ಕಳೆದ 4 ವರ್ಷಗಳಲ್ಲಿ ತ್ರಿಪುರಾದಲ್ಲಿ ಹಲವು ಸಿಪಿಎಂ ಕಾರ್ಯಕರ್ತರ ಹತ್ಯೆ: ಮಾಣಿಕ್ ಸರ್ಕಾರ್ ಆರೋಪ
ಅಗರ್ತಲಾ, ಫೆ. 15: ತ್ರಿಪುರಾದಲ್ಲಿ ಕಳೆದ ನಾಲ್ಕು ವರ್ಷಗಳ ಬಿಜೆಪಿ-ಐಪಿಎಫ್ಟಿಯ ಆಡಳಿತಾವಧಿಯಲ್ಲಿ ಹಲವು ಸಿಪಿಐ (ಎಂ) ನಾಯಕರ ಹಾಗೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ತ್ರಿಪುರಾ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ. ‘‘ಕಳೆದ ನಾಲ್ಕು ವರ್ಷಗಳಲ್ಲಿ 24ಕ್ಕೂ ಅಧಿಕ ಸಿಪಿಐ (ಎಂ) ನಾಯಕರು ಹಾಗೂ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಯಾರೊಬ್ಬರಿಗೂ ನ್ಯಾಯ ದೊರಕಿಲ್ಲ’’ ಎಂದು ದಕ್ಷಿಣ ತ್ರಿಪುರಾ ಜಿಲ್ಲೆಯ ಕಮಲಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಸರ್ಕಾರ್ ಹೇಳಿದರು.
ಆದರೆ, 2018ರ ವಿಧಾನಸಭೆ ಚುನಾವಣೆಯ ಬಳಿಕ ತ್ರಿಪುರಾದಲ್ಲಿ ರಾಜಕೀಯ ಹತ್ಯೆ ನಡೆದಿದೆ ಎಂಬ ಆರೋಪವನ್ನು ಆಡಳಿತಾರೂಡ ಬಿಜೆಪಿ-ಐಪಿಎಫ್ಟಿ ನಿರಾಕರಿಸಿದೆ. ‘‘ಇದೇ ಮೊದಲು ಇಂತಹ ಆರೋಪ ಕೇಳಿ ಬರುತ್ತಿದೆ. 2018ರ ವಿಧಾನ ಸಭೆ ಚುನಾವಣೆ ಬಳಿಕ ಯಾವುದೇ ರಾಜಕೀಯ ಹತ್ಯೆ ನಡೆದಿಲ್ಲ. ಈ ಹಿಂದೆ ನಾವು ಚುನಾವಣೋತ್ತರ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದೆವು’’ ಎಂದು ಬಿಜೆಪಿ ವಕ್ತಾರ ನಬೇಂದು ಭಟ್ಟಾಚಾರ್ಜಿ ಹೇಳಿದ್ದಾರೆ.
ಬಿಜೆಪಿ-ಐಪಿಎಫ್ಟಿ ಸರಕಾರವನ್ನು ಕಟುವಾಗಿ ಟೀಕಿಸಿದ ಮಾಣಿಕ್ ಸರ್ಕಾರ್, ರಾಜ್ಯದಲ್ಲಿ ಪಕ್ಷಪಾತಿ ಸರಕಾರ ಅಸ್ತಿತ್ವದಲ್ಲಿದೆ. ಜನರ ಧ್ವನಿಯನ್ನು ನಿಗ್ರಹಿಸಲಾಗುತ್ತಿದೆ. ಚುನಾವಣೆ ಮುಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. 2018 ವಿಧಾನ ಸಭೆ ಚುನಾವಣೆ ಮುನ್ನ ಮೂರ್ಖರಾಗಿದ್ದ ಜನರಿಗೆ ಈಗ ತಾವು ದೊಡ್ಡ ತಪ್ಪು ಮಾಡಿರುವುದು ಅರಿವಾಗುತ್ತಿದೆ ಎಂದು ಅವರು ತಿಳಿಸಿದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಿಜೆಪಿ ಶಾಸಕರು ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿದ್ದಾರೆ. ಈಗ ಅವರು ಬಿಜೆಪಿ ಸೇರಿದ್ದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸುದೀಪ್ ರಾಯ್ ಬರ್ಮನ್ ಹಾಗೂ ಆಶಿಶ್ ಶಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾಣಿಕ್ ಸರ್ಕಾರ್ ಹೇಳಿದರು.