ರೈತರನ್ನು ಕಾರು ಹರಿಸಿ ಕೊಂದ ಪ್ರಕರಣದಲ್ಲಿ ಕೇಂದ್ರಸಚಿವರ ಪುತ್ರನಿಗೆ ಜಾಮೀನು: ʼದುರದೃಷ್ಟಕರʼ ಎಂದ ರೈತ ಸಂಘಟನೆಗಳು
ಅಲಹಾಬಾದ್: ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಫೆಬ್ರವರಿ 10, ಗುರುವಾರ ಜಾಮೀನು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಘಟನೆಯಲ್ಲಿ ಮೃತ ಪತ್ರಕರ್ತ ರಮಣ್ ಕಷ್ಯಪ್ ಅವರ ಸೋದರ ಪವನ್ ಕಷ್ಯಪ್, "ನಾವು ಹೋರಾಟ ಮುಂದುವರಿಸುತ್ತೇವೆ. ಅವರಿಗೆ ಜಾಮೀನು ದೊರಕಿದೆ ಎಂಬ ಮಾತ್ರಕ್ಕೆ ಪ್ರಕರಣ ಅಂತ್ಯವಾಗಿದೆ ಹಾಗೂ ಅವರು ಸ್ವತಂತ್ರರಾಗಿದ್ದಾರೆ ಎಂದು ಅರ್ಥವಲ್ಲ,'' ಎಂದಿದ್ದಾರೆ ಎಂದು thequint.com ವರದಿ ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ನೀಡಿರುವುದು ದುರಾದೃಷ್ಟಕರ ಮತ್ತು ಅಚ್ಚರಿ ಮೂಡಿಸಿದೆ ರೈತ ಸಂಘಟನೆ ಹೇಳಿದೆ.
ಹೈಕೋರ್ಟ್ ತಮ್ಮ ಅಪೀಲನ್ನು ಸರಿಯಾಗಿ ಆಲಿಸಿಲ್ಲ, ಎರಡೂ ಕಡೆಗಳ ವಕೀಲರ ನಡುವೆ ಕಾವೇರಿದ ವಾದ ಮಂಡನೆ ನಂತರ ವರ್ಚುವಲ್ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿ ತಮ್ಮ ಅರ್ಜಿಯ ಮೇಲಿನ ಮರುವಿಚಾರಣೆಯನ್ನು ರದ್ದುಪಡಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
"ಸರಕಾರ ಮತ್ತು ಅಧಿಕಾರಸ್ಥರಿಂದ ನ್ಯಾಯಾಲಯದ ಮೇಲೆ ಒತ್ತಡವಿತ್ತು. ಸರಕಾರ ಕಾನೂನಿನ ಪ್ರಯೋಜನ ಪಡೆದಿದೆ. ಅದರ ಪರಿಣಾಮವನ್ನು ಅವರು ಎದುರಿಸಲಿದ್ದಾರೆ,'' ಎಂದು ಅವರು ಹೇಳಿದರು.
"ಚುನಾವಣೆ ನಂತರ ಸರಕಾರ ಬದಲಾದರೆ ಪ್ರಕರಣವನ್ನು ತಿರುಚಲು ಸಾಧ್ಯವಿಲ್ಲ ಎಂದು ಅರಿತು ಚುನಾವಣೆಗಿಂತ ಮೊದಲೇ ಆತನಿಗೆ ಜಾಮೀನು ನೀಡಲಾಗಿದೆ,'' ಎಂದು ಅವರು ಹೇಳಿದರು.
ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾ ಪ್ರತಿಕ್ರಿಯಿಸಿ, ಕೋರ್ಟಿನ ತೀರ್ಮಾನ ನ್ಯಾಯಪರವಲ್ಲ. ಈ ರೀತಿ ಅಧಿಕಾರಸ್ಥರು ಪೊಲೀಸರ ಜತೆಗೂಡಿ ಜನರ ಮೇಲೆ ದೌರ್ಜನ್ಯವೆಸಗಿದಾಗ ನ್ಯಾಯ ದೊರಕಬಹುದೆಂಬ ವಿಶ್ವಾಸವನ್ನು ಇದು ಅಲುಗಾಡಿಸಿದೆ, ಎಂದು ಹೇಳಿದೆ.
ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ನೀಡಿರುವುದು ದುರಾದೃಷ್ಟಕರ ಮತ್ತು ಅಚ್ಚರಿ ಮೂಡಿಸಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
"ರಾಜಕೀಯ ಪ್ರಭಾವಿ ವ್ಯಕ್ತಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂಬುದನ್ನು ನ್ಯಾಯಾಲಯ ಪರಿಗಣಿಸದೇ ಇರುವುದು ನಿರಾಸೆ ಮೂಡಿಸಿದೆ,''ಎಂದು ಮೋರ್ಚಾ ಹೇಳಿದೆ ಎಂದು thequint.com ವರದಿ ಮಾಡಿದೆ.