×
Ad

ಮದ್ಯವ್ಯಸನಿಗಳ ಮಕ್ಕಳಲ್ಲಿ ಭಯ, ಕೀಳರಿಮೆ ಹೆಚ್ಚಳ: ನ್ಯಾ.ಶರ್ಮಿಳಾ

Update: 2022-02-13 22:04 IST

ಉಡುಪಿ, ಫೆ.13: ಮದ್ಯಪಾನ ವ್ಯಸನದ ಪರಿಣಾಮದಿಂದ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ತಲೆದೋರಿ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಮಕ್ಕಳಲ್ಲಿ ಭಯ, ಆತಂಕ, ಕೀಳರಿಮೆ ಕೂಡ ಉಂಟಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದ್ದಾರೆ.

ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಮಣಿಪಾಲ, ರೋಟರಾಕ್ಟ್ ಕ್ಲಬ್ ಮಣಿಪಾಲ, ರೋಟರಾಕ್ಟ್ ಕ್ಲಬ್ಸ್ ಆಫ್ ಮಣಿಪಾಲ, ಐಎಂಎ ಉಡುಪಿ ಕರಾವಳಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಉಡುಪಿ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮದ್ಯಪಾನದಿಂದ ದೂರ ಇರುವ ಮೂಲಕ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಆರ್ಥಿಕವಾಗಿ ಸಬಲರಾಗಿ, ಸಮಾಜದಲ್ಲಿ ಗೌರವಯುತನಾಗಿ ಬದುಕು ನಡೆಸಬಹುದಾಗಿದೆ. ಮದ್ಯ ವ್ಯಸನಿಗಳ ಮಕ್ಕಳಲ್ಲಿನ ಕೀಳರಿಮೆಯನ್ನು ದೂರ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಎ.ವಿ.ಬಾಳಿಗಾ ಸ್ಮಾರಕ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮದ್ಯ ವ್ಯಸನದ ದುಷ್ಪಾರಿಣಾಮವಾಗಿ ಕಲಾ ವಿದರು ರಚಿಸಿದ ಕಲಾಕೃತಿಗಳನ್ನು ಅನಾವರಣಗೊಳಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.

ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರೊ.ಶಂಕರ್, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ವಿನಾಯಕ ಶೆಣೈ, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಮನೋ ವೈದ್ಯ ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ದರ್ಶಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News