ಮಮತಾ ಬ್ಯಾನರ್ಜಿ-ಅಭಿಷೇಕ್ ಬ್ಯಾನರ್ಜಿ ನಡುವೆ ಹೆಚ್ಚಾದ ಭಿನ್ನಾಭಿಪ್ರಾಯ: ಇಂದು ಪ್ರಮುಖ ನಾಯಕರ ಸಭೆ

Update: 2022-02-12 05:25 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ  ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನಡುವೆ ಭಿನ್ನಾಭಿಪ್ರಾಯವು ಮತ್ತಷ್ಟು ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶನಿವಾರ ಪಕ್ಷದ ಪ್ರಮುಖ ನಾಯಕರ ಸಭೆಯನ್ನು ಕರೆಯುವ ಸಾಧ್ಯತೆ ಇದೆ ಎಂದು NDTV ವರದಿ ಮಾಡಿದೆ.

ಪಕ್ಷದಲ್ಲಿ 'ಒನ್ ಮ್ಯಾನ್, ಒನ್ ಪೋಸ್ಟ್' ನೀತಿಯನ್ನು ಪ್ರಚಾರ ಮಾಡಲು ಅಭಿಷೇಕ್ ಬ್ಯಾನರ್ಜಿಯವರು ಮುಂದಾಗಿದ್ದು, ಇದರಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಪರಿಹರಿಸಲು ಸಭೆಯಲ್ಲಿ ಮೇಲ್ನೋಟಕ್ಕೆ ಉದ್ದೇಶಿಸಲಾಗಿದೆ.   ಅಭಿಷೇಕ್ ಅವರ ನೀತಿಯಿಂದ ಪಕ್ಷದ ಕೆಲವು ಹಿರಿಯ ನಾಯಕರು ಅಸಮಾಧಾನಗೊಂಡಿದ್ದು, ಅವರಲ್ಲಿ ಕೆಲವರು ಆಡಳಿತ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಹೊಂದಿದ್ದಾರೆ.

ಆದರೆ ಅನೇಕರು ಇದನ್ನು ಮಮತಾ ಬ್ಯಾನರ್ಜಿ ಹಾಗೂ  ಅವರ  ಸೋದರಳಿಯ ನಡುವಿನ ಹೆಚ್ಚುತ್ತಿರುವ ಘರ್ಷಣೆಯ ಪ್ರತಿಬಿಂಬವೆಂದು ಹೇಳುತ್ತಿದ್ದು, ಅಭಿಷೇಕ್ ಅವರು  ಪಕ್ಷದ ಎರಡನೇ ಸಾಲಿನ ಪ್ರಮುಖ ನಾಯಕನಾಗಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯಿಂದ ತೃಣಮೂಲದೊಂದಿಗೆ ಕೆಲಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಅವರ ರಾಜಕೀಯ ಸಲಹಾ ಗುಂಪು ಐ-ಪ್ಯಾಕ್ ಈಗ ಇಕ್ಕಟ್ಟಿನಲ್ಲಿ ಸಿಲುಕಿದೆ.  ಅಭಿಷೇಕ್ ಬ್ಯಾನರ್ಜಿ ಅವರು ತೃಣಮೂಲ ಹಾಗೂ  ಐ-ಪ್ಯಾಕ್ ​​ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದಾರೆ.

ಶುಕ್ರವಾರ ತೃಣಮೂಲ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಹಾಗೂ  ಐ-ಪ್ಯಾಕ್ ನಡುವೆ ಸಾರ್ವಜನಿಕ ವಾಗ್ವಾದ ನಡೆದಿತ್ತು. ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಶಾಂತ್ ಕಿಶೋರ್ ಅವರ ತಂಡವು "ದುರುಪಯೋಗಪಡಿಸಿಕೊಂಡಿದೆ " ಎಂದು ಅವರು ಆರೋಪಿಸಿದ್ದರು

ಚುನಾವಣೆಗೂ ಮುನ್ನ ಐ-ಪ್ಯಾಕ್ ನನ್ನ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ರಚಿಸಿತ್ತು. ಇಂದು ಅದು ನನಗೆ ತಿಳಿಯದೆ 'ಒಬ್ಬ ವ್ಯಕ್ತಿ ಒಂದು ಹುದ್ದೆ' ಕುರಿತು ಪೋಸ್ಟ್ ಮಾಡಿದೆ. ನಾನು ಅದರ ವಿರುದ್ಧ ಬಲವಾಗಿ ಪ್ರತಿಭಟಿಸುತ್ತೇನೆ ” ಭಟ್ಟಾಚಾರ್ಯ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪರ ಚುನಾವಣಾ ಪ್ರಚಾರಕ್ಕೆ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾಗ ಮಮತಾ  ಬ್ಯಾನರ್ಜಿಯವರ ಬಳಿ, ನೀವು ಗೋವಾದಲ್ಲಿ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದಾಗ, "ಅಲ್ಲಿ ಯಾರೋ  ಏನೋ ಮಾಡುತ್ತಿದ್ದಾರೆ.  ಹಾಗಾಗಿ ನಾನು ಅಲ್ಲಿಗೆ ಹೋಗಲ್ಲ. ಹೆಚ್ಚಿನ ಆಸಕ್ತಿಯಿಂದ ನಾನು ಇತರ ಸ್ಥಳಗಳಿಗೆ ಹೋಗುತ್ತಿದ್ದೇನೆ " ಎಂದು ಮಮತಾ ಹೇಳಿದ್ದರು.  ಗೋವಾದಲ್ಲಿ ಟಿಎಂಸಿ ಸ್ಪರ್ಧಿಸಲು ಕಾರಣವಾಗಿರುವ ತನ್ನ ಅಳಿಯನನ್ನು ಉದ್ದೇಶಿಸಿ ಮಮತಾ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News