ಏಳು ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ ಹಣದುಬ್ಬರ

Update: 2022-02-15 02:14 GMT

ಹೊಸದಿಲ್ಲಿ: ಆಹಾರ ಮತ್ತು ಪಾನೀಯಗಳ ಬೆಲೆ ಗಣನೀಯವಾಗಿ ಹೆಚ್ಚಿರುವುದರಿಂದ ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇಕಡ 6ನ್ನು ತಲುಪಿದೆ. ಇದು ಏಳು ತಿಂಗಳಲ್ಲೇ ಗರಿಷ್ಠ. ಆದರೆ ಸಗಟು ಹಣದುಬ್ಬರ ಅಲ್ಪವಾಗಿ ಕುಸಿದಿದ್ದರೂ, ಸತತ 10ನೇ ತಿಂಗಳು ಕೂಡಾ ಎರಡಂಕಿಯಲ್ಲೇ ಮುಂದುವರಿದಿದೆ.

ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ಶೇಕಡ 6ರ ಚಿಲ್ಲರೆ ಹಣದುಬ್ಬರ ಅಚ್ಚರಿ ಅಥವಾ ಎಚ್ಚರಿಕೆಯ ಸಂದೇಶವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಹಣದುಬ್ಬರ ಅಂಕಿ ಅಂಶವನ್ನು ಅಂತಿಮಪಡಿಸುವಾಗ ತೈಲ ಬೆಲೆಯ ಸಂಭಾವ್ಯ ಚಿತ್ರಣವನ್ನು ಆರ್‌ಬಿಐ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು. ಉಕ್ರೇನ್ ಸಂಘರ್ಷದ ಕಾರಣದಿಂದ ಜಾಗತಿಕ ತೈಲಬೆಲೆ ಮತ್ತಷ್ಟು ಕಠಿಣವಾಗುತ್ತಿರುವ ಅಂಶವನ್ನು ಕೂಡಾ ಬೆಲೆ ಒತ್ತಡದ ಅನಿಶ್ಚಿತ ಅಂಶವಾಗಿ ಪರಿಗಣಿಸಲಾಗಿದೆ ಎಂದು ವಿವರಿಸಿದ್ದಾರೆ.

"ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರ ಅಂದಾಜು ಉತ್ತಮವಾಗಿದೆ ಹಾಗೂ ಅದನ್ನು ನಾವು ಸಮರ್ಥಿಸುತ್ತೇವೆ. ಈ ಹೆಚ್ಚಳ ಸಾಧ್ಯತೆಗೆ ಪ್ರಮುಖವಾಗಿ ಕಚ್ಚಾತೈಲದ ಬೆಲೆ ಕಾರಣ ಎಂದು ನಾವು ಸ್ಪಷ್ಟಪಡಿಸಿದ್ದೇವೆ" ಎಂದು ಕೇಂದ್ರೀಯ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯ ಬಳಿಕ ಪತ್ರಕರ್ತರಿಗೆ ವಿವರಿಸಿದರು.

"ಬೆಲೆ ಸ್ಥಿರತೆ ನಿಶ್ಚಿತವಾಗಿಯೂ ಪ್ರಮುಖ ಆದ್ಯತೆ. ಆದರೆ ವಾಸ್ತವವಾಗಿ ಬೆಲೆ ಸ್ಥಿರತೆ ಎಂದರೆ ಹಣದುಬ್ಬರ ಗುರಿಗೆ ಬದ್ಧವಾಗಿ ಇರುವುದು" ಎಂದು ದಾಸ್ ವಿಶ್ಲೇಷಿಸಿದರು. ಭಾರತದಲ್ಲಿ ಬಳಸುವ ಹಣದುಬ್ಬರ ಅಂಶಗಳು ಮತ್ತು ಮಾನದಂಡಗಳು ವಿದೇಶಗಳಲ್ಲಿ ಬಳಸುವ ಮಾನದಂಡ ಹಾಗೂ ಅಂಶಗಳಿಗಿಂತ ಭಿನ್ನ ಎಂದು ಆರ್‌ಬಿಐ ಉಪ ಗವರ್ನರ್ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News