ಜೈಲಿನಲ್ಲಿ ಕೊಲೆ ಆರೋಪಿ ಮೃತ್ಯು; ಮತ್ತೆ ಭುಗಿಲೆದ್ದ ಅಸ್ಸಾಂ- ಮಿಝೋರಾಂ ಗಡಿ ವಿವಾದ

Update: 2022-02-12 01:50 GMT
ಫೈಲ್ ಫೋಟೊ

ಐಜ್ವಾಲ್: ಮಿಝೋರಾಂ ರಾಜಧಾನಿ ಐಜ್ವಾಲ್‌ನ ಕೇಂದ್ರೀಯ ಕಾರಾಗೃಹದಲ್ಲಿ ಅಸ್ಸಾಂನ ಕೊಲೆ ಆರೋಪಿಯೊಬ್ಬ ಮೃತಪಟ್ಟಿರುವುದು ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಮತ್ತೆ ಭುಗಿಲೇಳಲು ಕಾರಣವಾಗಿದೆ.

ಈ ಘಟನೆಯಿಂದ ಕೆರಳಿದ ಅಸ್ಸಾಂನ ಕೊಚಾರ್ ಪ್ರದೇಶದ ಧೋಲೈನಲ್ಲಿ ಉದ್ರಿಕ್ತರ ಗುಂಪು ಮಿಝೋರಾಂಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಟ್ರಕ್‌ಗಳ ಮೇಲೆ ಕಲ್ಲು ತೂರಾಟ ನಡೆಸಿತು.

ಕಳೆದ ತಿಂಗಳು ಮಿಝೋರಾಂನ ಲೆಂಗ್‌ಪುಯಿ ಗ್ರಾಮದಲ್ಲಿ, ಅಸ್ಸಾಂನ ಧೊಲೈ ರಾಮಪ್ರಕಾಶದಪುರ ಎಂಬಲ್ಲಿನ ಕೆ.ರಾಬಿನ್ ಸಿಂಗ್ (48) ಎಂಬ ತೈಲ ಟ್ಯಾಂಕರ್ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದಲ್ಲಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಕಡಿದ ಗಾಯಗಳಿಂದ ತೀವ್ರ ರಕ್ತಸ್ರಾವದಿಂದಾಗಿ ಸಿಂಗ್ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಐಜ್ವಾಲ್ ಸಿವಿಲ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಅದರೆ ಆ ವೇಳೆಗಾಗಲೇ ಚಾಲಕ ಮೃತಪಟ್ಟಿದ್ದರು.

ಆ ಬಳಿಕ ಪೊಲೀಸರು ಟ್ರಕ್ ಚಾಲಕನ ಸಹಾಯಕ ಮತ್ತು ಪ್ರಕರಣದ ಪ್ರಮುಖ ಆರೋಪಿ ನೃಪೇನ್ ಸಿಂಗ್ (50) ಎಂಬಾತನನ್ನು ಧೊಲೈನಿಂದ ಬಂಧಿಸಿದ್ದರು. ಹತ್ಯೆ ಬಳಿಕ ಆತ ಅಡಗಿಕೊಂಡಿದ್ದ. ತನ್ನನ್ನು ಅವಮಾನಿಸಿದ್ದಕ್ಕಾಗಿ ಮತ್ತು ಊಟಕ್ಕೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ರಾಬಿನ್ ಸಿಂಗ್‌ನನ್ನು ಮಚ್ಚಿನಿಂದ ಹೊಡೆದು ಬುಚಿಲಿ ಸೇತುವೆ ಬಳಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದ.

ಐಜ್ವಾಲ್ ಜ್ಯುಡೀಶಿಯಲ್ ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಫೆಬ್ರುವರಿ 1ರಂದು ಕೇಂದ್ರೀಯ ಕಾರಾಗೃಹಕ್ಕೆ ಆತನನ್ನು ಸ್ಥಳಾಂತರಿಸಲಾಗಿತ್ತು. ನೃಪೇನ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿತ್ತು. ಬುಧವಾರ ಮುಂಜಾನೆ ವೇಳೆಗೆ ಆರೋಪಿ ಜೈಲಿನ ಸೆಲ್‌ನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಫೆಬ್ರುವರಿ 2ರಂದು ಸಹ ಕೈದಿಗಳಿಗೆ ಇಟ್ಟಿಗೆಯಿಂದ ಹೊಡೆದ ಆರೋಪದಲ್ಲಿ ನೃಪೇನ್‌ನನ್ನು ಏಕಾಂತ ಬಂಧನಕ್ಕೆ ಒಳಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News