ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

Update: 2022-02-16 16:36 GMT

ಹೊಸದಿಲ್ಲಿ, ಫೆ. 16: ನಗರದ ತುಗ್ಲಕ್ ರಸ್ತೆ ಪ್ರದೇಶದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿವಾಸ ಪ್ರವೇಶಿಸಲು ಪ್ರಯತ್ನಿಸಿದ ಆರೋಪದಲ್ಲಿ 43 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ತೆಗೆದುಕೊಂಡ ವ್ಯಕ್ತಿಯನ್ನು ಬೆಂಗಳೂರು ನಿವಾಸಿ ಶಂತನು ರೆಡ್ಡಿ ಎಂದು ಗುರುತಿಸಲಾಗಿದೆ. ವಶಕ್ಕೆ ತೆಗೆದುಕೊಂಡ ಕೂಡಲೇ ಆತ ತಾನು ಚಿಪ್ ಧರಿಸಿದ್ದೇನೆ. ತನ್ನನ್ನು ಹೊರಗಿನಿಂದ ಕೆಲವರು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿದ್ದಾನೆ. 

ಚಿಪ್ ನ ಕಾರಣಕ್ಕೆ ತಾನು ದೋವಲ್ ಅವರ ನಿವಾಸ ಪ್ರವೇಶಿಸಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾನೆ. ಆದರೆ, ಆತನಲ್ಲಿ ಯಾವುದೇ ಎಲೆಕ್ಟ್ರಾನಿಕ್ಸ್ ಚಿಪ್ ಪತ್ತೆಯಾಗಿಲ್ಲ. ದಿಲ್ಲಿ ಪೊಲೀಸ್ ವಿಶೇಷ ಘಟಕ ಆತನ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

‘‘ಆತ ಭ್ರಮೆ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ವಿಚಾರಣೆ ವೇಳೆ ಆತ ಭಿನ್ನ ಹೇಳಿಕೆಗಳನ್ನು ನೀಡಿದ್ದಾನೆ. ಆತನ ಹೇಳಿಕೆಗೆ ಪರಸ್ಪರ ಯಾವುದೇ ಸಂಬಂಧ ಇಲ್ಲ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ 7.30ಕ್ಕೆ ಸಂಭವಿಸಿದೆ. ಆತ ತುಘ್ಲಕ್ ರಸ್ತೆ ಪ್ರದೇಶದಲ್ಲಿರುವ ಅಜಿತ್ ದೋವಲ್ ಅವರ ನಿವಾಸ ಪ್ರವೇಶಿಸಲು ಪ್ರಯತ್ನಿಸಿದ್ದ. ಆದರೆ, ಭದ್ರತಾ ಸಿಬ್ಬಂದಿ ಆತನನ್ನು ಗೇಟಿನಲ್ಲಿ ತಡೆದರು. ಆತ ತಾನು ಆಗಮಿಸಿದ ಕೆಂಪು ಎಸ್ಯುವಿ ಕಾರಿನಿಂದ ಢಿಕ್ಕಿ ಹೊಡೆಸಿ ಗೇಟು ಮುರಿದು ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದ. 

ಕಾರನ್ನು ನೋಯ್ಡದಿಂದ ಬಾಡಿಗೆ ಪಡೆದಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ದಿಲ್ಲಿ ಪೊಲೀಸ್ ನ ವಿಶೇಷ ಘಟಕದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದರು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದ ಬೆಂಗಳೂರು ಮೂಲದ ಈ ವ್ಯಕ್ತಿ ಫೆಬ್ರವರಿ 13ರಂದು ದಿಲ್ಲಿಗೆ ಆಗಮಿಸಿದ್ದ. ಈ ಘಟನೆಯ ಹಿನ್ನೆಲೆಯಲ್ಲಿ ದೋವಲ್ ನಿವಾಸದ ಹೊರಭಾಗದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಈ ಬಗ್ಗೆ ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ. ಅಜಿತ್ ದೋವಲ್ ಅವರಿಗೆ ಝಡ್ ಪ್ಲಸ್ ಭದ್ರತೆ ಹಾಗೂ ಅವರ ನಿವಾಸಕ್ಕೆ ಸಿಐಎಸ್ಎಫ್ (ಕೇಂದ್ರ ಕೈಗಾರಿಕೆ ಭದ್ರತಾ ಪಡೆ) ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News