ಚಲಿಸುವ ರೈಲಿನ ಮುಂದೆ ಜಿಗಿದು ಹಳಿಯಲ್ಲಿ ಬಿದ್ದಿದ್ದ ಯುವತಿಯನ್ನು ರಕ್ಷಿಸಿದ ಮುಹಮ್ಮದ್‌ ಮೆಹಬೂಬ್‌ !

Update: 2022-02-12 12:18 GMT
Photo: Screengrab from video on Twitter/@thealokputu

ಭೋಪಾಲ್: ಮೂವತ್ತೇಳು ವರ್ಷದ ವ್ಯಕ್ತಿಯೊಬ್ಬ ಚಲಿಸುತ್ತಿರುವ ಗೂಡ್ಸ್ ರೈಲಿನ ಮುಂದೆ ಹಾರಿ ಹಳಿ ಮೇಲೆ ಬಿದ್ದಿದ್ದ ಯುವತಿಯೊಬ್ಬಳನ್ನು ಅಪ್ರತಿಮ ಧೈರ್ಯದಿಂದ ರಕ್ಷಿಸಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ನಡೆದಿದೆ. ಈ ರಕ್ಷಣಾ ಕಾರ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುವತಿಯನ್ನು ರಕ್ಷಿಸಿದ ಆ ವ್ಯಕ್ತಿಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಈ ಘಟನೆ ಫೆಬ್ರವರಿ 5ರಂದು ನಡೆದಿದೆಯೆನ್ನಲಾಗಿದ್ದು ಅದರ ವೀಡಿಯೋ ಈಗ ಹೊರಬಿದ್ದಿದೆ. ಆ ದಿನ ರಾತ್ರಿ ಸುಮಾರು 8 ಗಂಟೆಗೆ ಬರ್ಖೇಡಿ ಸಮೀಪ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಬಡಗಿಯಾಗಿರುವ ಮುಹಮ್ಮದ್ ಮೆಹಬೂಬ್ ಎಂಬವರು ನಮಾಝ್ ಸಲ್ಲಿಸಿ ಮನೆಯತ್ತ ನಡೆಯುತ್ತಿರುವ ವೇಳೆ ಬೆನ್ನಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದ ಯುವತಿಯೊಬ್ಬಳು ರೈಲು ಹಳಿ ದಾಟುತ್ತಿದ್ದಳು. ಆಗ ಎದುರಿನಿಂದ ರೈಲು ಬರುತ್ತಿರುವುದನ್ನು ನೋಡಿ ಭಯಗೊಂಡ ಆಕೆ ಎಡವಿ ಹಳಿ ಮೇಲೆ ಬಿದ್ದಿದ್ದಳು ಹಾಗೂ ಅಲ್ಲಿಂದ ಏಳಲು ಕಷ್ಟಪಟ್ಟಿದ್ದಳು.

ಅಲ್ಲಿದ್ದವರು ಜೋರಾಗಿ ಬೊಬ್ಬೆ ಹೊಡೆಯಲು ಆರಂಭಿಸಿದಾಗ ಮೆಹಬೂಬ್ ಹಿಂದೆ ಮುಂದೆ ಯೋಚಿಸದೆ ಧಾವಿಸಿ ರೈಲು ಹಳಿಗೆ ಹಾರಿದರಲ್ಲದೆ ಯುವತಿಯ ತಲೆಯನ್ನು ಗಟ್ಟಿಯಾಗಿ ಹಿಡಿದು ಆಕೆ ತನ್ನ ತಲೆಯನ್ನು ಮೇಲಕ್ಕೆತ್ತದಂತೆ ಮಾಡಿದ್ದರು. ಆ ಕ್ಷಣ ರೈಲು ಅವರ ಮೇಲಿನಿಂದ ಹಾದು ಹೋಯಿತು.

ರೈಲಿನ ಕನಿಷ್ಠ 28 ವ್ಯಾಗನ್‍ಗಳು ಹಾದು ಹೋದ ನಂತರ ಇಬ್ಬರೂ ಅಲ್ಲಿಂದ ಎದ್ದಿದ್ದರು. ಸಾವಿನ ದವಡೆಯಿಂದ ಕೂದಲೆಳೆಯಿಂದ ಪಾರಾದ ಯುವತಿ ಕಣ್ಣೀರು ಸುರಿಸುತ್ತಾ ಆ ಸಂದರ್ಭ ಹಳಿ ದಾಟದೇ ಇದ್ದ ತಂದೆ ಮತ್ತು ಸಹೋದರನನ್ನು ಬಿಗಿದಪ್ಪಿಕೊಂಡಳಲ್ಲದೆ ತನ್ನನ್ನು ರಕ್ಷಿಸಿದಾತನಿಗೆ ಧನ್ಯವಾದ ತಿಳಿಸಿದಳು.

ಈ ವೀಡಿಯೋ ವೈರಲ್ ಆದಂದಿನಿಂದ ಜನರು ಮೆಹಬೂಬ್‍ನ ಆಯಿಶ್‍ಬಾಗ್ ನಿವಾಸಕ್ಕೆ ಆಗಮಿಸಿ ಆತನ ಕಾರ್ಯವನ್ನು ಕೊಂಡಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News