ಐಸಿಎಆರ್ ಮಾನ್ಯತೆ ಇಲ್ಲದ ತೋಟಗಾರಿಕೆ ಸ್ನಾತಕೋತ್ತರ ಪದವಿ: ವಿದ್ಯಾರ್ಥಿಗಳ ಬದುಕು ಅತಂತ್ರ
ಮಹಾರಾಷ್ಟ್ರ ಕೃಷಿ ವಿಶ್ವವಿದ್ಯಾನಿಲಯ ಪರೀಕ್ಷಾ ಪ್ರಾಧಿಕಾರವು 2022ರಲ್ಲಿ ನಡೆಸಿದ ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿ ಗಡ್ಗೆ ಅಂಕುಶ್ ಸುಭಾಶ್ ಎಂಬ ವಿದ್ಯಾರ್ಥಿ ಪಿಎಚ್‌ಡಿ ಕೀಟ ರೋಗಶಾಸ್ತ್ರದ ವಿಭಾಗದಲ್ಲಿ ಶೇ. 90.50ರಷ್ಟು ಅಂಕಗಳನ್ನು ಪಡೆದು ಪಟ್ಟಿಯಲ್ಲಿ ಮೊದಲಿರಾಗಿದ್ದರು. ಆದರೆ ಅವರ ಸ್ನಾತಕೋತ್ತರ ಪದವಿ ಮಾನ್ಯವಿಲ್ಲವೆಂದು ಪಿಎಚ್‌ಡಿಗೆ ಪ್ರವೇಶಾತಿಯನ್ನು ನಿರಾಕರಿಸಲಾಯಿತು, ಕಾರಣ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರದ ಸ್ನಾತಕೋತ್ತರ ಪದವಿಗೆ ಮತ್ತು ಪದವಿಯ ಹೆಸರಿಗೆ (Nomenclature) ಭಾರತೀಯ ಅನುಸಂಧಾನ ಪರಿಷತ್ತಿನ ಮಾನ್ಯತೆ (Accreditation) ಇಲ್ಲದಿರುವುದು. ಅಂತೆಯೇ, 2020ರಲ್ಲಿಯೂ ರಾಹುರಿಯ ಮಹಾತ್ಮಾ ಫುಲೆ ಕೃಷಿ ವಿದ್ಯಾಪೀಠವು ಪುಷ್ಪಲತಾ ಎಂಬವರ ಕೀಟಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪಿಎಚ್‌ಡಿ ಪ್ರವೇಶಾತಿಗೆ ಪರಿಗಣಿಸದೆ ನಿರಾಕರಿಸಲಾಗಿತ್ತು. 2019ರಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಸಮಿತಿಯು ಪ್ರೇಮ್ ಚಂದ್‌ರವರ ಸಸ್ಯರೋಗ ಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು ಉದ್ಯೋಗಕ್ಕೆ ಅನರ್ಹವೆಂದು ತಿರಸ್ಕರಿಸಿರುತ್ತದೆ.
ಬಾಗಲಕೋಟೆ ವಿಶ್ವವಿದ್ಯಾನಿಲಯ ನೀಡುವ ಮಾನ್ಯತೆ ಇಲ್ಲದ ಸ್ನಾತಕೋತ್ತರ ಪದವಿಯು ICAR, FCI, Quarantine ಮತ್ತು ವಿವಿಧ ರಾಜ್ಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೂ ಅರ್ಹತೆ ಇಲ್ಲದೆ ಎಷ್ಟೊ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ. ಅಷ್ಟೇ ಅಲ್ಲದೆ ASRB (Agricultural Scientist Recruitment Board)ಯ ಕೃಷಿ ವಿಜ್ಞಾನಿಯಾಗಲು ಅರ್ಹವಿದ್ದಾರೊ ಇಲ್ಲವೊ ಎಂಬುದು ಖಾತ್ರಿ ಇಲ್ಲ. ಕರ್ನಾಟಕ, ತಮಿಳುನಾಡು ಹಾಗೂ ದೇಶದಾದ್ಯಂತ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳು ಐಸಿಎಆರ್ ಆದೇಶದ ಪ್ರಕಾರ ಮಾನ್ಯತೆ ಪಡೆಯದ ವಿಶ್ವವಿದ್ಯಾನಿಲಯಗಳಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅನರ್ಹರು ಎಂಬ ನಿಲುವನ್ನು ಘೋಷಿಸಿವೆ.
ಭಾರತೀಯ ಕೃಷಿ ಅನುಸಂಧಾನ ಸಂಶೋಧನಾ ಪರಿಷತ್ತಿನ ಜೂನ್ 2021ರ ಆದೇಶದ ಪ್ರಕಾರ (ಐಸಿಎಆರ್) ಮಾನ್ಯತೆಯ ವಿಶ್ವವಿದ್ಯಾನಿಲಯಗಳಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ಮಾತ್ರ ವಾರ್ಷಿಕ ಐಸಿಎಆರ್ ನಡೆಸುವ ಸಾಮಾನ್ಯ ಪ್ರವೇಶಾತಿ ಪರೀಕ್ಷೆಗೆ ಅರ್ಹರು ಎಂದಿದೆ.
ಬಾಗಲಕೋಟೆ ವಿಶ್ವವಿದ್ಯಾನಿಲಯವು 2019ರ ವರೆಗೂ ಸಂಬಂಧಿತ ವಿಜ್ಞಾನಗಳ ಸ್ನಾತಕೋತ್ತರ ಪದವಿಗಳಿಗೆ ಐಸಿಎಆರ್ ಮಾನ್ಯತೆ ಇದೆ ಎಂದು ದಾಖಲೆ ನೀಡುತ್ತದೆ. ಆದರೆ, ‘ನ್ಯಾಶನಲ್ ಅಗ್ರಿಕಲ್ಚರಲ್ ಅಕ್ರಿಡಿಟೇಶನ್ ಎಜುಕೇಶನ್ ಬೋರ್ಡ್’ 17 ಸೆಪ್ಟಂಬರ್ 2020ರಲ್ಲಿ ನಡೆದ 26ರ ಸಭೆಯ ನಡಾವಳಿಗಳಲ್ಲಿ ವಿಶ್ವವಿದ್ಯಾನಿಲಯಗಳ ಪರಿಶೀಲನಾ ವರದಿಗಳನ್ನು ಪರಿಶೀಲಿಸಿತು. ಸಮಿತಿಯು ಬಾಗಲಕೋಟೆ ವಿಶ್ವವಿದ್ಯಾನಿಲಯವು ನೀಡುತ್ತಿರುವ ಸಸ್ಯರೋಗಶಾಸ್ತ್ರ, ಕೀಟಶಾಸ್ತ್ರ, ಮಣ್ಣು ವಿಜ್ಞಾನ, ಸಸ್ಯ ಅನುವಂಶೀಯ ತಳಿಶಾಸ್ತ್ರ, ಜೈವಿಕ ತಂತ್ರಜ್ಞಾನ ಮತ್ತು ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ ವಿಷಯಗಳಲ್ಲಿ ನೀಡುತ್ತಿರುವ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿಗಳ ಹೆಸರುಗಳು ಐಸಿಎಆರ್ ನಿಯಮಗಳ ಅನುಸಾರ ಇಲ್ಲವಾದ್ದರಿಂದ ಮಾನ್ಯತೆಯನ್ನು ನೀಡಲಾಗುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಈ ನಿಯಮವು 5 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ ಅಥವಾ ಹೆಸರು ಬದಲಾವಣೆ ಮಾಡುವವರೆಗೂ ಅನ್ವಯವಾಗುತ್ತದೆ. ಆದುದರಿಂದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯವು 2020 ರಿಂದ ನೀಡುತ್ತಿರುವ ಕೃಷಿ ಸಂಬಂಧಿತ ವಿಜ್ಞಾನಗಳ ಸ್ನಾತಕೋತ್ತರ ಪದವಿ ಮತ್ತು ಪದವಿಯ ಹೆಸರಿಗೆ ಮಾನ್ಯತೆ ಇಲ್ಲವೆಂಬುದು ಸ್ಪಷ್ಟವಾಗಿದೆ. ಹಾಗಾಗಿ ಯಾವುದೇ ವಿಶ್ವವಿದ್ಯಾನಿಲಯವು ಇವರ ಪದವಿಗಳನ್ನು ಪ್ರವೇಶಾತಿ ಪರೀಕ್ಷೆಗೆ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗೆ ಅರಿವಾಗುವುದೇ ತಾನು ಉದ್ಯೋಗಕ್ಕೆ ಅಥವಾ ಉನ್ನತ ಶಿಕ್ಷಣ ಮಾಡಲು ಅರ್ಜಿ ಸಲ್ಲಿಸಿದಾಗ. ಏಕೆಂದರೆ ಮಾನ್ಯತೆ ಎಂದರೇನು, ಪದವಿಯ ನಾಮಕರಣ ಎಂದರೇನು ಮತ್ತು ಅದನ್ನು ನೀಡುವ ಸಂಸ್ಥೆ ಯಾವುದೆಂಬ ಜ್ಞಾನ ಯಾವುದೇ ವಿದ್ಯಾರ್ಥಿಯ ಅರಿವಿಗೆ ಬರುವುದಿಲ್ಲ. ಮಾನ್ಯತೆ ಇಲ್ಲದ ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ವಿಶ್ವವಿದ್ಯಾನಿಲಯ ಮಾಡುತ್ತಿರುವ ತಪ್ಪಲ್ಲವೆ.?
ಐಸಿಎಆರ್ ನಿಯಮಗಳ ಪ್ರಕಾರ ತೋಟಗಾರಿಕೆ ವಿಶ್ವವಿದ್ಯಾನಿಲಯಗಳು ತೋಟಗಾರಿಕೆ ಸ್ನಾತಕೋತ್ತರ ವಿಷಯಗಳಿಗೆ ಎಂ.ಎಸ್ಸಿ. ತೋಟಗಾರಿಕೆ ಪದವಿ ಎಂದು, ಕೃಷಿ ಸಂಬಂಧಿತ ಸ್ನಾತಕೋತ್ತರ ವಿಜ್ಞಾನಗಳಿಗೆ ಎಂ.ಎಸ್ಸಿ. ಕೃಷಿ ಎಂದು ಹೆಸರು ನೀಡಬೇಕಾಗಿದೆ. ಪ್ರಸ್ತುತ ದೇಶದಲ್ಲಿ ತೋಟಗಾರಿಕೆ ವಿಶ್ವವಿದ್ಯಾನಿಲಯಗಳು ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ನೀಡಬೇಕಾದರೆ ಎಂ.ಎಸ್ಸಿ. ಕೃಷಿ ಎಂದೇ ಪದವಿ ನೀಡುತ್ತಿವೆ. ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ನಿಯಮಗಳನ್ನು ಪಾಲಿಸಿ ಪದವಿಯ ಹೆಸರುಗಳನ್ನು ಬದಲಾಯಿಸಿ ಪದವಿ ನೀಡಲು ಸಿದ್ಧವಿಲ್ಲ. ಈ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಳು ತಮಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ವಿಶ್ವವಿದ್ಯಾನಿಲಯದ ವಿರುದ್ಧ ಹೋರಾಟ ನಡೆಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತೊಂದರೆಗೀಡಾದ ವಿದ್ಯಾರ್ಥಿಗಳು 2021ರಲ್ಲಿ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ತಮ್ಮ ಅಹವಾಲನ್ನು ಸಲ್ಲಿಸಿದ್ದರು. ನ್ಯಾಯಾಲಯವು ಸಹ ಕೃಷಿ ಸಂಬಂಧಿತ ವಿಜ್ಞಾನಗಳ ಸ್ನಾತಕೋತ್ತರ ವಿಷಯಗಳಲ್ಲಿ ಎಂ.ಎಸ್ಸಿ. ಕೃಷಿ ಎಂದು ನೀಡಬೇಕಾಗಿ ಹೇಳಿದ್ದರೂ ವಿಶ್ವವಿದ್ಯಾನಿಲಯ ಇದುವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ ಮತ್ತು ನ್ಯಾಯ ನೀಡಲಿಲ್ಲ. ಆದರೆ, 2021ರಲ್ಲಿ ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಾಗಲಕೋಟೆ ವಿಶ್ವವಿದ್ಯಾನಿಲಯವು ತಾನು ನೀಡುತ್ತಿರುವ ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ ಎಂಬ ಎಂ.ಎಸ್ಸಿ. ಮತ್ತು ಪಿಎಚ್‌ಡಿ ಪದವಿಗೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾನ್ಯತೆ ಇಲ್ಲವೆಂದು ಪೋಸ್ಟ್ ಹಾರ್ವೆಸ್ಟ್ ಮ್ಯಾನೇಜ್ಮೆಂಟ್ ಎಂದು ಮರುನಾಮಕರಣ ಮಾಡಿರುತ್ತದೆ.
ಆದುದರಿಂದ ವಿದ್ಯಾರ್ಥಿಗಳ ನೋವನ್ನು ಮನಗಂಡು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯವು ಐಸಿಎಆರ್ ನಿಯಮಗಳಂತೆ ಕೇವಲ ಕೃಷಿ ಸಂಬಂಧಿತ ವಿಜ್ಞಾನಗಳ (Allied Sciences) ಸ್ನಾತಕೋತ್ತರ ಪದವಿಗಳ ಹೆಸರುಗಳನ್ನು ಮಾತ್ರ M.Sc. Agriculture ಎಂದು ಮರುನಾಮಕರಣ ಮಾಡಿ ಐಸಿಎಆರ್ ಮಾನ್ಯತೆಯನ್ನು ಕೂಡಲೇ ಪಡೆಯಬೇಕು. ಮುಂದುವರಿದು, ಇಲ್ಲಿಯವರೆಗೂ ಕೃಷಿ ಸಂಬಂಧಿತ ವಿಜ್ಞಾನಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದು ಹೊರ ಹೊಮ್ಮಿರುವ ವಿದ್ಯಾರ್ಥಿಗಳಿಗೆ ಕನಿಷ್ಠ ಮರುನಾಮಕರಣದೊಂದಿಗೆ ಸ್ನಾತಕೋತ್ತರ ಪದವಿಯ ಪತ್ರವನ್ನು ವಿತರಿಸಿ ಅವರ ಶೈಕ್ಷಣಿಕ ಅರ್ಹತೆಯನ್ನು ಕಾಪಾಡಬೇಕಾಗಿದೆ. ವಿಶ್ವವಿದ್ಯಾನಿಲಯ ಈ ಕ್ರಮವನ್ನು ತೆಗೆದುಕೊಳ್ಳಲು ಇಚ್ಛಿಸದಿದ್ದರೆ, ವಿದ್ಯಾರ್ಥಿಗಳ ಭವಿಷ್ಯ ನಾಶ ಮಾಡುವುದಕ್ಕಿಂತ ವಿಶ್ವವಿದ್ಯಾನಿಲಯದ ಸಂಬಂಧಿತ ವಿಜ್ಞಾನಗಳ ಸ್ನಾತಕೋತ್ತರ ಪದವಿಯನ್ನು ಶಾಶ್ವತವಾಗಿ ಮುಚ್ಚುವುದೇ ಉತ್ತಮವಾದ ನಿರ್ಧಾರವಾಗಬಹುದು.