವರು. 50ರ ದಶಕದಲ್ಲಿ ಸ್ಕಿನ್ನರ್ ಅವರೊಂದಿಗಿನ ಚರ್ಚೆಯ ವೇಳೆ ನೋಮ್ ಚೋಮ್‌ಸ್ಕಿ ಈ ಸಿದ್ಧಾಂತವನ್ನು ಬುಡಮೇಲು ಮಾಡಿದ್ದಾರೆ. ಈ ಚರ್ಚೆ ಬಳಿಕ ಭಾರೀ ಪ್ರಸಿದ್ಧವಾಯಿತು. ಈ ವಿಧಾನವು ಮೆದುಳಿನ ‘ಸ್ಟಿಮ್ಯುಲಸ್-ರೆಸ್ಪಾನ್ಸ್’ (ಎಸ್‌ಆರ್) ಮಾದರಿ ಆಧಾರಿತ ಎಂಬುದಾಗಿ ಚೋಮ್‌ಸ್ಕಿ ವಾದಿಸಿದರು. ಈ ಮಾದರಿಯನ್ನು ಇಲಿಗಳ ಮೇಲಿನ ಅಧ್ಯಯನದಿಂದ ರೂಪಿಸಲಾಗಿದೆ. ಇಲಿಗಳನ್ನು ಗೊಂದಲಪೂರಿತ ಸ್ಥಳವೊಂದರಲ್ಲಿ ಬಿಡಲಾಗುತ್ತದೆ ಹಾಗೂ ಒಂದು ಸ್ಥಳದಲ್ಲಿ ಚೀಸ್‌ನ ತುಂಡೊಂದನ್ನು ಇಡಲಾಗುತ್ತದೆ. ಆ ಇಲಿಗಳು ಚೀಸ್ ಇರುವ ಸ್ಥಳವನ್ನು ತಲುಪಬೇಕು. ಪರಿಸರದಲ್ಲಿರುವ ಇಲಿಗಳು ಪ್ರಯೋಗಾಲಯಗಳಲ್ಲಿರುವ ಇಲಿಗಳಿಗಿಂತ ತುಂಬಾ ಹೆಚ್ಚು ಜಾಣವಾಗಿರುತ್ತವೆ ಹಾಗೂ ಮಾನವ ಮೆದುಳು ಈ ಇಲಿಗಳ ಮೆದುಳುಗಳಿಗಿಂತ ತುಂಬಾ ಹೆಚ್ಚು ಸಂಕೀರ್ಣವಾಗಿರುತ್ತವೆ ಮತ್ತು ಬುದ್ಧಿಮತ್ತೆ ಹೊಂದಿವೆ ಎಂದು ಚೋಮ್‌ಸ್ಕಿ ವಾದಿಸಿದರು. ಈ ಎಸ್‌ಆರ್ ಮಾದರಿಗಳು ಬಂಡವಾಳಶಾಹಿಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಅಗತ್ಯಗಳಾಗಿವೆ ಎಂಬುದಾಗಿಯೂ ಅವರು ಪ್ರತಿಪಾದಿಸಿದರು. ಈ ಕಾರ್ಮಿಕರು ಬಾಹ್ಯ ಸಂಕೇತಗಳಿಗೆ ಯಾಂತ್ರಿಕವಾಗಿ ಸ್ಪಂದಿಸುವುದು ಅಗತ್ಯವಾಗಿದೆ. ಉದಾಹರಣೆಗೆ; ಚಲಿಸುವ ಕನ್ವೇಯರ್ ಬೆಲ್ಟ್‌ನಲ್ಲಿರುವ ಪ್ರತಿಯೊಂದು ವಸ್ತುವಿನ ಸ್ಕ್ರೂವನ್ನು ಬಿಗಿಗೊಳಿಸುವ ಸಮಯದಲ್ಲಿ ಅನ್ಯಮನಸ್ಕರಾಗುವ ಕಾರ್ಮಿಕರನ್ನು ಈ ಮೂಲಕ ಎಚ್ಚರಿಸಲಾಗುತ್ತದೆ. ಹಾಗಾಗಿ, ಈ ವ್ಯವಸ್ಥೆಯು ಗುಲಾಮರಿಗೆ ಬೇಕಾದ ಅಗತ್ಯವಾಗಿದೆ. ಉತ್ತಮ, ಹೆಚ್ಚು ವಿಧೇಯ ಮತ್ತು ವೇಗವಾಗಿ ಸ್ಪಂದಿಸುವ ಗುಲಾಮರನ್ನು ಆರಿಸಲು ಈ ಪರೀಕ್ಷೆಗಳನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಈ ವಿಷಯದಲ್ಲಿ ಬದುಕಿನ ಯಾವುದೇ ಕ್ಷೇತ್ರದಲ್ಲಿ ನಾವು ಬೇಕೆಂದು ಹೇಳುವ ಪ್ರತಿಭೆಯ ನೆಲೆ ಇದುವೇ?
ಅದೇನಿದ್ದರೂ, ‘ಆಳುವ ವರ್ಗ’ದ ಮಕ್ಕಳು ಬೇರೆಯದೇ ಆದ ಶಿಕ್ಷಣ ಪಡೆಯುತ್ತಾರೆ. ಔಪಚಾರಿಕ ಶಿಕ್ಷಣವೆನ್ನುವುದು ಅವರ ಸಂಪೂರ್ಣ ಶಿಕ್ಷಣದ ಒಂದು ಭಾಗ ಮಾತ್ರ. ಸಾಮಾನ್ಯವಾಗಿ ಅವರು ಭಾಷೆಗಳು, ತತ್ವಜ್ಞಾನ, ಗಣಿತ, ಕ್ಲಾಸಿಕ್ಸ್ ಮುಂತಾದುವುಗಳನ್ನು ಅವರು ಕಲಿಯುತ್ತಾರೆ. ಅವರು ಕೋಲ್ಕತಾದ ಪ್ರೆಸಿಡೆನ್ಸಿ ಅಥವಾ ದಿಲ್ಲಿಯ ಸೈಂಟ್ ಸ್ಟೀಫನ್ಸ್ ಕಾಲೇಜು ಹಾಗೂ ಬಳಿಕ ಆಕ್ಸ್ ಫರ್ಡ್/ಕೇಂಬ್ರಿಜ್/ಅಥವಾ ಅಮೆರಿಕದಲ್ಲಿರುವ ಐವಿ ಲೀಗ್ ವಿಶ್ವವಿದ್ಯಾನಿಲಯಗಳಿಗೆ ಹೋಗುತ್ತಾರೆ. ಪ್ರವಾಸ, ಮ್ಯೂಸಿಯಮ್‌ಗಳಿಗೆ ಭೇಟಿ ನೀಡುವುದು, ಮಹತ್ವದ ಕಲಾವಿದರು ಮತ್ತು ವಿಜ್ಞಾನಿಗಳನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭೇಟಿಯಾಗುವುದು ಕೂಡ ಅವರ ಶಿಕ್ಷಣದ ಭಾಗವಾಗಿದೆ. ಕ್ರೀಡೆ, ವ್ಯಾಯಾಮ, ಈಜು ಕೂಡ ಅವರ ದೈನಂದಿನ ಜೀವನದ ಭಾಗವಾಗಿದೆ. ಈ ಎಲ್ಲವುಗಳಿಗೆ ಅವರ ಬಳಿ ಹಣ ಮತ್ತು ಸಮಯವಿದೆ.

ಇದಕ್ಕೇನಾದರೂ ಪರ್ಯಾಯವಿದೆಯೇ?
ಇಂತಹ ಬೆಚ್ಚಿಬೀಳಿಸುವ ವ್ಯರ್ಥ, ಅನ್ಯಾಯದ ಹಾಗೂ ಅವೈಜ್ಞಾನಿಕ ವ್ಯವಸ್ಥೆಗೆ ಪರ್ಯಾಯವೊಂದನ್ನು ಕಂಡುಹಿಡಿಯುವ ಅಗತ್ಯ ಖಂಡಿವಾಗಿಯೂ ಇದೆ. ನ್ಯಾಯಮೂರ್ತಿ ರಾಜನ್ ಸಮಿತಿಯು ಅತ್ಯುತ್ತಮ ಪರ್ಯಾಯವೊಂದನ್ನು ಶಿಫಾರಸು ಮಾಡಿದೆ ಹಾಗೂ ತಮಿಳುನಾಡು ಸರಕಾರವು ಈ ವಿಷಯದಲ್ಲಿ ಮುಂದುವರಿದಿದೆ. ಆದರೆ ಇದು ಭಾರತದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಆಗುವುದಿಲ್ಲ ಎಂಬ ವಾದವನ್ನು ಕೆಲವರು ಮುಂದಿಡಬಹುದು. ರಾಜ್ಯಗಳ ಪರೀಕ್ಷಾ ಮಂಡಳಿಗಳು ಪ್ರಮಾಣೀಕೃತವಾಗಿಲ್ಲದೆ ಇರುವುದರಿಂದ ಅವುಗಳು ನೀಡುವ ರ್ಯಾಂಕ್‌ಗಳನ್ನು ಇತರ ಪರೀಕ್ಷಾ ಮಂಡಳಿಗಳ ರ್ಯಾಂಕ್‌ಗಳ ಜೊತೆ ಹೋಲಿಸಲಾಗದು ಹಾಗೂ ಅವುಗಳ ರ್ಯಾಂಕಿಂಗ್‌ಗಳ ಆಧಾರದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ನೀಡಿದರೆ ಸಮಸ್ಯೆ ತಲೆದೋರಬಹುದು ಎಂಬುದಾಗಿ ಅವರು ವಾದಿಸಬಹುದು.
 ಆದರೆ ಈ ಸಮಸ್ಯೆಯು ಗೊತ್ತಿರುವಂಥದ್ದೇ ಆಗಿದೆ. ಇದನ್ನು ನಿಭಾಯಿಸಲು ಆರಂಭದಲ್ಲಿ ಬಿಐಟಿಎಸ್ ಪಿಲಾನಿ ಎಂಬ ಸಂಸ್ಥೆಯು ತೃಪ್ತಿಕರ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿತು. ಅದನ್ನು ಸರಳವಾಗಿ ಇಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ರಾಜ್ಯದ ಪರೀಕ್ಷಾ ಮಂಡಳಿಯಲ್ಲಿ ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಯು ಪಿಸಿಎಮ್ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ವಿಷಯಗಳಲ್ಲಿ ಶೇ. 100 ಅಂಕಗಳನ್ನು ಗಳಿಸುತ್ತಾರೆ ಎಂಬುದಾಗಿ ಭಾವಿಸೋಣ. ‘ಎ’ ರಾಜ್ಯದ ಅಗ್ರಸ್ಥಾನಿ ಶೇ. 97 ಅಂಕಗಳನ್ನು ಪಡೆದರೆ, ಆ ರಾಜ್ಯದ ಎಲ್ಲ ಅಭ್ಯರ್ಥಿಗಳಿಗೆ ಶೇ. 3 ಅಂಕಗಳನ್ನು ಸೇರಿಸಬೇಕು. ‘ಬಿ’ ರಾಜ್ಯದ ಅಗ್ರಸ್ಥಾನಿ ಶೇ. 89 ಅಂಕಗಳನ್ನು ಪಡೆದರೆ, ಆ ರಾಜ್ಯದ ಎಲ್ಲ ಅಭ್ಯರ್ಥಿಗಳಿಗೆ ಶೇ. 11 ಅಂಕಗಳನ್ನು ಸೇರಿಸಬೇಕು. ಈ ಮೂಲಕ ಅಂಕಗಳಲ್ಲಿ ಸಮಾನತೆಯನ್ನು ಮಾಡಲು ಸಾಧ್ಯವಾಗುತ್ತದೆ. ಲಭ್ಯವಿರುವ ಸೀಟುಗಳ ಸಂಖ್ಯೆ ಕೆಲವೇ ನೂರುಗಳಾಗಿರುವುದರಿಂದ ಹಾಗೂ ಈ ವ್ಯವಸ್ಥೆಯ ಬಗ್ಗೆ ಎಲ್ಲರಿಗೂ ಗೊತ್ತಿರುವುದರಿಂದ, ಈ ಸೀಟುಗಳಿಗಾಗಿ ಅರ್ಜಿ ಹಾಕುವ ಅಭ್ಯರ್ಥಿಗಳ ಸಂಖ್ಯೆಯೂ ಕೆಲವೇ ಸಾವಿರದಷ್ಟಿರುತ್ತದೆ. ಹಾಗಾಗಿ, ಈ ಇಡೀ ಪ್ರವೇಶ ಪ್ರಕ್ರಿಯೆಗೆ ಕೆಲವೇ ದಿನಗಳು ತಗಲುತ್ತವೆ ಹಾಗೂ ಇದಕ್ಕಾಗಿ ವಿದ್ಯಾರ್ಥಿಗಳಿಗೆ ಎರಡು ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚು ಬೀಳುವುದಿಲ್ಲ. ಅವರು ಅನವಶ್ಯಕವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ದುರದೃಷ್ಟವಶಾತ್, ಇಂದು ಈ ಸಂಸ್ಥೆಯೂ (ಬಿಟ್ಸ್, ಪಿಲಾನಿ) ಪ್ರವೇಶ ಪರೀಕ್ಷೆ ವ್ಯವಸ್ಥೆಗೆ ಬಲಿಯಾಗಿದೆ.
ಆದರೆ, ನ್ಯಾಯಮೂರ್ತಿ ರಾಜನ್ ಸಮಿತಿಯಂತಹ ಇನ್ನೊಂದು ಸಮಿತಿಯು ಈ ವಿಷಯವನ್ನು ಎಲ್ಲ ಕೋನಗಳಿಂದಲೂ ಪರೀಕ್ಷಿಸಿ ತಾರ್ಕಿಕ ಪರಿಹಾರವೊಂದಕ್ಕೆ ಬರಬಹುದಾಗಿದೆ.

ಇದಕ್ಕೆ ಏನು ಕಾರಣ?
ಆದರೆ, ಮೊದಲಿಗೆ ಈ ವ್ಯವಸ್ಥೆಯು ಯಾಕೆ ಬಂತು ಹಾಗೂ ಅದು ಯಾಕೆ ಈಗಲೂ ಮುಂದುವರಿಯುತ್ತಿದೆ? ಇದಕ್ಕೆ ಸೈದ್ಧಾಂತಿಕ, ರಾಜಕೀಯ ಮತ್ತು ಭೌತಿಕ ಕಾರಣಗಳಿವೆ. ಸಾಕಷ್ಟು ಪ್ರಯತ್ನಪಟ್ಟರೆ ಪ್ರತಿಯೊಬ್ಬರೂ ಯಶಸ್ಸು ಕಾಣಬಹುದು ಎನ್ನುವ ಬಂಡವಾಳಶಾಹಿ ಸಿದ್ಧಾಂತ ಇದಕ್ಕೆ ಒಂದು ಕಾರಣ. ಆದರೆ, ಸೀಟುಗಳು, ಅವಕಾಶಗಳು ಮತ್ತು ಕೆಲಸಗಳ ಸಂಖ್ಯೆ ಸೀಮಿತವಾಗಿದೆ ಹಾಗೂ ಇದು ಹೆಚ್ಚಿನವರು ವಿಫಲರಾಗಿ ಕೆಲವರು ಮಾತ್ರ ಯಶಸ್ವಿಯಾಗುವ ವ್ಯವಸ್ಥೆ ಎನ್ನುವುದನ್ನು ಜಾಣತನದಿಂದ ಮರೆತುಬಿಡಲಾಗುತ್ತದೆ. ರಾಜಕೀಯವಾಗಿ ಇದು ಆಳುವ ವರ್ಗಕ್ಕೆ ಪೂರಕವಾಗಿದೆ. ಈ ವ್ಯವಸ್ಥೆಯ ಮೂಲಕ ಅವರು ಜನರಲ್ಲಿ ಭರವಸೆಯನ್ನು ಜೀವಂತವಾಗಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಪ್ರವೇಶಕ್ಕಾಗಿ ಕೆಲವು ಲಕ್ಷಗಳನ್ನು ಖರ್ಚು ಮಾಡುವ ಸಾಮರ್ಥ್ಯವಿರುವವರು ಮಾತ್ರ ಯಶಸ್ಸಿನ ಯಾವುದೇ ಭರವಸೆಯನ್ನು ಇಟ್ಟುಕೊಳ್ಳಬಹುದಾದ ವ್ಯವಸ್ಥೆ ಇದಾಗಿದೆ. ಅಂತಿಮವಾಗಿ ಇದೊಂದು ದೊಡ್ಡ ದಂಧೆಯಾಗಿದೆ. ಇಲ್ಲಿ ಐಐಟಿಗಳು, ಕೋಚಿಂಗ್ ತರಗತಿಗಳು ಮತ್ತು ಪುಸ್ತಕ ಪ್ರಕಾಶನ ಉದ್ದಿಮೆ ಹಣ ಮಾಡುತ್ತವೆ.

ಹಾಗಾದರೆ, ಏನು ಮಾಡಬಹುದು?
ತಮಿಳುನಾಡು ದಾರಿಯೊಂದನ್ನು ತೋರಿಸಿಕೊಟ್ಟಿದೆ. ಇತರ ರಾಜ್ಯಗಳ ಸರಕಾರಗಳೂ ತಮಿಳುನಾಡಿನಂತೆ ಮುತುವರ್ಜಿ ವಹಿಸಿ ರಾಜ್ಯವಾರು ಪರಿಸ್ಥಿತಿಯನ್ನು ಸುಧಾರಿಸಬಹುದು. ಸದ್ಯಕ್ಕೆ, ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳು ಮಾತ್ರ ಇಂತಹ ಉಪಕ್ರಮವೊಂದನ್ನು ತೆಗೆದುಕೊಳ್ಳಬಹುದಾಗಿದೆ. ಭವಿಷ್ಯದಲ್ಲಿ ಎಂದಾದರೂ, ಇಡೀ ದೇಶವನ್ನು ಗಮನದಲ್ಲಿರಿಸಿಕೊಂಡ ಇನ್ನಷ್ಟು ಜನಪರ ಪರ್ಯಾಯ ವ್ಯವಸ್ಥೆಗಳು ಬಂದಾಗ, ಈಗಿನ ಅನ್ಯಾಯದ ವ್ಯವಸ್ಥೆ ಹೋಗುತ್ತದೆ. ಆದರೆ, ನಾವು ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ಇತರ ಹಲವು ಸಂಗತಿಗಳೂ ಸಂಭವಿಸಬಹುದು ಹಾಗೂ ಇತರ ಪರಿಹಾರಗಳೂ ಹೊರಹೊಮ್ಮಬಹುದು.


ಕೃಪೆ: countercurrents.org

Writer - ಟಿ. ವಿಜಯೇಂದ್ರ

contributor

Editor - ಟಿ. ವಿಜಯೇಂದ್ರ

contributor

Similar News