"ಬಡತನವೆಂಬುವುದು ಮಾನಸಿಕ ಅವಸ್ಥೆ" ಎಂದು ಹೇಳಿದ್ದ ರಾಹುಲ್: ಕಾಂಗ್ರೆಸ್ ಪಕ್ಷವನ್ನು ಕುಟುಕಿದ ನಿರ್ಮಲಾ
ಹೊಸದಿಲ್ಲಿ,ಫೆ.11: ಕೇಂದ್ರ ಸರಕಾರದ ನೂತನ ಬಜೆಟ್‌ನಲ್ಲಿ ದೇಶದ ಬಡವರ್ಗಗಳನ್ನು ಕಡೆಗಣಿಸಲಾಗಿದೆಯೆಂಬ ಬಜೆಟ್ ವಿಮರ್ಶಕರ ಹಾಗೂ ಪ್ರತಿಪಕ್ಷ ನಾಯಕರ ಟೀಕೆಯನ್ನು ಎದುರಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಡತನವೆಂಬುದು ಮಾನಸಿಕ ಸ್ಥಿತಿಯಾಗಿದೆಯೆಂಬ ರಾಹುಲ್ ಗಾಂಧಿ 2013ರಲ್ಲಿ ಮಾಡಿದ ಭಾಷಣದ ಸಾಲುಗಳನ್ನು ಪ್ರತ್ಯಾಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ನಿರ್ಮಲಾ ಅವರು, ಕಾಂಗ್ರೆಸ್ ಸಂಸದರನ್ನು ಉದ್ದೇಶಿಸಿ ‘‘ನಿಮ್ಮ ಪಕ್ಷದ ಮಾಜಿ ಅಧ್ಯಕ್ಷರು ಬಡತನವೆಂಬುದು ಮಾನಸಿಕ ಅವಸ್ಥೆಯಾಗಿದೆಯೇ ಹೊರತು ಆಹಾರ, ಹಣ ಅಥವಾ ಭೌತಿಕ ವಸ್ತುಗಳ ಕೊರತೆಯೆಂದು ಅರ್ಥವಲ್ಲ. ಓರ್ವನಿಗೆ ಆತ್ಮವಿಶ್ವಾಸವಿದ್ದಲ್ಲಿ, ಆತ ಬಡತನವನ್ನು ಮೆಟ್ಟಿ ನಿಲ್ಲಬಲ್ಲ ಎಂದು ಹೇಳಿದ್ದರು. ಹೀಗೆ ಹೇಳಿದ ವ್ಯಕ್ತಿ ಯಾರೆಂಬುದನ್ನು ನಾನು ಹೆಸರಿಸುವುದಿಲ್ಲ. ಆದರೆ ಅವರು ಯಾರೆಂಬುದು ನಮಗೆಲ್ಲರಿಗೂ ತಿಳಿದಿದೆ’’ ಎಂ ಸೀತಾರಾಮನ್ ಕುಟುಕಿದರು.
‘‘ನನಗೆ ದಯವಿಟ್ಟು ಸ್ಪಷ್ಟಪಡಿಸಿ. ಮಾನಸಿಕ ಅವಸ್ಥೆಯ ಬಡತನದ ಬಗ್ಗೆ ನಾನು ಸ್ಪಂದಿಸಬೇಕೆಂದು ನೀವು ಬಯಸುತ್ತೀರಾ ಎಂದು ವಿತ್ತ ಸಚಿವರು ಪ್ರತಿಪಕ್ಷ ಸಂಸದರ ಗದ್ದಲದ ನಡುವೆ ಭಾಷಣ ಮುಂದುವರಿಸುತ್ತಾ ಹೇಳಿದರು.
2014ಕ್ಕಿಂತ ಮೊದಲು ಜಾಗತಿಕ ಹಣಕಾಸು ಬಿಕ್ಕಟ್ಟು ಉಂಟಾಗಿದ್ದ ಸಂದರ್ಭದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಶೇ.9.1 ಆಗಿದ್ದಲ್ಲಿ, ಕೋವಿಡ್19 ಸಾಂಕ್ರಾಮಿಕದ ಸಂದರ್ಭ ಅದು ಶೇ. 6.2 ಆಗಿದೆ. ಪ್ರತಿಪಕ್ಷಕ್ಕೆ ಈ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಗಿರಲಿಲ್ಲವೆಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಭಾರತ ಅಮೃತ ಕಾಲದಲ್ಲಿಲ್ಲ, ಬದಲಿಗೆ ಹಿಂದೂ ಪಂಚಾಂಗದಲ್ಲಿ ಅಶುಭ ಸಮಯವೆಂದು ಪರಿಗಣಿಸಲಾಗಿರುವ ರಾಹುಕಾಲದಲ್ಲಿದೆ ಎಂಬ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿಕೆಯ ವಿರುದ್ಧವೂ ನಿರ್ಮಲಾ ಕಿಡಿಕಾರಿದರು.
‘‘ನಾವು ಈಗ ಅಮೃತ ಕಾಲವೆಂದು ಬಣ್ಣಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಒಂದು ವೇಳೆ ನಮಗೆ 100 ವರ್ಷಗಳ ದೂರದೃಷ್ಟಿಯಿಲ್ಲದೆ ಇದ್ದಲ್ಲಿ ನಾವು ಯಾತನೆಗೊಳಗಾಗಲಿದ್ದೇವೆ. ಕಾಂಗ್ರೆಸ್ ಸರಕಾರದ 65 ವರ್ಷಗಳ ಆಡಳಿತದಲ್ಲಿ ಒಂದು ಕುಟುಂಬಕ್ಕೆ ಪ್ರಯೋಜನವಾಗಿರುವುದನ್ನು ಬಿಟ್ಟರೆ ಬೇರೆ ಯಾವುದೇ ದೂರದೃಷ್ಟಿಯಿರಲಿಲ್ಲ ಎಂದರು.
ಲಡ್ ಕಿ ಹೂಂ ಲಡ್ ಸಖ್ತಿ ಹೂಂ (ಉತ್ತರಪ್ರದೇಶ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ) ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿದೆಯಾದರೂ, ಆದರ ಆಡಳಿತವಿರುವ ರಾಜಸ್ಥಾನದಲ್ಲಿ ಹುಡುಗಿಯರಿಗೆ ಅವರ ಹಕ್ಕುಗಳಿಗಾಗಿ ಹೋರಾಡಲು ಸಾಧ್ಯವಾಗುತ್ತಿಲ್ಲ. ಇದುವೇ ರಾಹುಕಾಲವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಕಟಕಿಯಾಡಿದರು.
2013ರಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟ ಜನಪ್ರತಿನಿಧಿಗಳನ್ನು ಕುರಿತಾಗಿ 2013ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸಂಸತ್ನಲ್ಲಿ ಮಂಡಿಸಿದ್ದ ಸುಗ್ರೀವಾಜ್ಞೆಯ ಬಗ್ಗೆ ರಾಹುಲ್‌ಗಾಂಧಿಯವರ ಪ್ರತಿಕ್ರಿಯೆಯನ್ನು ನಿರ್ಮಲಾ ಪಸ್ತಾವಿಸಿದರು. ತನ್ನದೇ ಪಕ್ಷದ ಪ್ರಧಾನಿ ಮಂಡಿಸಿದ್ದ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆಯೇ ರಾಹುಲ್ ಅವರು ಹರಿದುಹಾಕಿದಾಗ ರಾಹುಕಾಲವಿತ್ತು ಎಂದು ಮಾರ್ಮಿಕವಾಗಿ ಹೇಳಿದರು.
ಆನಂತರ ಕಾಂಗ್ರೆಸ್ ನಿರ್ಮಲಾ ಸೀತಾರಾಮನ್ ಅವರ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸುತ್ತಾ ಕೇಂದ್ರ ಸರಕಾರವು ರಾಹುಲ್ಗಾಂಧಿ ಬಗ್ಗೆ ಭಯಭೀತಗೊಂಡಿದೆ ಎಂದು ಟೀಕಿಸಿದೆ.
‘‘ವಿತ್ತ ಸಚಿವೆಯವರು ಆಕ್ರೋಶದಿಂದ ರಾಹುಲ್ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಬಜೆಟ್ ಕುರಿತ ಚರ್ಚೆಯಲ್ಲಿ ಈ ವಿಷಯವನ್ನು ನಾವು ಪ್ರಸ್ತಾವಿಸಿದ್ದೇವೆ. ಯಾಕೆಂದರೆ ಈ ಆರ್ಥಿಕ ಬಿಕ್ಕಟ್ಟಿನಿಂದಾಗಿ 27 ಕೋಟ್ಯಂತರ ಜನರು ಬಡತನದ ರೇಖೆಗಿಂತ ಕೆಳಗೆ ಜಾರಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಶಕ್ತಿ ಸಿನ್ಹಾ ಗೋಹಿಲ್ ತಿಳಿಸಿದ್ದಾರೆ. ರೈತರು, ನಿರುದ್ಯೋಗ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕ ತಂದಿಟ್ಟ ಬಿಕ್ಕಟ್ಟು ಇತ್ಯಾದಿ ವಿಷಯಗಳ ಬಗ್ಗೆ ನಾವು ಹಲವಾರು ಪ್ರಶ್ನೆಗಳನ್ನು ಸದನದ ಮುಂದಿಟ್ಟಿದ್ದೆವು. ಆದರೆ ವಿತ್ತ ಸಚಿವೆ ನಮ್ಮ ಯಾವುದೇ ಪ್ರಶ್ನೆಗೂ ಉತ್ತರಿಸಲಿಲ್ಲವೆಂದು ಗೋಹಿಲ್ ತಿಳಿಸಿದ್ದಾರೆ.