×
Ad

ಚೀನಾದ ಸೈನಿಕರು ಭಾರತದ ಪ್ರದೇಶಗಳಿಗೆ ನುಗ್ಗಿ ಕುರಿ ಮೇಯಿಸುವವರನ್ನು ಓಡಿಸಿದ್ದರು: ಸ್ಥಳೀಯ ಅಧಿಕಾರಿ

Update: 2022-02-13 17:37 IST
ಸಾಂದರ್ಭಿಕ ಚಿತ್ರ

ಲೇಹ್,ಫೆ.13: ಚೀನಿ ಸೈನಿಕರು ಪದೇ ಪದೇ ಭಾರತದ ಪೂರ್ವ ಲಡಾಖ್ ಪ್ರದೇಶದಲ್ಲಿ ಒಳನುಗ್ಗುತ್ತಲೇ ಇದ್ದಾರೆ. ಜ.28ರಂದು ಲೇಹ್ ಜಿಲ್ಲೆಯ ನ್ಯೊಮಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಒಳನುಗ್ಗಿದ್ದ ಚೀನಿ ಸೈನಿಕರು ಸ್ಥಳೀಯ ಕುರಿಗಾಹಿಗಳು ಅಲ್ಲಿ ತಮ್ಮ ಯಾಕ್ ಗಳನ್ನು ಮೇಯಿಸುತ್ತಿದ್ದನ್ನು ತಡೆದು, ಅಲ್ಲಿಂದ ಓಡಿಸಿದ್ದರು ಎಂದು ಸ್ಥಳೀಯ ಅಧಿಕಾರಿಯೋರ್ವರು ಆರೋಪಿಸಿದ್ದಾರೆ.

 ‘ಜ.28ರಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ)ಯ ಸೈನಿಕರು ನಮ್ಮ ಪ್ರದೇಶದಲ್ಲಿ ನುಗ್ಗಿ ಬಂದಿದ್ದರು ಮತ್ತು ನಮ್ಮದೇ ಭೂಪ್ರದೇಶದಲ್ಲಿ ಮೇಯುತ್ತಿದ್ದ ಯಾಕ್ಗಳನ್ನು ಓಡಿಸಿದ್ದರು. ಅವರು ಯಾರನ್ನೂ ತಮ್ಮಿಂದಿಗೆ ಕರೆದೊಯ್ದಿರಲಿಲ್ಲ,ಆದರೆ ಅಲೆಮಾರಿಗಳು ಮತ್ತು ಯಾಕ್ ಗಳ ಹಿಂಡುಗಳನ್ನು ಓಡಿಸಿದ್ದರು’ ಎಂದು ಬ್ಲಾಕ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಉರ್ಗೇನ್ ಚೋಡನ್ ಸುದ್ದಿಗಾರರಿಗೆ ತಿಳಿಸಿದರು.

ಡಾಗ್ಬಕ್ ಎಂದು ಕರೆಯಲಾಗುವ ಜಾನುವಾರುಗಳು ಮೇಯುವ ಪ್ರದೇಶದಲ್ಲಿ ನಡೆದಿದ್ದ ಈ ಘಟನೆಯ 45 ಸೆಕೆಂಡ್ ಗಳ ವೀಡಿಯೋವನ್ನೂ ಚೋಡನ್ ಶುಕ್ರವಾರ ಟ್ವೀಟಿಸಿದ್ದಾರೆ.
ಇದೊಂದು ಹಳೆಯ ವೀಡಿಯೊ ಆಗಿರುವಂತೆ ಕಂಡು ಬರುತ್ತಿದೆ. ಬೇಸಿಗೆ ಋತುವಿನಲ್ಲಿ ಚಿತ್ರೀಕರಿಸಿದಂತಿದ್ದು,ಹಿಮ ಕಂಡು ಬರುತ್ತಿಲ್ಲ ಎಂದು ರಕ್ಷಣಾ ಮೂಲಗಳು ಹೇಳಿವೆ.
ಮಾಜಿ ಬಿಜೆಪಿ ಕೌನ್ಸಿಲರ್ ಆಗಿರುವ ಚೋಡನ್,‘ಏನು ನಡೆದಿತ್ತೋ ಅದನ್ನೇ ನಾನು ಟ್ವೀಟಿಸಿದ್ದೇನೆ ’ಎಂದು ಪ್ರತಿಪಾದಿಸಿದರು.

 ‘ಜ.28ರಂದು ಚೀನಿ ಸೈನಿಕರು ನಮ್ಮ ಪ್ರದೇಶದಲ್ಲಿ ನುಗ್ಗಿ ನಮ್ಮದೇ ಪ್ರದೇಶದಲ್ಲಿ ನಮ್ಮ ಯಾಕ್ಗಳನ್ನು ಮೇಯಿಸುವುದನ್ನು ತಡೆದಿದ್ದರು ಮತ್ತು ಆ ಸಮಯದಲ್ಲಿ ನಮ್ಮ ಭದ್ರತಾ ಪಡೆಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಮ್ಮ ಕುರಿಗಾಹಿಯೋರ್ವ ತನ್ನ ಯಾಕ್ಗಳನ್ನು ಮರಳಿ ತರಲು ಗಡಿಯನ್ನು ದಾಟಿದ್ದ ಮತ್ತು ಮರಳಿ ಬರುತ್ತಿದ್ದಾಗ ನಮ್ಮದೇ ಭೂಪ್ರದೇಶದಲ್ಲಿ ಆತನನ್ನು ಹಿಡಿದಿದ್ದ ಭಾರತೀಯ ಸೇನೆಯು ವಿಚಾರಣೆಗೊಳಪಡಿಸಿ ಪೊಲೀಸ್ ಠಾಣೆಗೊಪ್ಪಿಸಿತ್ತು’ ಎಂಬ ಬರಹವನ್ನೂ ಚೋಡನ್ ವೀಡಿಯೊದೊಂದಿಗೆ ಪೋಸ್ಟ್ ಮಾಡಿದ್ದಾರೆ.

ತನ್ನ ಟ್ವೀಟ್ನಲ್ಲಿ ಪ್ರಸ್ತಾಪಿಸಿರುವ ಎರಡನೇ ಘಟನೆಯು ಜ.26ರಂದು ಚಾಂಗ್ಲಮ್ ಪ್ರದೇಶದಲ್ಲಿ ನಡೆದಿತ್ತು ಎಂದ ಅವರು,‘ಸ್ಥಳೀಯ ಅಲೆಮಾರಿಯೋರ್ವ ತನ್ನ 17 ಯಾಕ್ಗಳನ್ನು ಮರಳಿ ತರಲು ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ್ದ. ಆತ ಮರಳುತ್ತಿದ್ದಾಗ ಸೇನೆಯು ಆತನನ್ನು ಹಿಡಿದು ನ್ಯೊಮಾ ಪೊಲೀಸರಿಗೆ ಒಪ್ಪಿಸಿತ್ತು. ಆತನನ್ನು ಬಿಡಿಸಿಕೊಂಡು ಬರಲು ನಾನೇ ಸ್ವತಃ ನ್ಯೊಮಾ ಪೊಲೀಸ್ ಠಾಣೆಗೆ ತೆರಳಿದ್ದೆ. ಆತ ನಮ್ಮದೇ ಅಲೆಮಾರಿ ಎಂದು ಐಬಿ ಅಧಿಕಾರಿಗಳು ತಿಳಿಸಿದ್ದರೂ ಸೇನೆಯು ಅದನ್ನು ನಂಬಿರಲಿಲ್ಲ ಮತ್ತು ಆತನನ್ನು ಠಾಣೆಗೊಪ್ಪಿಸಿತ್ತು ಎಂದರು.

ಇಂತಹ ಘಟನೆ ನಡೆದಿದ್ದನ್ನು ರಕ್ಷಣಾ ಮೂಲಗಳು ದೃಢಪಡಿಸಿವೆಯಾದರೂ ಆತನೊಂದಿಗೆ ಯಾಕ್ ಗಳು ಇದ್ದಿರಲಿಲ್ಲ ಎಂದು ಹೇಳಿವೆ. ಆತನ ಹೇಳಿಕೆಯು ಶಂಕಾಸ್ಪದವಾಗಿತ್ತು,ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆಯು ಆತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿತ್ತು ಎಂದು ಅವು ತಿಳಿಸಿವೆ.

ಈ ಘಟನೆಯ ಕುರಿತೂ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಚೋಡನ್,ಶುಕ್ರವಾರ ತನ್ನ ಎರಡನೇ ಟ್ವೀಟ್ನಲ್ಲಿ ‘ಗಡಿ ಭದ್ರತೆ ಮತ್ತು ಅಭಿವೃದ್ಧಿ ವಿಷಯದಲ್ಲಿ ನಮ್ಮ ಸರಕಾರವು ಯಾವಾಗಲೂ ಬಲವಾದ ನಿಲುವನ್ನು ತೆಗೆದುಕೊಂಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ನಾನು ಸರಕಾರವನ್ನು ಕೋರುತ್ತೇನೆ ’ಎಂದಿದ್ದಾರೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸರಕಾರವು ಪ್ರದೇಶದ ಗಡಿಯಲ್ಲಿ ಬೇಲಿಯನ್ನು ಅಳವಡಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News