ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ: ಒಂದು ವಿಶ್ಲೇಷಣೆ
ಏಳು ಹಂತದಲ್ಲಿ ಉತ್ತರ ಪ್ರದೇಶದ ವಿಧಾನ ಸಭೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ. ಹಲವು ಕಾರಣಗಳಿಗಾಗಿ ಇದು ಅತ್ಯಂತ ಮಹತ್ತರವಾದ ಚುನಾವಣೆಯಾಗಲಿದೆ. ಮೊದಲನೆಯದಾಗಿ, ಯೋಗಿ ಸರಕಾರಕ್ಕೆ ಎರಡನೇ ಅವಧಿಗೆ ಮತಗಳನ್ನು ಸೆಳೆಯಲು ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ‘ಮ್ಯಾಸ್ಕಾಟ್’ ಆಗಿ ಮಾಡಿಕೊಂಡಿದೆ. ಮೊದಲ ಹಂತದ ಪ್ರಚಾರ ಕೊನೆಗೊಂಡ ನಂತರವೂ ಮೋದಿ ಸಂದರ್ಶನದ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಪ್ರಚಾರದಲ್ಲಿ ಯೋಗಿ ದ್ವಿತೀಯ ಸ್ಥಾನವನ್ನು ಪಡೆದಿರುವುದು ಗಮನಾರ್ಹವಾದ ವಿಷಯ. ಎಲ್ಲಾ ರೀತಿಯಲ್ಲೂ, ಮೋದಿ-ಅಮಿತ್ ಶಾ ಅವರದೇ ಮೇಲುಗೈ. ಎರಡನೆಯದಾಗಿ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಉತ್ತರ ಪ್ರದೇಶದ ಸೊಲು-ಗೆಲುವು ದಿಕ್ಸೂಚಿಯಾಗುವ ಲಕ್ಷಣಗಳು ಕಂಡುಬರುತ್ತಿದೆ. ಸೋಲಾದರೆ, ಅದು ಮೋದಿಯವರ ವರ್ಚಸ್ಸಿನ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಈ ಕಾರಣಗಳಿಗಾಯೇ, ಪ್ರಧಾನಿಯೊಬ್ಬರು ರಾಜ್ಯಗಳ ಚುನಾವಣೆಗಳಲ್ಲಿ ಹೆಚ್ಚಾಗಿ ಪ್ರಚಾರಕ್ಕೆ ಹೋಗಬಾರದು. ಭಾರತದ ಚುನಾವಣಾ ಇತಿಹಾಸದಲ್ಲಿ ಈ ಹಿಂದೆ ಪ್ರಧಾನ ಮಂತ್ರಿಗಳು ಒಂದೆರಡು ಸಾಂಪ್ರದಾಯಿಕ ಭಾಷಣಗಳನ್ನು ಮಾಡುವುದನ್ನು ಬಿಟ್ಟರೆ ವಿಧಾನಸಭಾ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ. ಈ ವಿಷಯದಲ್ಲಿ ಮೋದಿಯವರು ವಿಭಿನ್ನ. ಅವರು ಚುನಾವಣಾ ಪ್ರಚಾರ ಪ್ರಿಯರು. ಹಾಗಾಗಿ,ಯಶವಂತ್ ಸಿನ್ಹಾ ಮೋದಿಯವರನ್ನು ಇತ್ತೀಚೆಗೆ ‘ಚುನಾವಣೆ-ಜೀವಿ’ ಎಂದು ಬಣ್ಣಿಸಿದರು.
ಮೋದಿ ತಮ್ಮನ್ನು ತಾವು ಬಲವಾಗಿ ಬಿಂಬಿಸಿಕೊಳ್ಳಲು ಮೂರನೇ ಕಾರಣವೆಂದರೆ ಯೋಗಿ ಅವರ ಸರ್ವಾಧಿಕಾರಿ ಕಾರ್ಯವೈಖರಿ. ಇದರ ಪರಿಣಾಮವಾಗಿ ಸ್ವಾಮಿ ಪ್ರಸಾದ್ ಮೌರ್ಯ ಅವರಂತಹ ಅನೇಕ ಹಿರಿಯ ನಾಯಕರು ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮೂರು ಬಾರಿ ಬಿಜೆಪಿ ಶಾಸಕರಾಗಿದ್ದ ರೋಷನ್ ಲಾಲ್ ವರ್ಮಾ ಕೂಡ ಅದೇ ಕಾರಣಕ್ಕಾಗಿ ಸಮಾಜವಾದಿ ಪಕ್ಷ ಸೇರಿದ್ದಾರೆ.
ಚುನಾವಣಾ ಸಮಸ್ಯೆಗಳು:
ಮತದಾರರು ಮತ ಚಲಾಯಿಸುವಾಗ ಅವರ ಮನಸ್ಸಿನಲ್ಲಿ ಅಡಗಿರಬಹುದಾದ ಕೆಲವು ವಿಷಯಗಳನ್ನು ಗಮನಿಸೋಣ. ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣ, ‘ದಿವ್ಯ ಕಾಶಿ- ಭವ್ಯ ಕಾಶಿ’ಯನ್ನು ಮೋದಿ ಉದ್ಘಾಟಿಸಿದ್ದು, ಪಕ್ಷವು ‘ಹಿಂದುತ್ವ ಕಾರ್ಡ್’ಅನ್ನು ಉಪಯೋಗಿಸುತ್ತಿರುವುದು ಹಿಂದೂಗಳ ಮತವನ್ನು ಸೆಳೆಯುವುದರಲ್ಲಿ ಸಹಾಯಕವಾಗಬಹುದು. ಆದರೆ, ಹಿಂದುತ್ವದ ಅಜೆಂಡಾವನ್ನು ಒಂದು ಹಂತಕ್ಕೆ ಮೀರಿ ಬಿಂಬಿಸುವ ತಂತ್ರವು ಪ್ರತಿಕೂಲವಾಗಿಯೂ ಪರಿಣಮಿಸಬಹುದು. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮಾಡಿದ ದ್ವೇಷದ ಭಾಷಣಗಳನ್ನು ಖಂಡಿಸದ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕತ್ವದ ಮೌನ, ಅದು ರಾಷ್ಟ್ರೀಯ ಮಟ್ಟದಲ್ಲಿ ಎಬ್ಬಿಸಿದ ಟೀಕೆಗಳು, ಈ ವಿಷಯದ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿರುವುದು ಉತ್ತರ ಪ್ರದೇಶದ ಮತದಾರರ, ವಿಶೇಷವಾಗಿ ಯುವಕರ ಮೇಲೆ, ನಕಾರಾತ್ಮಕ ಪ್ರಭಾವವನ್ನು ಬೀರುತ್ತಿರುವುದು ಗಣನೀಯವಾದ ಅಂಶ. ರಸ್ತೆಗಳಲ್ಲಿ ಜನರು ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಭಟಿಸುತ್ತಿರುವುದು ಗೋಚರವಾಗಿರುವ ವಿಷಯ. ಇದರ ಪರಿಣಾಮವಾಗಿ ಉತ್ತರ ಪ್ರದೇಶದ ಜಾತ್ಯತೀತ ಮತದಾರರು ಬಿಜೆಪಿಯನ್ನು ಬೆಂಬಲಿಸದೆ ಇರುವ ಸಾಧ್ಯತೆಗಳು ಗಮನಾರ್ಹವಾಗಿ ಇವೆ.
ಜಾತಿಯ ಪ್ರಭಾವ:
ಭಾರತದ ಇತರ ರಾಜ್ಯಗಳಂತೆ ಉತ್ತರ ಪ್ರದೇಶದ ರಾಜಕೀಯದಲ್ಲಿಯೂ ಜಾತಿಯು ಯಾವಾಗಲೂ ಪ್ರಧಾನ ಪಾತ್ರವನ್ನು ವಹಿಸಿದೆ. ಗಣನೀಯವಾದ ಅಂಶವೆಂದರೆ, ಸಾಮಾನ್ಯವಾಗಿ, ಭಾರತದ ಮತದಾರರು, ತಮ್ಮ ಜಾತಿಗೆ ಮತ ಹಾಕುತ್ತಾರೆಯೇ ಹೊರತು ಮತ ಚಲಾಯಿಸುವುದಿಲ್ಲ!(Voters vote their caste and not cast their votes). 2011ರ ಜನಗಣತಿಯ ಪ್ರಕಾರ ಉತ್ತರ ಪ್ರದೇಶದ ಜನಸಂಖ್ಯೆ ಸುಮಾರು ಶೇ. 14 ಮುಂದುವರಿದ ಜಾತಿಗಳು, ಶೇ. 44 ಒಬಿಸಿಗಳು, ಶೇ. 20.8 ಪರಿಶಿಷ್ಟ ಜಾತಿಗಳು ಮತ್ತು ಶೇ. 20 ಮುಸ್ಲಿಮರನ್ನು ಒಳಗೊಂಡಿದೆ. ಒಬಿಸಿ., ಪರಿಶಿಷ್ಟ ಜಾತಿಗಳ ಮತ್ತು ಮುಂದುವರಿದವರ ಬೆಂಬಲವನ್ನು ಯಾರು ಪಡೆಯುತ್ತಾರೋ ಅವರು ಸರಕಾರ ರಚಿಸುವ ಸ್ಥಿತಿಯಲ್ಲಿರುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಜಾತಿ ಗುಂಪುಗಳು ಏಕಶಿಲೆಯಾಗಿಲ್ಲ, ವಿಭಿನ್ನ ರಾಜಕೀಯ ಶಕ್ತಿಗಳಿಗೆ ನಿಷ್ಠೆಯನ್ನು ಹೊಂದಿರುವ ಉಪ-ಗುಂಪುಗಳು ವಿವಿಧ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ, ವಿಶೇಷವಾಗಿ ಬ್ರಾಹ್ಮಣರು, ಮುಸ್ಲಿಮರು, ಕೆಲವು ಪ್ರದೇಶಗಳಲ್ಲಿ ಪರಿಶಿಷ್ಟರು ಮತ್ತು ಒಬಿಸಿ ಮತದಾರರ ಬೆಂಬಲವನ್ನು ಪಡೆದುಕೊಂಡು ದೀರ್ಘಕಾಲ ಅಧಿಕಾರ ಚಲಾಯಿಸಿದ್ದು ಗೊತ್ತಿರುವ ವಿಷಯವೇ. ಆದರೆ, ಸಮಾಜವಾದಿ ಪಕ್ಷದ ಉದಯದೊಂದಿಗೆ, ಯಾದವ ಮತ್ತು ಮುಸ್ಲಿಮ್ ಮತದಾರರು ಆ ಪಕ್ಷದ ಕಡೆಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿದ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ಜಾತಿ ಬೆಂಬಲ ಕ್ಷೀಣಿಸಿತು. ಹಾಗೆಯೇ, ಬಹುಜನ ಪಕ್ಷದ(ಬಿಎಸ್‌ಪಿ) ನಾಯಕಿ ಮಾಯಾವತಿಯವರು ಪರಿಶಿಷ್ಟರ ಬೆಂಬಲದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದು ಗೊತ್ತಿರುವ ವಿಷಯವೇ. ಆದರೆ ಬಿಎಸ್‌ಪಿ ಕ್ರಮೇಣ ಬ್ರಾಹ್ಮಣರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಹೀಗಾಗಿ, ಉತ್ತರ ಪ್ರದೇಶದಲ್ಲಿ, ವಿವಿಧ ಪಕ್ಷಗಳು ತಮ್ಮ ತಮ್ಮ ಜಾತಿಯ ತಳಹದಿಯ ವ್ಯಾಪ್ತಿಯಿಂದ ಹೊರಗಿರುವ ಮತದಾರರ ಬೆಂಬಲವನ್ನು ಪಡೆದು ಸರಕಾರ ರಚಿಸುತ್ತಲೇ ಬಂದಿವೆ.
ಬಿಜೆಪಿಯ ಬಗ್ಗೆ ಹೇಳುವುದಾದರೆ, ಸಾಂಪ್ರದಾಯಿಕವಾಗಿ ಬ್ರಾಹ್ಮಣರು ಮತ್ತು ‘ಬನಿಯಾ’ಗಳನ್ನು ಒಳಗೊಂಡಿದ್ದ ಪಕ್ಷವು ತನ್ನ ಸಾಮಾಜಿಕ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಒಬಿಸಿ ನಾಯಕ ಕಲ್ಯಾಣ್ ಸಿಂಗ್ ಮತ್ತು ಠಾಕೂರ್ ರಾಜನಾಥ್ ಸಿಂಗ್ ಅವರನ್ನು ಈ ಹಿಂದೆ ಅಧಿಕಾರಕ್ಕೆ ತಂದಿತು. 2017ರಿಂದ, ಮೋದಿಯವರ ಅಡಿಯಲ್ಲಿ, ಒಬಿಸಿಗಳ ಬೆಂಬಲವನ್ನು ಹೆಚ್ಚಿಸಿಕೊಂಡಿತು. ಆದರೆ, ಯೋಗಿ ಆದಿತ್ಯನಾಥ(ಠಾಕೂರ್)ರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಿ, ಹಿಂದುತ್ವ ರಾಜಕಾರಣವನ್ನು ಬೆಳಸುವ ಮಹಾನ್ ಗುರಿಯನ್ನು ಮೋದಿಯವರು ಹಮ್ಮಿಕೊಂಡರು. ಚುನಾವಣೆಯಲ್ಲಿ ಹಿಂದುತ್ವದ ಬೆಂಬಲದಿಂದ ಮತ್ತೆ ಅಧಿಕಾರಕ್ಕೆ ಬರುವ ತಂತ್ರವನ್ನು ಪಕ್ಷವು ಹಾಕಿಕೊಂಡಿದೆ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಚುನಾವಣಾ ಅಖಾಡದಲ್ಲಿರುವ ಮತ್ತೊಂದು ಪ್ರಮುಖ ಸ್ಪರ್ಧಿಯಾಗಿದೆ. ಅಖಿಲೇಶ್ ಯಾದವ್‌ರಿಗೆ ಇರುವ ದೊಡ್ಡ ಸವಾಲು ಅವರು ಉಳಿದ ಹಂತಗಳಲ್ಲಿ ಟಿಕೆಟ್ ಹಂಚಿಕೆಯನ್ನು ಚಾಣಾಕ್ಷತನದಿಂದ ನಿಭಾಯಿಸಿ, ಅಧಿಕಾರದಿಂದ ಹೊರಗುಳಿದಿರುವಾಗ ತಮ್ಮೊಂದಿಗೆ ಇದ್ದ ನಿಷ್ಠಾವಂತ ಅನುಯಾಯಿಗಳನ್ನು ಉಳಿಸಿಕೊಂಡು ಜೊತೆಗೆ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದವರಿಗೂ ಟಿಕೆಟ್ ಕೊಡುವುದರ ಮೂಲಕ, ತಮ್ಮ ಯಾದವ-ಮುಸ್ಲಿಮ್ ನೆಲೆಯನ್ನು ಉಳಿಸಿಕೊಳ್ಳುವುದಾಗಿದೆ. ಜೊತೆಯಲ್ಲಿಯೇ, ರಾಷ್ಟ್ರೀಯ ಲೋಕ ತಾಂತ್ರಿಕ ದಳದೊಂದಿಗಿನ ಸಂಬಂಧವನ್ನು ಉಪಯೋಗಿಸಿಕೊಂಡು ಚುನಾವಣೆಯಲ್ಲಿ ಯಶಸ್ಸನ್ನು ಸಾಧಿಸಬೇಕಾಗಿದೆ.
ಪ್ರಿಯಾಂಕಾ ವಾದ್ರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾ ಕಣದಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಿಳೆಯರಿಗೆ ಶೇ. 40ರಷ್ಟು ಸ್ಥಾನಗಳನ್ನು ನೀಡುವ ಪ್ರಿಯಾಂಕಾ ಗಾಂಧಿಯವರ ನಿರ್ಧಾರವು ಮಹಿಳೆಯರ ಮತಗಳನ್ನು ಗೆಲ್ಲುವ ಗುರಿಯಿಂದ ಕೂಡಿದೆ. ಪಕ್ಷವು ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಸಮಸ್ಯೆಗಳನ್ನೂ ತನ್ನ ಪ್ರಚಾರದಲ್ಲಿ ಸೇರಿಸಿಕೊಂಡಿದೆ. ಇವೆಲ್ಲದರ ಪರಿಣಾಮವಾಗಿ ಪಕ್ಷವು ಎಷ್ಟು ಯಶಸ್ವಿಯಾಗಲಿದೆ ಎಂದು ಕಾದುನೊಡಬೇಕಾಗಿದೆ. ಅಂತಿಮವಾಗಿ ಮೂರು ರೀತಿಯ ಅಭಿಪ್ರಾಯಗಳನ್ನು ಮಂಡಿಸಬಹುದು: 1. ಬಿಜೆಪಿಗೆ ಬಹುಮತ ಬಂದರೆ, ಅದು ಮೋದಿ, ಯೋಗಿ ಮತ್ತು ಹಿಂದುತ್ವ ರಾಜಕಾರಣದ ಗೆಲುವಾಗುತ್ತದೆ. ನಿರುದ್ಯೋಗ, ಹಣದುಬ್ಬರ ಇತ್ಯಾದಿ ಸಮಸ್ಯೆಗಳು ಚುನಾವಣೆಯಲ್ಲಿನ ಪ್ರಮುಖ ವಿಷಯಗಳಲ್ಲವೆಂದು ಸಾಬೀತಾಗುತ್ತದೆ. 2. ಎಸ್‌ಪಿ-ಆರ್.ಎಲ್.ಡಿ. ಮೈತ್ರಿಗೆ ವಿಜಯ ಲಭಿಸಿದರೆ, ಬಿಜೆಪಿ ಮತ್ತು ನರೇಂದ್ರ ಮೋದಿ, ಅಮಿತ್ ಶಾ-ಆದಿತ್ಯನಾಥ್‌ರವರ ಕೋಮುವಾದ ರಾಜಕಾರಣಕ್ಕೆ ಬಲವಾದ ಹಿನ್ನಡೆಯಾಗುತ್ತದೆ. ಜೊತೆಯಲ್ಲಿಯೇ, ಮುಖ್ಯವಾಗಿ, ಭಾರತದ ಸಂವಿಧಾನ, ಸರ್ವಧರ್ಮ ಸಮನ್ವಯತೆಗೆ ಹಾಗೂ ಜಾತ್ಯತೀತತೆಯ ಗಟ್ಟಿತನಕ್ಕೆ ಸಿಕ್ಕ ಯಶಸ್ಸಾಗುತ್ತದೆ. 3. ಅಂತಹ ವಿಜಯವು ಪ್ರಾದೇಶಿಕ ಪಕ್ಷಗಳ ಬಿಜೆಪಿಯ ವಿರುದ್ಧದ 2024ರ ಲೋಕ ಸಭಾ ಚುನಾವಣಾ ಸ್ಪರ್ಧೆಗೆ ಶಕ್ತಿ ತುಂಬುತ್ತದೆ.
(ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು.)