×
Ad

ಯಶಸ್ವಿ ಮಾಡೆಲ್‌ ಆಗಿ ಬದಲಾದ 60 ವರ್ಷದ ಕೂಲಿ ಕಾರ್ಮಿಕ ಮಮ್ಮಿಕ್ಕಾ; ವಿಡಿಯೋ ವೈರಲ್

Update: 2022-02-16 14:00 IST

60ರ ಹರೆಯದ ಬಳಿಕ ಹೊಸ ವೃತ್ತಿ ಜೀವನ ಪ್ರಾರಂಭಿಸುವುದು ಬಹುತೇಕರ ಪಾಲಿಗೆ ಅಸಾಧ್ಯದ ಕೆಲಸ. ಆದರೆ, ಕೇರಳದ ಮಮ್ಮಿಕ್ಕಾ ಅವರ ಬದುಕಿನಲ್ಲಿ ಇದು ನಿಜವಾಗಿದೆ. ತಮ್ಮ 60 ನೇ ಹರೆಯದಲ್ಲಿ ಮಮ್ಮಿಕ್ಕಾ ಹೊಸ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ ಮಾತ್ರವಲ್ಲ, ಅದರಲ್ಲೂ ಯಶಸ್ವಿಯೂ ಆಗಿ ಗಮನ ಸೆಳೆಯುತ್ತಿದ್ದಾರೆ. 
 
ಮಮ್ಮಿಕ್ಕಾರ ಬದುಕಿನಲ್ಲಿ ಈ ಅದ್ಭುತ ನಡೆದಿದ್ದು ತೀರಾ ಅನಿರೀಕ್ಷಿತವಾಗಿ. ದಿನಗೂಲಿ ಕಾರ್ಮಿಕರಾಗಿದ್ದ ಮಮ್ಮಿಕ್ಕಾ ಒಂದು ದಿನ ತಮ್ಮ ಮನೆಗೆ ಮರಳುತ್ತಿದ್ದಾಗ ಹವ್ಯಾಸಿ ಫೊಟೋಗ್ರಾಫರ್‌ ಶರೀಕ್‌ ವಯಲಿಲ್‌ ಮಮ್ಮಿಕಾರ ಫೋಟೋ ಒಂದು ಕ್ಲಿಕ್‌ ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಆ ಫೋಟೊ ಹಂಚಿದೊಡನೆಯೇ ಅದು ಟ್ರೆಂಡ್‌ ಆಗಿಬಿಡುತ್ತದೆ. ಮಮ್ಮಿಕಾರನ್ನು ಕಂಡ ನೆಟ್ಟಿಗರು ಮಳೆಯಾಲಂ ಖ್ಯಾತ ನಟ ವಿನಾಯಕನ್‌ ಜೊತೆ ಮಮ್ಮಿಕಾರನ್ನು ಹೋಲಿಸುತ್ತಾರೆ. 

ಸಾಮಾಜಿಕ ಜಾಲತಾಣದಲ್ಲಿ ಮಮ್ಮಿಕಾ ಫೋಟೋ ವೈರಲ್‌ ಆಗುತ್ತಿದ್ದಂತೆ, ಶರೀಕ್‌ ಮಮ್ಮಿಕಾರನ್ನು ಮತ್ತೆ ಭೇಟಿಯಾಗುತ್ತಾರೆ. ಮದುವೆ ವಸ್ತ್ರಗಳ ಜಾಹಿರಾತಿಗೆ ಮಾಡೆಲ್‌ ಆಗುವಂತೆ ಒಪ್ಪಿಸುತ್ತಾರೆ. ಇಲ್ಲಿಂದ ಮಮ್ಮಿಕಾ ಅವರ ದೆಸೆ ನಿಜಕ್ಕೂ ತಿರುಗುತ್ತದೆ. ಮಮ್ಮಿಕಾ ಅವರನ್ನು ಫೋಟೋಶೂಟ್‌ಗೆ ತಯಾರುಗೊಳಿಸಿ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಲಾಗುತ್ತದೆ. ಈ ಪೋಟೋಗಳೇ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. 

ಈ ಕುರಿತು indianexpress.com ಜೊತೆ ಮಾತನಾಡಿದ ಶರೀಕ್‌ ವಯಲಿಲ್‌, ತಾನು ನಿರೀಕ್ಷಿಸಿರುವುದಕ್ಕಿಂತ ವ್ಯಾಪಕವಾಗಿ ಮಮ್ಮಿಕಾ ಅವರ ವಿಡಿಯೋ ವೈರಲ್‌ ಆಗಿದೆ. ವಿದೇಶಗಳಿಂದಲೂ ಕರೆ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ಮಮ್ಮಿಕಾ ಅವರಿಗಿಂತ ಉತ್ತಮ ಮಾಡೆಲ್‌ ಬೇರೆ ಸಿಗಲು ಸಾಧ್ಯವಿಲ್ಲ ಎಂದು ನನಗನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿರುವ ಮಮ್ಮಿಕಾ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳಾದ Khaleej Times, Gulf News ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News