ದಿಲೀಪ್ ಮನವಿಯ ಇತ್ಯರ್ಥದ ವೇಳೆ ತನ್ನ ಅಹವಾಲು ಆಲಿಸುವಂತೆ ಕೇರಳ ಹೈಕೋರ್ಟ್ ಸಂತ್ರಸ್ತೆಯ ಮನವಿ

Update: 2022-02-15 16:45 GMT
ದಿಲೀಪ್

ಕೊಚ್ಚಿ,ಫೆ.15: ಪೊಲೀಸರು ಇನ್ನಷ್ಟು ತನಿಖೆ ನಡೆಸುವುದನ್ನು ಪ್ರಶ್ನಿಸಿ ಮಲಯಾಳಂ ನಟ ದಿಲೀಪ ಸಲ್ಲಿಸಿರುವ ಅರ್ಜಿಯನ್ನು ಇತ್ಯರ್ಥಗೊಳಿಸುವಾಗ ತನ್ನ ಅಹವಾಲನ್ನು ಆಲಿಸುವಂತೆ 2017ರ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಮಂಗಳವಾರ ಕೇರಳ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ದಿಲೀಪ್ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿದ್ದಾರೆ.

‌ದಿಲೀಪ್ ಅರ್ಜಿ ವಿಚಾರಣೆಗೆ ಬಂದಾಗ ಸಂತ್ರಸ್ತೆಯ ಪರ ಹಿರಿಯ ವಕೀಲ ಎಸ್.ಶ್ರೀಕುಮಾರ್ ಅವರು,‌ ಪ್ರಕರಣದಲ್ಲಿ ತನ್ನನ್ನೂ ಸೇರಿಸಿಕೊಳ್ಳುವಂತೆ ತನ್ನ ಕಕ್ಷಿದಾರರು ಬಯಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಈ ಮನವಿಯ ಬಳಿಕ ನ್ಯಾಯಾಲಯವು ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿತು.

ನವಂಬರ್,2017ರಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ,ಜನವರಿ 2020ರಲ್ಲಿ ಆರೋಪಗಳನ್ನು ರೂಪಿಸಲಾಗಿದೆ ಮತ್ತು ಕೇವಲ ಓರ್ವ ಸಾಕ್ಷಿ (ತನಿಖಾಧಿಕಾರಿ)ಯ ವಿಚಾರಣೆ ಮಾತ್ರ ಬಾಕಿಯಿದೆ. ಹೀಗಿರುವಾಗ ಪ್ರಕರಣದಲ್ಲಿ ಇನ್ನಷ್ಟು ತನಿಖೆ ಅಂಗೀಕಾರಾರ್ಹವಲ್ಲ ಎಂದು ಅರ್ಜಿಯಲ್ಲಿ ವಾದಿಸಿರುವ ದಿಲೀಪ್, ಕ್ರೈಂ ಬ್ರಾಂಚ್ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಿಸಿರುವ ಹೊಸ ಬೆಳವಣಿಗೆಗಳ ಆಧಾರದಲ್ಲಿ ಇನ್ನಷ್ಟು ತನಿಖೆಯ ಕುರಿತು ವರದಿಯನ್ನು ರದ್ದುಗೊಳಿಸುವಂತೆಯೂ ಕೋರಿದ್ದಾರೆ.

ಈಗಾಗಲೇ ವಿಚಾರಣೆಯ ಅಂತಿಮ ಹಂತದಲ್ಲಿರುವ ಪ್ರಕರಣದಲ್ಲಿ ಚಿತ್ರ ನಿರ್ದೇಶಕ ಪಿ.ಬಾಲಚಂದ್ರಕುಮಾರ್ ಅವರು ದಿಲೀಪ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದ ಬಳಿಕ ಇನ್ನಷ್ಟು ತನಿಖೆ ಆರಂಭಗೊಂಡಿತ್ತು. ಮುಂದಿನ ತನಿಖೆಯು ಕಾನೂನುಬಾಹಿರವಾಗಿದೆ ಎಂದು ಘೋಷಿಸುವಂತೆ ಮತ್ತು ವಿಚಾರಣೆಯನ್ನು ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶ ನೀಡುವಂತೆ ದಿಲೀಪ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News