ಬಿಹಾರ: ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸಗೈದ ಕಿಡಿಗೇಡಿಗಳು
ಮೋತಿಹಾರಿ (ಬಿಹಾರ್), ಫೆ. 15: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಮಂಗಳವಾರ ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ‘‘ಈ ಬಗ್ಗೆ ಕೆಲವು ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡವೊಂದನ್ನು ರೂಪಿಸಿದ್ದಾರೆ. ಸ್ಥಳದಲ್ಲಿ ಹೋಮ್ ಗಾರ್ಡ್ ಅನ್ನು ಇಲ್ಲಿ ನಿಯೋಜಿಸಲಾಗಿದೆ’’ ಎಂದು ಪೂರ್ವ ಚಂಪಾರಣ್ನ ಪೊಲೀಸ್ ಅಧೀಕ್ಷಕ ಕುಮಾರ್ ಆಶಿಶ್ ತಿಳಿಸಿದ್ದಾರೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಚಟುವಟಿಕೆ ಅಡಿಯಲ್ಲಿ ಚರ್ಕಾ ಪಾರ್ಕ್ನಲ್ಲಿ ಪವರ್ ಗ್ರಿಡ್ ಕಾರ್ಪೋರೇಶನ್ ಮಹಾತ್ಮಾ ಗಾಂಧಿ ಅವರು ಪ್ರತಿಮೆಯನ್ನು ಸ್ಥಾಪಿಸಿತ್ತು ಎಂದು ಪೂರ್ವ ಚಂಪಾರಣ್ ಜಿಲ್ಲೆಯ ದಂಡಾಧಿಕಾರಿ ಶಿರ್ಸಾತ್ ಕಪಿಲ್ ಅಶೋಕ್ ಅವರು ತಿಳಿಸಿದ್ದಾರೆ.
ಈ ಸ್ಥಳವನ್ನು ಆಡಳಿತಕ್ಕೆ ಔಪಚಾರಿಕವಾಗಿ ಹಸ್ತಾಂತರಿಸಿಲ್ಲ. ಆದುದರಿಂದ ಇಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಲ್ಲ ಯಾಕೆ ಎಂದು ನಾವು ಪ್ರಶ್ನಿಸಲಿದ್ದೇವೆ ಎಂದು ಕಪಿಲ್ ಅಶೋಕ್ ಹೇಳಿದ್ದಾರೆ.