ಸಿಎಎ ಪ್ರತಿಭಟನಾಕರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಹಿಂಪಡೆಯುವಂತೆ ಆದಿತ್ಯನಾಥ್‌ ಸರ್ಕಾರಕ್ಕೆ ಸುಪ್ರೀಂ ತಾಕೀತು

Update: 2022-02-12 04:17 GMT

ಹೊಸದಿಲ್ಲಿ: ಸಿಎಎ ವಿರೋಧಿ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ಹಾಕುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ವಾಗ್ದಾಳಿ ನಡೆಸಿದೆ. ಆಸ್ತಿ ಮುಟ್ಟುಗೋಲಿನ ಪ್ರಕ್ರಿಯೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಅಂತಿಮ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್‌ ಆದಿತ್ಯನಾಥ್‌ ಸರ್ಕಾರಕ್ಕೆ ನೀಡಿದೆ. ಒಂದು ವೇಳೆ, ಪ್ರಕ್ರಿಯೆಯನ್ನು ಹಿಂಪಡೆಯದಿದ್ದರೆ ವಿಚಾರಣೆಯನ್ನೇ ರದ್ದುಗೊಳಿಸುವುದಾಗಿ ಸುಪ್ರೀಂ ಹೇಳಿದೆ. 

ಡಿಸೆಂಬರ್ 2019 ರಲ್ಲಿ ಉತ್ತರ ಪ್ರದೇಶ ಸರ್ಕಾರ ಆರಂಭಿಸಿದ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆಗಳು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಕಾನೂನಿಗೆ ವಿರುದ್ಧವಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಉತ್ತರ ಪ್ರದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳಿಗಾದ ಹಾನಿಯ ನಷ್ಟ ಸರಿದೂಗಿಸಲು ಪ್ರತಿಭಟನಾಕಾರರ ಆಸ್ತಿ ವಸೂಲಿಗೆ ಜಿಲ್ಲಾಡಳಿತವು ನೋಟಿಸ್‌ ಕಳುಹಿಸಿತ್ತು. ಆಸ್ತಿ ಮುಟ್ಟುಗೋಲಿಗೆ ನಡೆಯುತ್ತಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಪರ್ವೈಜ್ ಆರಿಫ್ ಟಿಟು ಎಂಬವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.  

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠವು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಳನ್ನು ನಡೆಸುವಲ್ಲಿ ಉತ್ತರ ಪ್ರದೇಶ ಸರ್ಕಾರವು ʼತೀರ್ಪುಗಾರʼನಂತೆ ವರ್ತಿಸಿದೆ ಎಂದು ಹೇಳಿದೆ. 

ನ್ಯಾಯಾಲಯದಂತೆ ಸರ್ಕಾರವೇ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಿ, ಅವರ ಆಸ್ತಿ ಮುಟ್ಟುಗೋಲು ಹಾಕಲು ಹೊರಟಿರುವ ಆದಿತ್ಯನಾಥ್ ಸರ್ಕಾರದ ಕ್ರಮ ಸುಪ್ರೀಂ ಕೋರ್ಟ್‌ ಆಕ್ರೋಶಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್‌ ಪ್ರಕ್ರಿಯೆಗಳನ್ನು ನಿಲ್ಲಿಸುವಂತೆ ಆದೇಶಿಸಿದ್ದು ಆದಿತ್ಯನಾಥ್‌ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News