ಸಲಿಂಗಿ ಮಾಜಿ ಸೇನಾಧಿಕಾರಿ ಕುರಿತ ಪ್ರಸ್ತಾವಿತ ಚಿತ್ರಕ್ಕೆ ನಿರಾಕ್ಷೇಪಣಾ ಪತ್ರ ನಿರಾಕರಿಸಿದ ರಕ್ಷಣಾ ಸಚಿವಾಲಯ: ಕೇಂದ್ರ
ಹೊಸದಿಲ್ಲಿ: ಸೈನಿಕ ಮತ್ತು ಕಾಶ್ಮೀರಿ ಬಾಲಕನೊಬ್ಬನ ನಡುವಿನ ಪ್ರೇಮ ಸಂಬಂಧವನ್ನು ಬಿಂಬಿಸುವ ಚಲನಚಿತ್ರವು ಭಾರತೀಯ ಸೇನೆಯನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿ ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅದಕ್ಕೆ ರಕ್ಷಣಾ ಸಚಿವಾಲಯ ನಿರಾಕ್ಷೇಪಣಾ ಪತ್ರ ನಿರಾಕರಿಸಿದೆ, ಎಂದು ಕೇಂದ್ರ ಸರಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.
ಸೇನೆಗೆ ಸಂಬಂಧಿಸಿದ ಚಲನಚಿತ್ರಗಳಿಗೆ ನಿರಾಕ್ಷೇಪಣಾ ಪತ್ರಕ್ಕಾಗಿ ಭಾರತೀಯ ಸೇನೆ ಜನವರಿ 31, 2021 ಹಾಗೂ ಜನವರಿ 31, 2022ರ ನಡುವೆ 18 ಪ್ರಸ್ತಾವನೆಗಳನ್ನು ಪಡೆದಿತ್ತು ಇವುಗಳಲ್ಲಿ ಇಲ್ಲಿಯ ತನಕ ಒಂದು ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಹಾಗೂ ಇನ್ನೊಂದು ಬಾಕಿಯಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ಟ್ ತಿಳಿಸಿದರು.
ಸಲಿಂಗಿಯಾಗಿರುವ ನಿವೃತ್ತ ಸೇನಾಧಿಕಾರಿಯೊಬ್ಬರ ಜೀವನಾಧರಿತ ಪ್ರಸ್ತಾವಿತ ಚಿತ್ರಕ್ಕಾಗಿ ಸೇನೆಯು ಅನುಮತಿ ನಿರಾಕರಿಸಿತ್ತು ಎಂದು ಚಿತ್ರ ತಯಾರಕ ಓನಿರ್ ಕಳೆದ ತಿಂಗಳು ತಿಳಿಸಿದ್ದರು. 2020ರಲ್ಲಿ ಜಾರಿಗೆ ತರಲಾದ ಸಚಿವಾಲಯದ ನಿಯಮದಂತೆ ಮಿಲಿಟರಿಗೆ ಸಂಬಂಧಿಸಿದ ಎಲ್ಲಾ ಚಲನಚಿತ್ರಗಳು ಅನುಮತಿ ಪಡೆಯಬೇಕಿದೆ.
ಓನಿಲ್ ಅವರ ಪ್ರಸ್ತಾವಿತ ಚಲನಚಿತ್ರ ಮೇಜರ್ ಜೆ ಸುರೇಶ್ ಅವರ ಜೀವನಾಧಾರಿತವಾಗಿತ್ತು. ಅವರು ತಾವು ಸಲಿಂಗಿಯೆಂಬ ಕಾರಣಕ್ಕೆ ಸೇನೆ ತೊರೆಯಬೇಕಾಗಿ ಬಂದಿತ್ತು. ಸುಪ್ರೀಂ ಕೋರ್ಟ್ 2018ರಲ್ಲಿ ಸಹಮತದ ಸಲಿಂಗಕಾಮವನ್ನು ಅಪರಾಧೀಕರಣದಿಂದ ಮುಕ್ತಗೊಳಿಸಿರುವಾಗ ರಕ್ಷಣಾ ಸಚಿವಾಲಯ ಚಿತ್ರಕ್ಕೆ ಅನುಮತಿ ನಿರಾಕರಿಸಿದ್ದನ್ನು ಓನಿರ್ ಪ್ರಶ್ನಿಸಿದ್ದರು.